ಡಾ.ಸಿ.ಎನ್.ಮಂಜಪ್ಪ ಸೇರಿ 35 ಮಂದಿ ವಿರುದ್ಧ ಎಫ್‌ಐಆರ್ ದಾಖಲು

KannadaprabhaNewsNetwork |  
Published : Jul 06, 2025, 11:48 PM ISTUpdated : Jul 07, 2025, 09:46 AM IST
ಡಾ.ಸಿ.ಎನ್.ಮಂಜಪ್ಪ ಸೇರಿ 35 ಮಂದಿ ವಿರುದ್ಧ ಎಫ್‌ಐಆರ್ ದಾಖಲು | Kannada Prabha

ಸಾರಾಂಶ

ವೈದ್ಯಕೀಯ ಕಾಲೇಜುಗಳಿಗೆ ಅನುಕೂಲಕರ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಧ್ಯಾಪಕ ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಸಿ.ಎನ್.ಮಂಜಪ್ಪ ಸೇರಿದಂತೆ ದೇಶದ 35 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.

  ಮಂಡ್ಯ :  ವೈದ್ಯಕೀಯ ಕಾಲೇಜುಗಳಿಗೆ ಅನುಕೂಲಕರ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಧ್ಯಾಪಕ ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಸಿ.ಎನ್.ಮಂಜಪ್ಪ ಸೇರಿದಂತೆ ದೇಶದ 35 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. 

ಕಳಪೆ ಮಟ್ಟದ ವೈದ್ಯಕೀಯ ಕಾಲೇಜುಗಳಿಗೆ ಅಕ್ರಮ ಅನುಮೋದನೆಗಳನ್ನು ಪಡೆಯಲು ನಕಲಿ ಅಧ್ಯಾಪಕರು, ಸುಳ್ಳು ತನಿಖೆಗಳು ಮತ್ತು ಗೌಪ್ಯ ಸೂಕ್ಷ್ಮ ಮಾಹಿತಿಗಳ ಸೋರಿಕೆ ಮಾಡಿ ಕೋಟ್ಯಂತರ ರು. ಹವಾಲಾ ಮತ್ತು ಬ್ಯಾಂಕಿಂಗ್ ಮಾರ್ಗಗಳ ಮೂಲಕ ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.

ಛತ್ತೀಸ್‌ಗಢದ ಶ್ರೀರಾಮಪುರ ಸರ್ಕಾರ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಗೆ ನಿಯೋಜಿಸಲಾದ ಎನ್‌ಎಂಪಿ ತಪಾಸಣೆ ತಂಡದಲ್ಲಿ ಮಂಡ್ಯದ ಡಾ.ಮಂಜಪ್ಪ ಅವರಿದ್ದರು. ಈ ಸಂಸ್ಥೆ ಪರವಾಗಿ ವರದಿ ನೀಡಲು ತಂಡವು 55 ಲಕ್ಷ ರು. ಲಂಚ ಪಡೆದಿತ್ತು. ಮಂಜಪ್ಪ ಅವರು ಈ ಹಣವನ್ನು ಪಡೆಯುವಂತೆ ಬೆಂಗಳೂರಿನ ಸತೀಶ್‌ಗೆ ತಿಳಿಸಿದ್ದರು. ಬೆಂಗಳೂರಿನಲ್ಲಿ ಲಂಚದ ಹಣ ಸ್ವೀಕರಿಸುವ ಸಮಯದಲ್ಲೇ ಸಿಬಿಐ ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ.

ವೈದ್ಯಕೀಯ ಕಾಲೇಜುಗಳಿಗೆ ಅನುಕೂಲಕರ ವರದಿ ನೀಡಲು ತಲಾ 55 ಲಕ್ಷ ರು. ಲಂಚ ಪಡೆಯಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ರಾಯ್ ಪುರದ ವೈದ್ಯಕೀಯ ಸಂಸ್ಥೆ ಪ್ರಕರಣದಿಂದ ಆರಂಭವಾದ ತನಿಖೆಯಿಂದ ಛತ್ತೀಸ್‌ಗಢದ ಸ್ವಘೋಷಿತ ದೇವಮಾನವ ರಾವತುರ ಸರ್ಕಾರ್, ಯುಜಿಸಿ ಮಾಜಿ ಅಧ್ಯಕ್ಷ ಹಾಗೂ ಟಿಐಎಸ್‌ಎಸ್‌ ಹಾಲಿ ಕುಲಪತಿ ಡಿ.ಪಿ ಸಿಂಗ್ ಮತ್ತು ರಿಯಲ್‌ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಮಾಜಿ ಅಧ್ಯಕ್ಷ ಸಂಜಯ್ ಶುಕ್ಲಾ, ಇಂದೋರ್‌ನ ಇಂಡೆಕ್ಸ್ ವೈದ್ಯಕೀಯ ಕಾಲೇಜಿನ ಸುರೇಶ್ ಸಿಂಗ್ ಭಡೋರಿಯಾ ಸೇರಿದಂತೆ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಕರ್ನಾಟಕ, ಆಂಧ್ರ ಪ್ರದೇಶದ ಹಿರಿಯ ಆಧಿಕಾರಿಗಳು, ಮಧ್ಯವರ್ತಿಗಳು, ಉನ್ನತ ಶಿಕ್ಷಣ ತಜ್ಞರು ಸಹಿತ 35 ವ್ಯಕ್ತಿಗಳ ವಿರುದ್ಧ ಆರೋಪ ಬಂದಿದ್ದು, ಎಫ್‌ಐಆ‌ರ್ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಅಕ್ರಮ ಮಾನ್ಯತೆ ಪಡೆದಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ, ಹಗರಣದಲ್ಲಿ ಆರೋಗ್ಯ ಸಚಿವಾಲಯದ ಕೆಲವು ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

PREV
Read more Articles on