ಚಲನಚಿತ್ರ ಬಿಡುಗಡೆ ಆರ್ಥಿಕ ನೆರವು ಕೊಡುವುದಾಗಿ ನಂಬಿಸಿ ಖಾಲಿ ಚೆಕ್‌ಗಳನ್ನು ಪಡೆದು ವಂಚಿಸಿದ ಆರೋಪ : ಮೂವರ ವಿರುದ್ಧ ಪ್ರಕರಣ

KannadaprabhaNewsNetwork | Updated : Aug 12 2024, 04:54 AM IST

ಸಾರಾಂಶ

ಚಲನಚಿತ್ರ ಬಿಡುಗಡೆ ಆರ್ಥಿಕ ನೆರವು ಕೊಡುವುದಾಗಿ ನಂಬಿಸಿ ಖಾಲಿ ಚೆಕ್‌ಗಳನ್ನು ಪಡೆದು ವಂಚಿಸಿದ ಆರೋಪದ ಮೇರೆಗೆ ಇಬ್ಬರು ನಿರ್ಮಾಪಕರು ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 ಬೆಂಗಳೂರು :  ಚಲನಚಿತ್ರ ಬಿಡುಗಡೆ ಆರ್ಥಿಕ ನೆರವು ಕೊಡುವುದಾಗಿ ನಂಬಿಸಿ ಖಾಲಿ ಚೆಕ್‌ಗಳನ್ನು ಪಡೆದು ವಂಚಿಸಿದ ಆರೋಪದ ಮೇರೆಗೆ ಇಬ್ಬರು ನಿರ್ಮಾಪಕರು ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖ್ಯಾತ ನಿರ್ಮಾಪಕ ಮಂಜುನಾಥ್ ಅಲಿಯಾಸ್ ಜಾಕ್‌ ಮಂಜು, ಬಿ.ಎಸ್‌.ಸಿದ್ದೇಶ್ವರ ಹಾಗೂ ಶಾಲಿನಿ ಆರ್ಟ್ಸ್ ಮೇಲ್ವಿಚಾರಕ ಮುರಳಿ ಅವರ ಮೇಲೆ ಆರೋಪ ಬಂದಿದ್ದು, ‘ಮಾಯನಗರಿ’ ಸಿನಿಮಾ ಬಿಡುಗಡೆಗೆ ನಿರ್ಮಾಪಕ ಎನ್‌.ಶಿವಶಂಕರ್‌ ಎಂಬುವರಿಗೆ ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

2017ರಲ್ಲಿ ಮಾಯಾನಗರಿ ಸಿನಿಮಾವನ್ನು ಆರಂಭಿಸಿ 5 ವರ್ಷಗಳ ಆ ಸಿನಿಮಾದ ಚಿತ್ರೀಕರಣವನ್ನು ಸ್ಯಾಂಡಲ್‌ವುಡ್ ಪಿಚ್ಚರ್ ಬ್ಯಾನರ್ ಮಾಲಿಕ ಹಾಗೂ ನಿರ್ದೇಶಕ ಎನ್.ಶಿವಶಂಕರ್ ಮುಗಿಸಿದ್ದರು. ಈ ಸಿನಿಮಾ ಬಿಡುಗಡೆಗೆ ನಿರ್ಮಾಪಕ ಸಿದ್ದೇಶ್ವರ ಬಳಿ ಶಿವಶಂಕರ್ ಆರ್ಥಿಕ ನೆರವು ಕೋರಿದ್ದರು. ಆಗ ಶಾಲಿನಿ ಆರ್ಟ್ಸ್ ಮೇಲ್ವಿಚಾರಕ ಮುರಳಿ ಅವರನ್ನು ಶಿವಶಂಕರ್‌ಗೆ ಸಿದ್ದೇಶ್ವರ್ ಭೇಟಿ ಮಾಡಿಸಿದ್ದರು. ಆಗ ತಾನು ಮಾಯಾನಗರಿ ಸಿನಿಮಾ ನೋಡಿದ ಮೇಲೆ 3 ಕೋಟಿ ರು ಹೂಡಿಕೆ ಮಾಡುವುದಾಗಿ ಅವರು ಭರವಸೆ ಕೊಟ್ಟಿದ್ದರು.

ಈ ಸಂಬಂಧ ಒಪ್ಪಂದಕ್ಕೆ 2023ರ ಏಪ್ರಿಲ್‌ನಲ್ಲಿ ಶಿವಶಂಕರ್‌ಗೆ ಆರೋಪಿಗಳು ಆಹ್ವಾನಿಸಿದ್ದರು. ಅಂತೆಯೇ ಜೆ.ಪಿ.ನಗರದ ಶಾಲಿನಿ ಆರ್ಟ್ಸ್ ಕಚೇರಿಯಲ್ಲಿ ಜಾಕ್ ಮಂಜು ಸೇರಿ ಮೂವರು ಆರೋಪಿಗಳನ್ನು ಶಿವಶಂಕರ್ ಭೇಟಿಯಾದರು. ಆಗ ಕರಾರು ಪತಕ್ಕೆ ಸಹಿ ಮಾಡಿಸಿ 40 ಲಕ್ಷ ರುಗೆ 10 ಖಾಲಿ ಚೆಕ್‌ಗಳನ್ನು ಶಿವಶಂಕರ್ ಅವರಿಂದ ಪಡೆದ ಆರೋಪಿಗಳು, 3 ದಿನಗಳ ಬಳಿಕ ಹಣ ಕೊಡುವುದಾಗಿ ಹೇಳಿ ಕಳುಹಿಸಿದರು. ಆದರೆ ಶಿವಶಂಕರ್ ಅವರಿಗೆ ಹಣಕಾಸು ನೆರವು ಸಿಗಲಿಲ್ಲ. ಈ ಬಗ್ಗೆ ಕೇಳಿದರೆ ಏನೇನೂ ಸಬೂಬು ಹೇಳಿ ಆರೋಪಿಗಳು ಸಾಗ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share this article