ಕೆಲಸದಿಂದ ವಜಾ: ಮುಖ್ಯಮಂತ್ರಿಗಳ ಗಮನ ಸೆಳೆಯಲು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನ..!

KannadaprabhaNewsNetwork | Published : Jan 19, 2024 1:47 AM

ಸಾರಾಂಶ

ಹಾಸನದಲ್ಲಿರುವ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಬೋರೇಗೌಡ ಅವರನ್ನು ಕಾರಣಾಂತರದಿಂದ ಉದ್ಯೋಗದಿಂದ ವಜಾಗೊಳಿಸಲಾಗಿತ್ತು. ಇದರಿಂದ ತನಗೆ ಅನ್ಯಾಯವಾಗಿದ್ದು, ನ್ಯಾಯ ಸಿಗಬೇಕಾದರೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ನಿರ್ಧರಿಸಿ, ಸಿಎಂ ಕ್ಷೇತ್ರದಲ್ಲಿರವ ವರುಣ ಗ್ರಾಮದಲ್ಲಿ ಮೊಬೈಲ್ ಟವರ್ ಅನ್ನು ಗುರುವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಏರಿ ಕುಳಿತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಾಸನದ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ ಕೆಲಸದಿಂದ ವಜಾಗೊಂಡ ನೌಕರನೋಬ್ಬ ಮುಖ್ಯಮಂತ್ರಿಯ ಗಮನ ಸೆಳೆಯಲು ಮೊಬೈಲ್ ಟವರ್ ಏರಿ ಆತ್ಮಹತ್ಯೆಯ ಪ್ರಹಸನ ನಡೆಸಿದ್ದಾರೆ.

ಸತತ ಎಂಟು ಗಂಟೆಗಳ ಕಾಲ ಮೊಬೈಲ್ ಟವರ್ ಏರಿ ಕುಳಿತಿದ್ದ ನೌಕರನನ್ನು ಪೊಲೀಸರು, ಅಗ್ನಿ ಶಾಮಕದ ಸಿಬ್ಬಂದಿಯ ನೆರವಿನೊಂದಿಗೆ ಹರ ಸಾಹಸಪಟ್ಟು ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಕೆ.ಆರ್. ನಗರದ ಸಿದ್ದನ ಕೊಪ್ಪಲಿನ ನಿವಾಸಿ ಬೋರೇಗೌಡ(45) ಮೊಬೈಲ್ ಟವರ್ ಏರಿದ ಮಾಜಿ ನೌಕರ. ಮೈಸೂರು ತಾಲೂಕಿನ ವರುಣ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.

ಹಾಸನದಲ್ಲಿರುವ ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಬೋರೇಗೌಡ ಅವರನ್ನು ಕಾರಣಾಂತರದಿಂದ ಉದ್ಯೋಗದಿಂದ ವಜಾಗೊಳಿಸಲಾಗಿತ್ತು. ಇದರಿಂದ ತನಗೆ ಅನ್ಯಾಯವಾಗಿದ್ದು, ನ್ಯಾಯ ಸಿಗಬೇಕಾದರೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ನಿರ್ಧರಿಸಿ, ಸಿಎಂ ಕ್ಷೇತ್ರದಲ್ಲಿರವ ವರುಣ ಗ್ರಾಮದಲ್ಲಿ ಮೊಬೈಲ್ ಟವರ್ ಅನ್ನು ಗುರುವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಏರಿ ಕುಳಿತಿದ್ದಾರೆ. ಮೊಬೈಲ್ ಟವರ್ ಏರಿ ವ್ಯಕ್ತಿಯೋಬ್ಬ ಕುಳಿತಿರುವುದನ್ನು ಗಮನಿಸಿದ ಸಾರ್ವಜನಿಕರು, ವರುಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ವರುಣ ಪೊಲೀಸರು ಆಗಮಿಸಿ ಕೆಳಗೆ ಇಳಿಸಲು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಯಾರ ಮಾತನ್ನು ಕೇಳದ ಬೋರೇಗೌಡ ಅವರು, ಸಂಜೆಯವರೆಗೂ ಟವರ್ ನಿಂದ ಇಳಿಯಲಿಲ್ಲಘಿ. ಈ ಮಧ್ಯೆ ಬೋರೇಗೌಡ ಅವರು ಕುಟುಂಬದವರು ಸಹ ಬಂದು ಕೆಳಗೆ ಇಳಿಯುವಂತೆ ಕೇಳಿದರೂ ಸಹ ಮತ್ತೆ ಕೆಲಸ ಸಿಗುವ ವರೆಗೂ ಕೆಳಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಶುಗರ್ ಫ್ಯಾಕ್ಟರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಪೊಲೀಸರು ಅವರನ್ನು ಸ್ಥಳಕ್ಕೆ ಬರುವಂತೆ ಮಾಡಿದ್ದಾರೆ. ಸಂಜೆ 6 ಗಂಟೆಯ ಹೊತ್ತಿಗೆ ಸ್ಥಳಕ್ಕೆ ಬಂದ ಕಾರ್ಖಾನೆಯ ಅಧಿಕಾರಿಗಳು, ಕೆಳಗಿಳಿಸಿದರೆ ಉದ್ಯೋಗ ಸಂಬಂಧ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಇವರ ಮಾತನ್ನು ನಂಬಿದ ಬೋರೇಗೌಡ ಅವರು ಟವರ್‌ನಿಂದ ಕೆಳಗೆ ಇಳಿಯಲು ಮುಂದಾಗಿದ್ದುಘಿ, ಅಗ್ನಿ ಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.

ಠಾಣೆಗೆ ಕರೆದೊಯ್ದ ಪೊಲೀಸರು ಬೋರೇಗೌಡರಿಗೆ ಬುದ್ದಿವಾದ ಹೇಳಿ ಇನ್ನೂ ಮುಂದೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್, ಎಎಸ್ಪಿ ಡಾ.ನಂದಿನಿ ಇದ್ದರು.

Share this article