ವೆಂಕಟೇಶ್ ಕಲಿಪಿ
ಬೆಂಗಳೂರು : ಒಂದೂವರೆ ದಶಕದಿಂದ ಬೆಂಗಳೂರಿನಲ್ಲಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದ ತ್ರಿವಳಿ ಕೊಲೆಯ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿದ್ದ ಪೊಲೀಸರನ್ನು ಹಾಗೂ ಅವರ ತನಿಖೆಯನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದ ಪ್ರಕರಣದಲ್ಲಿ ಇದೀಗ ಹೈಕೋರ್ಟ್, ಅದೇ ಪೊಲೀಸರ ಕಳಪೆ ತನಿಖೆಯನ್ನು ಬಿಡಿಬಿಡಿಯಾಗಿ ವಿವರಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿಗಳಾದ ರಮೇಶ್, (52), ಲೋಕೇಶ್ (30), ಮುರಳಿ (26) ಮತ್ತು ಭಾಸ್ಕರ್ (31) ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ಆರೋಪಿಗಳಿಗೆ ಮರಣದಂಡನೆ ವಿಧಿಸಲು ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. .
ಪೊಲೀಸರು ತನಿಖೆ ವೇಳೆ ಎಸಗಿದ ಲೋಪಗಳನ್ನು ಎತ್ತಿತೋರಿಸಿಸುವ ಮೂಲಕ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯಪೀಠ, ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದೆ.
ಅಲ್ಲದೆ, ಸಾರ್ವಜನಿಕರ ಒತ್ತಡಕ್ಕೆ ಮಣಿದು ತನಿಖಾ ಸಂಸ್ಥೆಗಳು ದೋಷಪೂರಿತ ಆರೋಪಪಟ್ಟಿ ಸಲ್ಲಿಸುವುದಕ್ಕೆ ಮತ್ತೊಂದು ಕ್ಲಾಸಿಕ್ ಪ್ರಕರಣ ಇದಾಗಿದೆ. ಸಾರ್ವಜನಿಕರ ಆತಂಕವನ್ನು ತಣಿಸಲು ವಿವೇಚನಾರಹಿತ ಮತ್ತು ಅಸಮರ್ಪಕ ತನಿಖೆ ನಡೆಸಿರುವುದರ ಪರಿಣಾಮ ಇದಾಗಿದೆ. ಇದು ಭೀಕರವಾದ ಈ ತ್ರಿವಳಿ ಕೊಲೆ. ತನಿಖೆಯ ಪ್ರಗತಿ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ವಿವರಿಸಿ, ಆರೋಪಿಗಳ ಪೋಟೋ ನೀಡಿದ್ದಾರೆ. 4ನೇ ಆರೋಪಿಯ ಮನೆಗೆ ಬೆಂಕಿ ಹಂಚಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಸೋಮಶೇಖರ್ ಎಂಬ ಪೇದೆಗೆ ₹10000 ಬಹುಮಾನ ನೀಡಲಾಗಿದೆ. ಈ ರೀತಿಯ ಪ್ರಕರಣಗಳಲ್ಲಿ ತನಿಖಾ ಸಂಸ್ಥೆ ನಿರ್ವಹಿಸಿದ ಪಾತ್ರ ತೃಪ್ತಿಕರವಾಗಿಲ್ಲ. ಸತ್ಯವನ್ನು ಬಯಲು ಮಾಡುವುದು ಮತ್ತು ನಿಜವಾದ ಅಪರಾಧಿಯನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸುವುದೇ ತನಿಖೆ ಮತ್ತು ವಿಚಾರಣೆಯ ಉದ್ದೇಶ. ಆದರೆ, ಪ್ರಕರಣದ ದೋಷಪೂರಿತ ತನಿಖೆಗೆ ಆತ್ಮಾವಲೋಕನದ ಅಗತ್ಯವಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ರಾಮಮೂರ್ತಿ ನಗರದ ರಮೇಶ್ ಎಂಬಾತನ ಸುಪಾರಿ ಮೇರೆಗೆ ಲೋಕೇಶ್, ಮುರಳಿ ಮತ್ತು ಭಾಸ್ಕರ್ 2009ರ ಅ.20ರಂದು ಸಂಜೆ 5.30ಕ್ಕೆ ಮನೆಯಲ್ಲಿ ಬಿಜಾಪುರದ ಮೂಲದ ರಾಹುಲ್, ಪುಷ್ಪಲತಾ ಮತ್ತು ಅಗ್ನಿಶಾ ದಾಸ್ ಅನ್ನು ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಮೃತದೇಹದ ಮೇಲಿದ್ದ ಚಿನ್ನಾಭರಣ, ಜೇಬಿನಲ್ಲಿದ್ದ ಹಣ ಮೊಬೈಲ್ ದೋಚಿದ್ದರು ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ 2019ರ ಮಾ.11ರಂದು 66ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶಿಸಿತ್ತು. ಇದರಿಂದ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಮೊದಲ ಆರೋಪಿ ರಮೇಶ್ ಜೊತೆಗೆ ಪುಷ್ಪಲತಾ ಅಕ್ರಮ ಸಂಬಂಧ ಹೊಂದಿದ್ದರು. ಪತ್ನಿಯನ್ನು ಸಂಪರ್ಕ ಮಾಡಬಾರದು ಮತ್ತು ಮನೆಗೆ ಭೇಟಿ ನೀಡಬಾರದೆಂದು ರಮೇಶ್‌ಗೆ ತಾಕೀತು ಮಾಡಿದ್ದಕ್ಕೆ ದ್ವೇಷ ಬೆಳೆಸಿಕೊಂಡ ರಮೇಶ್, ಇತರೆ ಆರೋಪಿಗಳಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ, ರಾಹುಲ್ ಸಹೋದರ ಮತ್ತು ತಂದೆಯು ಪೊಲೀಸರ ಮುಂದೆ ದಾಖಲಿಸಿದ್ದ ಹೇಳಿಕೆಯಲ್ಲಿ, ರಮೇಶ್ ಮತ್ತು ಪುಷ್ಪಲತಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಚಕಾರ ಎತ್ತಿಲ್ಲ. ಈ ಕುರಿತು ಇತರೆ ಸಂಬಂಧಿಗಳ ಬಳಿ ಪೊಲೀಸರು ವಿಚಾರಿಸಿಲ್ಲ. ರಮೇಶ್ ಮತ್ತು ಪುಷ್ಪಲತಾರ ಕರೆಗಳ ಮಾಹಿತಿ ಸಂಗ್ರಹಿಸಿಲ್ಲ. ಇದರಿಂದ ಅಕ್ರಮ ಸಂಬಂಧ ಇದ್ದದ್ದು ಸಾಬೀತಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡ ವಿಸ್ಕಿ ಬಾಟೆಲ್ ಮತ್ತು ಗ್ಲಾಸ್‌ಗಳ ಮೇಲೆ ಮೂವರು ಆರೋಪಿಗಳ ಬೆರಳಚ್ಚು ಇದ್ದವು ಎಂದು ಪೊಲೀಸರು ಹೇಳುತ್ತಾರೆ. ಸ್ಥಳದ ಪರಿಶೀಲನೆ ನಡೆಸಿದ್ದ ಬೆರಳಚ್ಚುತಜ್ಞರು, ವೈಜ್ಞಾನಿಕ ಅಧಿಕಾರಿಗಳು ರಾಹುಲ್ ದಾಸ್ ಮನೆಯ ಡೈನಿಂಗ್ ಟೇಬಲ್ ಮೇಲೆ ವಿಸ್ಕಿ ಬಾಟಲ್‌ಗಳು ಇರುವುದನ್ನು ಉಲ್ಲೇಖಿಸಿಯೇ ಇಲ್ಲ. ಅವರು ಸಂಗ್ರಹಿಸಿದ ವಸ್ತುಗಳಲ್ಲಿ ವಿಸ್ಕಿ ಬಾಟೆಲ್ ಮತ್ತು ಗ್ಲಾಸ್‌ಗಳ ಉಲ್ಲೇಖವೇ ಇಲ್ಲ.
ಮೃತ ಅಗ್ನಿಶಾ ಬಲಗೈಯಲ್ಲಿ ಆರೋಪಿಯ ಕೂದಲುಗಳಿದ್ದವು ಎಂದು ಹೇಳುವ ಪೊಲೀಸರು, ಅಗ್ನಿಶಾ ಕೈಯಲ್ಲಿ ಕೂದಲಿನ ಪೋಟೋ ತೆಗೆದಿಲ್ಲ. ಸಂಗ್ರಹಿಸಿದ ಕೂದಲುಗಳನ್ನು ಲೆಕ್ಕ ಹಾಕಿಲ್ಲ. ಅವುಗಳ ತುಂಡಾಗಿದ್ದು, ಮೂಲದಿಂದ ಇರಲಿಲ್ಲ. ಆರೋಪಿಗಳ ತಲೆ ಕೂದಲು ಮತ್ತು ರಕ್ತದ ಮಾದರಿಯನ್ನು ಡಿಎನ್‌ಐ ಪರೀಕ್ಷೆ ಕಳುಹಿಸಿಲ್ಲ. ಅವು ಘಟನೆ ನಡೆದ ನಂತರವೂ ಹಲವು ದಿನ ತನಿಖಾಧಿಕಾರಿ ಬಳಿಯೇ ಇದ್ದವು. ಇನ್ನೂ ದೇಹದ ಯಾವ ಭಾಗದ ಕೂದಲು ಅದಾಗಿದ್ದವು ಎಂಬುದನ್ನು ಸಹ ಹೇಳಿಲ್ಲ. ಇದರಿಂದ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಲು ಸಾಕ್ಷ್ಯಧಾರಗಳಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದೆ.
ಆರೋಪಿಗಳ ಪರ ವಕೀಲರಾದ ಡಿ.ಮೋಹನ್ ಕುಮಾರ್, ಹೇಮಚಂದ್ರ ಆರ್. ರೈ, ಜಿ. ಜೈರಾಜ್ ಮತ್ತು ಕೆ. ರವಿಶಂಕರ್ ವಾದ ಮಂಡಿಸಿದ್ದರು.