ಶ್ರೀರಂಗಪಟ್ಟಣ : ಸಿಲಿಂಡರ್ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಗೃಹಪಯೋಗಿ ವಸ್ತುಗಳು ಸುಟ್ಟು, ಮನೆಯಲ್ಲಿದ್ದ ಯುವಕ ಗಾಯಗೊಂಡಿರುವ ಘಟನೆ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸ್ವಾಮಿ ಪುತ್ರ ಗೌತಮ್ ಗಾಯಗೊಂಡರು.
ಮನೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಗ್ಯಾಸ್ ಮುಗಿದ್ದಿದ್ದ ಕಾರಣ ಅದನ್ನು ಬದಲಾಯಿಸಲು ತುಂಬಿದ ಸಿಲಿಂಡರನ್ನು ರೆಗ್ಯುಲೇಟರ್‌ಗೆ ಸೇರಿಸುತ್ತಿದ್ದಂತೆ ಸೋರಿಕೆಯಾಗಿದೆ. ನಂತರ ಬೆಂಕಿ ಕಾಣಿಸಿಕೊಂಡು ಜ್ವಾಲೆ ಜೋರಾಗಿದೆ.
ಗೌತಮ್ ಬೆಂಕಿ ನಂದಿಸಲು ಪ್ರಯತ್ನಿಸಿದ ವೇಳೆ ಮೈ ಕೈ ಕಾಲಿಗೆ ಬೆಂಕಿಯ ಹವೆ ತಗುಲಿದೆ. ಬೆಂಕಿ ಹೆಚ್ಚಾದಂತೆ ಹೊರ ಬಂದಿದ್ದಾನೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಸುಟ್ಟಿದ್ದು, ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಘಟನೆ ಕೆಆರ್ ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಗಿಬೊಮ್ಮನಹಳ್ಳಿ, ಬಂಡೂರಿನ ಮನೆಗಳಲ್ಲಿ ಕಳ್ಳತನ
ಮಳವಳ್ಳಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೇಲ್ಚಾವಣಿ ಹಂಚು ತೆಗೆದು ಒಳನುಗ್ಗಿದ ಕಳ್ಳರು 45 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ರಾಗಿಬೊಮ್ಮನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪುಟ್ಟನಂಜಮ್ಮ ಅವರು ಕೆಲಸಕ್ಕೆ ಹೋಗಿದ್ದ ವೇಳೆ ಒಳನುಗ್ಗಿದ ಕಳರು ಬೀರುವಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ, 5 ಗ್ರಾಂ ತೂಕದ ಉಂಗುರ ಮತ್ತು 22.500 ರು. ನಗದು ದೋಚಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗ ಮುರಿದು ಕಳವು:
ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಬಂಡೂರು ಗ್ರಾಮದ ಗೌರಮ್ಮರ ಮನೆಯಲ್ಲಿ ಯಾರೂ ಇಲ್ಲದೇ ವೇಳೆ ಕಾರಿನಲ್ಲಿ ಬಂದಿದ್ದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗೌರಮ್ಮ ಕೆಲಸಕ್ಕೆ ಹೋಗಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಕಳ್ಳರು ಬೀರುವಿನಲ್ಲಿದ್ದ 22 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಮುತ್ತಿನ ಓಲೆ, 4 ಗ್ರಾಂ ತೂಕದ ಚಿನ್ನದ ಮಾಟಿ ಹಾಗೂ 20 ಸಾವಿರ ರು. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.