₹1 ಕೋಟಿಗೆ 1 ತಾಸಲ್ಲೇ ₹1.20 ಕೋಟಿ ಕೊಡುವುದಾಗಿ ಮೋಸ : ವ್ಯಾಪಾರಿಯಿಂದ ಹಣ ಕಸಿದು ಓಡಿದ್ದವರ ಸೆರೆ

KannadaprabhaNewsNetwork |  
Published : Mar 06, 2025, 01:30 AM ISTUpdated : Mar 06, 2025, 04:35 AM IST
jail

ಸಾರಾಂಶ

₹1 ಕೋಟಿ ನೀಡಿದರೆ ಒಂದೇ ಗಂಟೆಯಲ್ಲೇ ಶೇ.20ರಷ್ಟು ಲಾಭದ ಜತೆ ಅಸಲು ಕೊಡುವುದಾಗಿ ಆಮಿಷವೊಡ್ಡಿ ರೇಷ್ಮೆ ಮೊಟ್ಟೆ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ₹1 ಕೋಟಿ ನೀಡಿದರೆ ಒಂದೇ ಗಂಟೆಯಲ್ಲೇ ಶೇ.20ರಷ್ಟು ಲಾಭದ ಜತೆ ಅಸಲು ಕೊಡುವುದಾಗಿ ಆಮಿಷವೊಡ್ಡಿ ರೇಷ್ಮೆ ಮೊಟ್ಟೆ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದ ಮೂವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟಿ.ದಾಸರಹಳ್ಳಿ ಸಮೀಪದ ಮಲ್ಲಸಂದ್ರದ ಶಾಂತಿ ಲೇಔಟ್ ನಿವಾಸಿ ಅಂಬರೀಷ್‌, ಸಾಯಿ ಲೇಔಟ್‌ನ ಮಾರ್ಟಿನ್ ಹಾಗೂ ಇಂದಿರಾನಗರದ ಶ್ರೀನಿವಾಸ ವರ್ಮಾ ಬಂಧಿತರಾಗಿದ್ದು, ಆರೋಪಿಗಳಿಂದ ₹97.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಸಚಿನ್‌, ದಾವಣಗೆರೆ ಗುರು ಹಾಗೂ ಅಗರವಾಲ್ ಸೇರಿದಂತೆ ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಜಯಚಂದ್ರ ಅವರಿಗೆ ನಂಬಿಸಿ ಕಿಡಿಗೇಡಿಗಳು ಹಣ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ವಂಚಕರನ್ನು ಸೆರೆ ಹಿಡಿದಿದೆ.

ಹೇಗೆ ವಂಚನೆ?:

ಕೆಲ ದಿನಗಳ ಹಿಂದೆ ಜಯಚಂದ್ರ ಹಾಗೂ ಅವರ ಸಂಬಂಧಿ ಅಶ್ವಿನಿ ಅವರಿಗೆ ಇಂದಿರಾನಗರದ ಸ್ನೇಹಿತ ಶ್ರೀನಿವಾಸ್‌ ಪರಿಚಯವಾಗಿದೆ. ಆಗ ನನಗೆ ಗೊತ್ತಿರುವ ಕಂಪನಿಯಲ್ಲಿ ಹಣ ಹೂಡಿಕೆದರೆ ಒಂದೇ ಗಂಟೆಯಲ್ಲೇ ಶೇ.20ರಷ್ಟು ಲಾಭ ಸಿಗಲಿದೆ ಎಂದು ಆತ ನಂಬಿಸಿದ್ದ. ಈ ಮಾತಿಗೆ ಮರುಳಾದ ನಂತರ ಜಯಚಂದ್ರ ಅವರಿಗೆ ಸಚಿನ್ ಸೇರಿದಂತೆ ಇನ್ನುಳಿದ ಆರೋಪಿಗಳನ್ನು ಶ್ರೀನಿವಾಸ್ ಪರಿಚಯಿಸಿದ್ದಾನೆ. ತಮ್ಮ ವಂಚನೆ ಜಾಲಕ್ಕೆ ಬಿದ್ದ ಜಯಚಂದ್ರ ಅವರಿಂದ ಹಣ ವಸೂಲಿಗೆ ಶ್ರೀನಿವಾಸ್ ಗ್ಯಾಂಗ್ ಸಂಚು ರೂಪಿಸಿತ್ತು. ಅಂತೆಯೇ ಜಾಲಹಳ್ಳಿ ಸಮೀಪ ಮಾರ್ಟಿನ್‌ ಹೆಸರಿನಲ್ಲಿ ನಕಲಿ ಕಂಪನಿ ಸ್ಥಾಪಿಸಿದ್ದರು.ಆ ಕಂಪನಿಯ ಕಚೇರಿಗೆ ಮಾ.2ರಂದು ಜಯಚಂದ್ರ ಹಾಗೂ ಅಶ್ವಿನಿ ಅವರನ್ನು ಮಾತುಕತೆಗೆ ಆರೋಪಿಗಳು ಕರೆಸಿದ್ದರು. ಆ ವೇಳೆ ₹1 ಕೋಟಿ ನೀಡಿದರೆ ಒಂದೇ ಗಂಟೆಯಲ್ಲಿ ₹1.20 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಆಗ ಹಣ ನೀಡುವ ಹಂತದಲ್ಲಿ ದಿಢೀರನೇ ಹಣ ಕಸಿದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ದೂರು ಕೊಡಲು ಜತೆಯಲ್ಲೇ ಇದ್ದ

ವಂಚನೆ ಕೃತ್ಯ ನಡೆದ ಬಳಿಕ ವಿದ್ಯಾರಣ್ಯಪುರ ಠಾಣೆಗೆ ತೆರಳಿ ಜಯಚಂದ್ರ ದೂರು ಸಲ್ಲಿಸಿದ್ದರು. ಆ ವೇಳೆ ಅವರ ಜತೆ ಆರೋಪಿ ಶ್ರೀನಿವಾಸ್ ಸಹ ಇದ್ದ. ತಾನು ಮುಗ್ಧ ಎಂದು ಆತ ಬಿಂಬಿಸಿಕೊಂಡಿದ್ದ. ಈ ಕೃತ್ಯ ತನಿಖೆಗಿಳಿದ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ಪದ ತಂಡವು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಶ್ರೀನಿವಾಸ್ ಮೇಲೆ ಶಂಕೆ ಮೂಡಿದೆ. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಹಿಂದಿನ ಕರಾಮುತ್ತು ಬಯಲಾಗಿದೆ. ತಕ್ಷಣವೇ ಶ್ರೀನಿವಾಸ್ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದಾಗ ಹಣ ತೆಗೆದುಕೊಂಡು ಹೋಗಿದ್ದ ಅಂಬರೀಷ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ