ಹೇಮಾವತಿ ನಾಲಾ ಕಾಮಗಾರಿ ಗೋಲ್ಮಾಲ್

KannadaprabhaNewsNetwork | Published : Oct 28, 2023 1:15 AM

ಸಾರಾಂಶ

ತುರುವೇಕೆರೆ ತಾಲೂಕಿನ ಮಾಯಸಂದ್ರ ಹೇಮಾವತಿ ಕಚೇರಿ ಎದುರು ಮೇಲಿನವಳಗೆರೆಹಳ್ಳಿ ರೈತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ತುರುವೇಕೆರೆ ತಮ್ಮ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ಹೇಮಾವತಿ ನಾಲಾ ಕಾಮಗಾರಿಯಲ್ಲಿ ಲೋಪವಾಗಿದೆ. ೫೦ಲಕ್ಷ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ಎಂದು ಆರೋಪಿಸಿ ಮೇಲಿನವರಗೇನಹಳ್ಳಿ ಗ್ರಾಮದ ರೈತಾಪಿಗಳು ಪ್ರತಿಭಟನೆ ಮಾಡಿದ್ದಾರೆ. ಮಾಯಸಂದ್ರದ ಕಾವೇರಿ ನಿಗಮದ ಶಾಖಾ ನಿಗಮದ ಕಛೇರಿಯ ಬಳಿ ಬೆಳಗ್ಗೆಯಿಂದಲೇ ಮೇಲಿನವರಗೇನಹಳ್ಳಿಯ ರೈತಾಪಿಗಳು ಜಮಾಯಿಸಿದ್ದರು. ಆ ವೇಳೆ ಕಛೇರಿಯಲ್ಲಿ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಇರಲಿಲ್ಲ. ಕಛೇರಿಯಲ್ಲಿದ್ದ ವ್ಯವಸ್ಥಾಪಕ ಪೆರುಮಾಳ್ ಅವರಿಂದ ಇಂಜಿನಿಯರ್ ಅವರ ಮೊಬೈಲ್ ಸಂಖ್ಯೆ ಪಡೆದು ದೂರವಾಣಿ ಕರೆ ಮಾಡಿದರೂ ಆ ಇಂಜಿನಿಯರ್ ಕರೆ ಸ್ವೀಕರಿಸಲಿಲ್ಲ. ಅಂತಿಮವಾಗಿ ಮಾಧ್ಯಮದವರು ಕರೆ ಮಾಡಿದ ವೇಳೆ ರೈತರ ಪ್ರತಿಭಟನೆಯ ಬಗ್ಗೆ ಅಸಡ್ಡೆಯ ಮಾತು ಆಡಿದ್ದಲ್ಲದೇ, ರಾತ್ರಿಯಿಡೀ ಪ್ರತಿಭಟನೆ ಮಾಡಲಿ ಬಿಡಿ ಎಂದು ಉದ್ದಟತನದ ಮಾತು ಆಡಿದರು. ಇದರಿಂದ ಮತ್ತೂ ಕೆರಳಿದ ರೈತಾಪಿಗಳು ಕಛೇರಿಯ ಮುಂದೆ ಕುಳಿತು ಇಂಜಿನಿಯರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಜಿಲ್ಲಾ ಮುಖ್ಯ ಇಂಜಿನಿಯರ್ ವರದಯ್ಯನವರಿಗೆ ದೂರವಾಣಿ ಕರೆ ಮಾಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚರಣ್ ಸಿಂಗ್ ಚೌಹಾಣ್ ಅವರ ಬೇಜವಾಬ್ದಾರಿ ಹೇಳಿಕೆ ಬಗ್ಗೆ ಕಿಡಿಕಾರಿದರು. ಪ್ರತಿಭಟನಾಕಾರರ ಮನವೊಲಿಸಿದ ಚೀಫ್ ಇಂಜಿನಿಯರ್ ವರದಯ್ಯನವರು ಪ್ರತಿಭಟನೆ ಕೈಬಿಡುವಂತೆಯೂ, ಬೇಜವಾಬ್ದಾರಿತನದಿಂದ ವರ್ತಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚರಣ್ ಸಿಂಗ್ ಚೌಹಾಣ್ ರವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು. ಎಡೆಯೂರು ಹೇಮಾವತಿ ನಾಲಾ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್ ಅವರೂ ಸಹ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ರೈತಾಪಿಗಳು ಆರೋಪಿಸಿರುವ ಕಳಪೆ ಕಾಮಗಾರಿಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಭರವಸೆ ನೀಡಿದರು. ಆಗ್ರಹ: ಕಾಮಗಾರಿಯಲ್ಲಿ ಆಗಿರುವ ಲೋಪ ಸರಿಪಡಿಸಬೇಕು. ರೈತರ ಮನವಿ ಸ್ವೀಕರಿಸಲು ಬಾರದೇ ಉದ್ದಟತನದ ಮಾತಾಡಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚರಣ್ ಸಿಂಗ್ ಚೌವ್ಹಾಣ್‌ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಾಮಗಾರಿ ಗೋಲ್ ಮಾಲ್ ಗೆ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ರೈತಾಪಿಗಳು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಅಣ್ಣಪ್ಪ, ಜಗದೀಶ್, ಪುಟ್ಟರಾಜ್, ಛಾಯೇಶ್, ನಾಗರಾಜ್. ಶರತ್, ಆನಂದ್, ನಟರಾಜ್, ಮೋಹನ್ ಇದ್ದರು. ಫೋಟೊ.... ೨೭ ಟಿವಿಕೆ ೨- ತುರುವೇಕೆರೆ ತಾಲೂಕಿನ ಮಾಯಸಂದ್ರ ಹೇಮಾವತಿ ಕಚೇರಿ ಎದುರು ಮೇಲಿನವಳಗೆರೆಹಳ್ಳಿ ರೈತರು ಪ್ರತಿಭಟನೆ ನಡೆಸಿದರು.

Share this article