ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮತ್ತು ನನ್ನ ನಡುವೆ ಒಂದು ಬಾರಿ ವ್ಯಾವಹಾರಿಕ ಸಂಬಂಧ ನಡೆದಿದೆ. ಆದರೆ, ಈಗ ಅನ್ನದಾನಿ ನಾನು ಯಾರು ಎಂದು ಮರೆತಿದ್ದಾರೆ
ಮಂಡ್ಯ : ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮತ್ತು ನನ್ನ ನಡುವೆ ಒಂದು ಬಾರಿ ವ್ಯಾವಹಾರಿಕ ಸಂಬಂಧ ನಡೆದಿದೆ. ಆದರೆ, ಈಗ ಅನ್ನದಾನಿ ನಾನು ಯಾರು ಎಂದು ಮರೆತಿದ್ದಾರೆ. ಚುನಾವಣೆಯಲ್ಲಿ ಸೋತ ಡಿಫ್ರೆಷನ್‌ನಲ್ಲಿ ನನ್ನನ್ನು ಅವರು ಮರೆತಿರಬಹುದು ಎಂದು ಹಣ, ಚಿನ್ನಾಭರಣ ವಂಚನೆ ಆರೋಪಿ ಐಶ್ವರ್ಯಗೌಡ ವ್ಯಂಗ್ಯವಾಗಿ ಹೇಳಿದರು.
ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಣದ ವಿಚಾರ ಅಂತೇನೂ ಇಲ್ಲ. ನನ್ನ ಮತ್ತು ಅವರ ಮಧ್ಯೆ ಸಣ್ಣ-ಪುಟ್ಟ ವ್ಯಾವಹಾರಿಕ ಸಂಬಂಧ ನಡೆದಿದೆ. ಅನ್ನದಾನಿಯವರು ಒಳ್ಳೆಯವರನ್ನು ತಮ್ಮ ಸಹಚರರನ್ನಾಗಿ ಇಟ್ಟುಕೊಳ್ಳಲಿ. ಕ್ರಿಮಿನಲ್‌ಗಳು, 420ಗಳನ್ನು ಇಟ್ಟುಕೊಂಡರೆ ತಪ್ಪು ಮಾಹಿತಿ ಕೊಡುತ್ತಾರೆ. ನಾನು ಯಾರಂತ ಅವರಿಗೆ ಮರೆತುಹೋಗಿರಬಹುದು. ಅವರೊಮ್ಮೆ ಫ್ರೀಯಾಗಿ ಸಿಗಲಿ. ಆಗ ನಾನು ಯಾರು, ನಾನು ಅವರ ಪರಿಚಯ ಹೇಗಾಯಿತು, ನನ್ನ ಮತ್ತು ಅವರ ಮಧ್ಯೆ ಯಾವಾಗ ವ್ಯವಹಾರ ಸಂಬಂಧ ನಡೆದಿತ್ತು ಎನ್ನುವುದನ್ನು ನಾನೇ ಹೇಳುತ್ತೇನೆ ಎಂದು ಕುಟುಕಿದ ಐಶ್ವರ್ಯ, ನನ್ನ ಮೇಲೆ ಅನ್ನದಾನಿ ಯಾವ ತನಿಖೆಯನ್ನಾದರೂ ಮಾಡಿಸಲಿ. ನಾನು ಎದುರಿಸಲು ರೆಡಿ ಇದ್ದೇನೆ ಎಂದು ಧೈರ್ಯವಾಗಿ ಹೇಳಿದರು.
ಶಾಸಕ ನರೇಂದ್ರಸ್ವಾಮಿ ಅವರಿಗೆ ಐಶ್ವರ್ಯಗೌಡ ಫಂಡಿಂಗ್ ಮಾಡಿರುವ ಕುರಿತು ಅನ್ನದಾನಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಯಾರಿಗೂ ಫಂಡ್ ಮಾಡಿಲ್ಲ. ಫಂಡ್ ಮಾಡುವಷ್ಟು ದುಡ್ಡು ನನ್ನ ಬಳಿ ಇದ್ದಿದ್ದರೆ ನಾನೇ ಚುನಾವಣೆಗೆ ನಿಲ್ಲುತ್ತಿದ್ದೆ. ನಾನು ಫಂಡ್ ಮಾಡಿರುವುದಾಗಿ ಹೇಳುತ್ತಿರುವ ಅನ್ನದಾನಿ ಅವರು ನಾನು ತೆಂಗು, ಅಡಕೆ, ಕಬ್ಬು ಮಾರಿ ದುಡ್ಡು ಕೊಟ್ಟಿದ್ದೇನಾ ಎಂಬುದನ್ನೂ ಹೇಳಲಿ. ನನಗೆ ಮತ್ತು ಅನ್ನದಾನಿಗೆ ಇರುವ ಸಂಬಂಧನಾ ಬೇರೆಯವರಿಗೆ ಏಕೆ ಕಟ್ಟುತ್ತಿದ್ದಾರೋ ಗೊತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ನರೇಂದ್ರಸ್ವಾಮಿ ಅವರು ಈ ಬಾರಿ ಶಾಸಕರಾದ ಮೇಲೆ ನಮ್ಮ ಮನೆಯಲ್ಲಿ ನಡೆದ ಸಮಾರಂಭವೊಂದಕ್ಕೆ ಬಂದಿದ್ದರು. ಅದೇ ಕೊನೆ. ನನಗೂ ನರೇಂದ್ರಸ್ವಾಮಿಗೂ ವ್ಯವಹಾರಿಕ ಸಂಬಂಧವಿಲ್ಲ. ನಮ್ಮ ಮನೆ ಸಮಾರಂಭಕ್ಕೆ ಕಾಂಗ್ರೆಸ್‌ನವರಷ್ಟೇ ಬಂದಿದ್ದಾರೆಂದು ಅನ್ನದಾನಿ ಹೇಳಿದ್ದಾರೆ. ಆದರೆ, ಜೆಡಿಎಸ್-ಬಿಜೆಪಿಯವರೂ ಬಂದಿದ್ದರು ಎಂದು ಸ್ಪಷ್ಟಪಡಿಸಿದರು.
ನನಗೆ ನರೇಂದ್ರಸ್ವಾಮಿ ಅವರ ಪರಿಚಯ ಮೊದಲಿನಿಂದೆನೂ ಇರಲಿಲ್ಲ. ಆದರೆ, ಡಾ.ಕೆ.ಅನ್ನದಾನಿ ನನಗೆ 2012ರಿಂದ ಪರಿಚಯವಿದ್ದಾರೆ. ಆಗ ನನ್ನ ಮದುವೆಗೆ ಬಂದಿದ್ದರು. ನಂತರದಲ್ಲಿ ಅನ್ನದಾನಿ ಮತ್ತು ನನ್ನ ನಡುವೆ ವ್ಯಾವಹಾರಿಕ ಸಂಬಂಧ ನಡೆದಿತ್ತು. ಈಗ ನೋಡಿದರೆ ಅನ್ನದಾನಿ ನನ್ನ ನೋಡಿಯೇ ಇಲ್ಲ ಎನ್ನುತ್ತಿದ್ದಾರೆ. ಅವರಿಗೇನು 60 ವರ್ಷ ಆಗಿದೆಯಾ.60 ವರ್ಷ ಆದ ಮೇಲೆ ಬರುವ ಅರಳೋ-ಮರಳು ಅನ್ನದಾನಿಗೆ ಈಗಲೇ ಬಂದಿರಬೇಕು ಎಂದು ಕುಟುಕಿದರು.