ಕೆಎಎಸ್‌, ಪಿಡಿಒ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆ ಕೊಡಿಸುವುದಾಗಿ ವಂಚನೆ: ಮತ್ತೆ ಇಬ್ಬರ ಬಂಧನ

KannadaprabhaNewsNetwork | Updated : Jan 03 2025, 04:30 AM IST

ಸಾರಾಂಶ

ಕೆಎಎಸ್‌, ಪಿಡಿಒ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸು ಮಾಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರು. ಪಡೆದು ವಂಚಿಸುತ್ತಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಕೆಎಎಸ್‌, ಪಿಡಿಒ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸು ಮಾಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರು. ಪಡೆದು ವಂಚಿಸುತ್ತಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಹನುಮಂತಪ್ಪ ಮತ್ತು ವಿಜಯಪುರ ಮೂಲದ ಬಿರಾದಾರ್‌ ಬಂಧಿತರು. ವಂಚನೆ ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ರೈಲ್ವೆ ನೌಕರ ಗೋವಿಂದರಾಜು ಎಂಬಾತನನ್ನು ಬಂಧಿಸಿದ್ದ ಪೊಲೀಸರು 4 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಿದ್ದರು. ಆರೋಪಿ ಗೋವಿಂದರಾಜು ಮೊಬೈಲ್‌ ಪರಿಶೀಲನೆ ವೇಳೆ ಈ ಇಬ್ಬರು ಆರೋಪಿಗಳ ಜತೆಗೆ ವಂಚನೆ ಕೃತ್ಯಗಳಲ್ಲಿ ಈ ಇಬ್ಬರು ಪ್ರಮುಖ ಪಾತ್ರವಹಿಸಿರುವು ಕಂಡು ಬಂದಿದೆ.

ಬಂಧಿತರು ರಾಜ್ಯದ ವಿವಿಧೆಡೆ ಸರ್ಕಾರಿ ಉದ್ಯೋಗಾಂಕ್ಷಿಗಳನ್ನು ಹುಡುಕಿ ಗೋವಿಂದರಾಜುಗೆ ಪರಿಚಯಿಸುತ್ತಿದ್ದರಲ್ಲದೇ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈ ವಂಚನೆ ತಂಡದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೀಲ್‌ ಕುದಿರಿಸಲು ಬಂದಾಗ ಬಂಧನ: ವಿಜಯನಗರದ ರಮೇಶ್‌ ಎಂಬುವವರ ಮಗಳು ಕೆಎಎಸ್‌ ಪರೀಕ್ಷೆ ತೆಗೆದುಕೊಂಡಿದ್ದರು. ಹೀಗಾಗಿ ಡಿ.28ರ ರಾತ್ರಿ ರಮೇಶ್‌ ಮನೆಗೆ ಹೋಗಿದ್ದ ಗೋವಿಂದರಾಜು, ಪರೀಕ್ಷೆ ಪಾಸು ಮಾಡಿಸಿ ಕೊಡುವುದಾಗಿ ಮಾತುಕತೆ ನಡೆಸಿದ್ದ. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ವಿಜಯನಗರ ಠಾಣೆ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಗೋವಿಂದರಾಜುನನ್ನು ಬಂಧಿಸಿದ್ದರು. ಬಳಿಕ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಈ ಹಿಂದೆಯೂ ಸಿಸಿಬಿ ವಶಕ್ಕೆ: ನೈಋತ್ಯ ರೈಲ್ವೆಯಲ್ಲಿ ರೈಲ್ವೆ ಸಿನಿಯರ್‌ ಟಿಕೆಟ್‌ ಇನ್ಸ್‌ಪೆಕ್ಟರ್‌ ಆಗಿರುವ ಆರೋಪಿ ಗೋವಿಂದರಾಜು ವಿರುದ್ಧ ಈ ಹಿಂದೆ ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ಬಂಧಿಸಿದ್ದರು. ಗೋವಿಂದರಾಜು ತನಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹಿರಿಯ ಅಧಿಕಾರಿಗಳು ಪರಿಚಿತರಿದ್ದಾರೆ. ಹಣ ನೀಡಿದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಲಕ್ಷಾಂತರ ರು.ಹಣ ಪಡೆದು ವಂಚಿಸುತ್ತಿದ್ದ ಎಂದು ತಿಳಿದು ಬಂದಿದೆ.

Share this article