ಬೆಂಗಳೂರಿನಲ್ಲಿ ಕಾರು ಗಾಜು ಒಡೆದು ಕಳವು : ಕುಖ್ಯಾತ ರಾಮ್‌ಜಿ ನಗರ ಗ್ಯಾಂಗ್‌ ಬಂಧನ

KannadaprabhaNewsNetwork |  
Published : Sep 02, 2024, 02:08 AM ISTUpdated : Sep 02, 2024, 04:51 AM IST
Indiranagar PS 4 | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಕಾರುಗಳ ಗಾಜು ಒಡೆದು ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ರಾಮ್‌ಜಿನಗರ ಗ್ಯಾಂಗ್‌ನ ನಾಲ್ವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹5.85 ಲಕ್ಷ ಮೌಲ್ಯದ 8 ಲ್ಯಾಪ್‌ಟಾಪ್‌ ಸೇರಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

 ಬೆಂಗಳೂರು : ಕಾರುಗಳ ಗಾಜು ಒಡೆದು ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಕುಖ್ಯಾತ ರಾಮ್‌ಜಿನಗರ ಗ್ಯಾಂಗ್‌ನ ಮೂವರು ಸೇರಿ ನಾಲ್ವರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುಚ್ಚಿ ಮೂಲದ ರಾಮ್‌ಜಿನಗರದ ಮುರುಳಿ (38), ಸೆಂದಿಲ್‌ (50), ಮೂರ್ತಿ (49) ಹಾಗೂ ಕಳವು ಮಾಲು ಸ್ವೀಕರಿಸುತ್ತಿದ್ದ ಜಾನ್ಸನ್‌(35) ಬಂಧಿತರು. ಆರೋಪಿಗಳಿಂದ ₹5.85 ಲಕ್ಷ ಮೌಲ್ಯದ 8 ಲ್ಯಾಪ್‌ಟಾಪ್‌ ಸೇರಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಕಾರೊಂದರ ಗಾಜು ಒಡೆದು ಲ್ಯಾಪ್‌ಟಾಪ್‌ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ನಗರಗಳಲ್ಲಿ ಕಳವು:

ವೃತ್ತಿಪರ ಕಳ್ಳರಾಗಿರುವ ಆರೋಪಿಗಳು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್‌ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಾರುಗಳ ಗಾಜು ಒಡೆದು ಕಳವು ಮಾಡುವಲ್ಲಿ ನಿಷ್ಣಾತರಾಗಿದ್ದಾರೆ. ನಗರದ ವಿವಿಧೆಡೆ ಸುತ್ತಾಡಿ ರಸ್ತೆ ಬದಿ, ಹೋಟೆಲ್‌ಗಳು, ಮಾಲ್‌ಗಳು, ಬ್ಯಾಂಕ್‌ಗಳು ಸೇರಿದಂತೆ ಇತರೆಡೆ ನಿಲುಗಡೆ ಮಾಡಿದ ಕಾರುಗಳನ್ನು ಗುರಿಯಾಗಿಸಿಕೊಂಡು, ರಬ್ಬರ್‌ಗೆ ಗೋಲಿ ಸಿಕ್ಕಿಸಿ ಕಾರುಗಳ ಗಾಜು ಒಡೆದು ಕಾರಿನೊಳಗೆ ಇರುವ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಸಿಸಿಟಿವಿ ಸುಳಿವು ಆಧರಿಸಿ ಬಂಧನ:

ಆರೋಪಿಗಳು ಆ.11ರಂದು ಇಂದಿರಾನಗರದಲ್ಲಿ ಕಾರೊಂದರ ಗಾಜು ಒಡೆದು ಲ್ಯಾಪ್‌ಟಾಪ್‌ ಕಳವು ಮಾಡಿದ್ದರು. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ಇಂದಿರಾನಗರ, ಬಾಣಸವಾಡಿ, ಬೆಳ್ಳಂದೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 8 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ರಾಮ್‌ಜಿನಗರ ಗ್ಯಾಂಗ್‌?

ತಮಿಳುನಾಡಿನ ತಿರುಚ್ಚಿ ಮೂಲದ ಒಂದು ಗ್ರಾಮ ರಾಮ್‌ಜಿನಗರ. ಇಲ್ಲಿನ ಬಹುತೇಕರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ಯಾಂಗ್‌ ಕಟ್ಟಿಕೊಂಡು ದೇಶದ ವಿವಿಧ ನಗರಗಳಿಗೆ ತೆರಳಿ ಕಾರುಗಳ ಗಾಜು ಒಡೆದು ಬೆಲೆಬಾಳು ವಸ್ತುಗಳನ್ನು ಕಳವು ಮಾಡಿ ಪರಾರಿ ಆಗುವುದರಲ್ಲಿ ನಿಪುಣರಾಗಿದ್ದಾರೆ. ಅಪರಾಧ ಲೋಕದಲ್ಲಿ ಈ ಆರೋಪಿಗಳ ಗುಂಪು ರಾಮ್‌ಜಿನಗರ ಗ್ಯಾಂಗ್‌ ಎಂದು ಕುಖ್ಯಾತಿ ಪಡೆದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು