ಸಾರಿಗೆ ಘಟಕಕ್ಕೆ ಪೂರೈಸುವ ಟ್ಯಾಂಕರ್‌ನಿಂದಲೇ ಇಂಧನ ಕಳ್ಳತನ..!

KannadaprabhaNewsNetwork |  
Published : Jun 19, 2025, 11:50 PM ISTUpdated : Jun 20, 2025, 06:57 AM IST
೧೯ಕೆಎಂಎನ್‌ಡಿ-೫ಸಾರಿಗೆ ಘಟಕದ ಆವರಣದಲ್ಲಿ ವಶಪಡಿಸಿಕೊಂಡಿರುವ ಟ್ಯಾಂಕರ್‌ನ್ನು ನಿಲ್ಲಿಸಿರುವುದು. | Kannada Prabha

ಸಾರಾಂಶ

ನೀರು ಮತ್ತು ಹಾಲು ಏಕಕಾಲಕ್ಕೆ ಟ್ಯಾಂಕರ್‌ನಲ್ಲೇ ಮಿಶ್ರಣಗೊಳ್ಳುವಂತೆ ಟ್ಯಾಂಕರ್‌ನ್ನೇ ವಿನ್ಯಾಸಗೊಳಿಸಿದ್ದು ಹಳೇ ಕತೆ. ಪಾಂಡವಪುರದ ಸಾರಿಗೆ ಡಿಪೋಗೆ ಪೂರೈಕೆಯಾಗುತ್ತಿದ್ದ ಇಂಧನವನ್ನು ಟ್ಯಾಂಕರ್‌ನಲ್ಲೇ ಫ್ಲೆಕ್ಸಿಬಲ್ ಪೈಪ್ ಅಳವಡಿಸಿಕೊಂಡು ಕಳ್ಳತನ ಮಾಡುತ್ತಿರುವುದು ಈಗಿನ ಹೊಸ ಕತೆ...!

  ಮಂಡ್ಯ :  ನೀರು ಮತ್ತು ಹಾಲು ಏಕಕಾಲಕ್ಕೆ ಟ್ಯಾಂಕರ್‌ನಲ್ಲೇ ಮಿಶ್ರಣಗೊಳ್ಳುವಂತೆ ಟ್ಯಾಂಕರ್‌ನ್ನೇ ವಿನ್ಯಾಸಗೊಳಿಸಿದ್ದು ಹಳೇ ಕತೆ. ಪಾಂಡವಪುರದ ಸಾರಿಗೆ ಡಿಪೋಗೆ ಪೂರೈಕೆಯಾಗುತ್ತಿದ್ದ ಇಂಧನವನ್ನು ಟ್ಯಾಂಕರ್‌ನಲ್ಲೇ ಫ್ಲೆಕ್ಸಿಬಲ್ ಪೈಪ್ ಅಳವಡಿಸಿಕೊಂಡು ಕಳ್ಳತನ ಮಾಡುತ್ತಿರುವುದು ಈಗಿನ ಹೊಸ ಕತೆ...!

ಈ ಕಳ್ಳತನದ ಜಾಲವನ್ನು ಬಯಲಿಗೆ ತಂದವರು ಪಾಂಡವಪುರ ಸಾರಿಗೆ ವಿಭಾಗ ಘಟಕದ ಓರ್ವ ಮೆಕ್ಯಾನಿಕ್ ಎನ್ನಲಾಗಿದ್ದು, ಘಟನೆ ಕುರಿತಂತೆ ಮಾಹಿತಿ ನೀಡುವುದಕ್ಕೆ ಸಾರಿಗೆ ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಸಾರಿಗೆ ಘಟಕಕ್ಕೆ ಬಂದ ಟ್ಯಾಂಕರ್‌ನಿಂದ ಇಂಧನ ಕಳ್ಳತನ ಪತ್ತೆ ಹಚ್ಚಿರುವ ವಿಡಿಯೋ ವೈರಲ್ ಆಗಿದೆ.

ಹಾಸನದ ಎಚ್‌ಪಿಸಿಎಲ್ ಘಟಕದಿಂದ ಟ್ಯಾಂಕರ್ ಮೂಲಕ ಸಾರಿಗೆ ಡಿಪೋಗಳಿಗೆ ಇಂಧನ ಸರಬರಾಜು ಮಾಡಲಾಗುತ್ತಿದ್ದು, ಕೆಎ ೦೨ ಬಿಎಚ್-೩೦೩೯ ಟ್ಯಾಂಕರ್‌ನಲ್ಲಿ ಪ್ರತಿ ಬಾರಿ ಇಂಧನ ಸರಬರಾಜು ಮಾಡುವಾಗಲೂ ೧೫೦ ಲೀಟರ್‌ನಿಂದ ೨೦೦ ಲೀಟರ್ ಕಡಿಮೆ ಇಂಧನ ಪೂರೈಕೆಯಾಗುತ್ತಿತ್ತು. ಇದರಿಂದ ಅನುಮಾನಗೊಂಡು ಟ್ಯಾಂಕರ್ ರ್ಯಾಂಪಿಕ್‌ಗೆ ಕಳುಹಿಸಿ ಪರಿಶೀಲನೆಗೆ ಒಳಪಡಿಸಲಾಯಿತು. ಪರಿಶೀಲನೆ ವೇಳೆ ಟ್ಯಾಂಕರ್‌ನ ೪ ನೇ ಕಾಂಪಾರ್ಟ್‌ಮೆಂಟ್‌ಗೆ ಅನಧಿಕೃತವಾಗಿ ಫ್ಲೆಕ್ಸಿಬಲ್ ಪೈಪ್ ಅಳವಡಿಸಿರುವುದು ಪತ್ತೆಯಾಯಿತು. ಆ ಪೈಪ್ ಮೂಲಕ ಇಂಧನ ಕಳ್ಳತನ ಮಾಡುತ್ತಿರುವುದನ್ನು ಘಟಕದ ಮೆಕ್ಯಾನಿಕ್ ಪತ್ತೆ ಹಚ್ಚಿದರು ಎಂದು ಗೊತ್ತಾಗಿದೆ.

ಈ ವೇಳೆ ಟ್ಯಾಂಕರ್ ಚಾಲಕನನ್ನು ಡಿಪೋ ಅಧಿಕಾರಿಗಳು ತರಾಟೆ ತೆಗೆದುಕೊಂಡರು. ಮೇಲಧಿಕಾರಿಗಳಿಗೆ ಇಂಧನ ಕಳ್ಳತನದ ಬಗ್ಗೆ ಮಾಹಿತಿ ರವಾನಿಸಿದರು. ಇಂಧನ ಕಳ್ಳತನ ಮಾಹಿತಿ ಮುಚ್ಚಿಟ್ಟು ಮಾಹಿತಿ ನೀಡದೆ ಸಾರಿಗೆ ಡಿಪೋ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರೆಂಬ ಆರೋಪಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.ಇಂಧನ ಸರಬರಾಜಿನಲ್ಲಿ ಸುಮಾರು ೨೦೦ ಲೀಟರ್‌ನಷ್ಟು ವ್ಯತ್ಯಾಸ ಕಂಡುಬರುತ್ತಿದ್ದರಿಂದ ಅನುಮಾನಗೊಂಡು ಘಟಕದ ಅಧಿಕಾರಿಗಳು ಟ್ಯಾಂಕರ್‌ನ್ನು ತಪಾಸಣೆಗೊಳಪಡಿಸಿದರು. ಆಗ ಇಂಧನ ಕಳ್ಳತನ ಕೃತ್ಯ ಬಯಲಾಗಿದೆ. ಟ್ಯಾಂಕರ್‌ನವರೇ ಇಂಧನ ಕಳವು ಮಾಡುತ್ತಿದ್ದರೆಂಬ ಆರೋಪದ ಮೇರೆಗೆ ದೂರು ದಾಖಲಿಸಿ ಟ್ಯಾಂಕರ್‌ನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ.

- ನಾಗರಾಜು, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ: ಕೊಲೆ ಅಂತ್ಯ
ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ