ಬೆಂಗಳೂರು-ಚನ್ನಪಟ್ಟಣ : ಬೆಂಗಳೂರಿನ ಲಗ್ಗೆರೆ ಸಮೀಪ ಬೈಕ್ ಅಪಘಾತದಲ್ಲಿ ನವ ವಿವಾಹಿತ ಮೊಮ್ಮಗಳು ಮೃತಪಟ್ಟರೆ, ಮೊಮ್ಮಗಳ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಚನ್ನಪಟ್ಟಣದಲ್ಲಿ ಅಜ್ಜಿ ಕೊನೆಯುಸಿರೆಳೆದಿರುವ ದಾರುಣ ಘಟನೆಗಳು ನಡೆದಿವೆ.
ನಂದಿನಿ ಲೇಔಟ್ ನಿವಾಸಿ ಗೀತಾ (22) ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ರಾಕಮ್ಮ ಮೃತಪಟ್ಟು ದುರ್ದೈವಿಗಳು. ಈ ಅಪಘಾತದಲ್ಲಿ ಮೃತಳ ಪತಿ ಸುನೀಲ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಸುಮನಹಳ್ಳಿ ಕಡೆಯಿಂದ ವರಮಹಾಲಕ್ಷ್ಮೀ ಹಬ್ಬದ ದಿನ ಶುಕ್ರವಾರ ಸಂಬಂಧಿಕರ ಮನೆಗೆ ಹೋಗಿ ಶುಕ್ರವಾರ ಮರಳುವಾಗ ಮಾರ್ಗ ಮಧ್ಯೆ ಲಗ್ಗೆರೆ ಸೇತುವೆ ಸಮೀಪ ಈ ಅವಘಡ ಸಂಭವಿಸಿದೆ. ಈ ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಸುನೀಲ್ ಹಾಗೂ ಚನ್ನಪಟ್ಟಣ ತಾಲೂಕಿನ ಗೀತಾ ವಿವಾಹವಾಗಿದ್ದು, ನಂದಿನಿ ಲೇಔಟ್‌ನಲ್ಲಿ ಮದುವೆ ಬಳಿಕ ದಂಪತಿ ನೆಲೆಸಿದ್ದರು. ಪಾನಿಪೂರಿ ಅಂಗಡಿ ಇಟ್ಟುಕೊಂಡು ಸುನೀಲ್ ಜೀವನ ಸಾಗಿಸುತ್ತಿದ್ದರು. ನಾಗರಬಾವಿ ಹೊರವರ್ತುಲ ರಸ್ತೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನ ಬೈಕ್‌ನಲ್ಲಿ ಸಂಬಂಧಿಕರ ಮನೆಗೆ ಹೋಗಿ ದಂಪತಿ ಮರಳುತ್ತಿದ್ದರು. ಆಗ ಲಗ್ಗೆರೆ ಮೇಲ್ಸೇತುವೆ ಸಮೀಪ ಅವರ ಬೈಕ್ ಮುಂದೆ ಹೋಗುತ್ತಿದ್ದ ಲಾರಿ ಹಠಾತ್ತಾಗಿ ಬಲಕ್ಕೆ ತಿರುಗಿದೆ. ಈ ವೇಳೆ ಲಾರಿ ಹಿಂಬದಿ ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಗೀತಾ ಅವರಿಗೆ ಬಡಿದಿದೆ. ಇದರಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಗೀತಾ ಮೇಲೆ ಲಾರಿ ಚಕ್ರಗಳು ಹರಿದಿವೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಗೀತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತಳ ಪತಿ ಸುನೀಲ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಿ ಹೃದಯಾಘಾತದಿಂದ ಸಾವು
ತನ್ನ ಮೊಮ್ಮಗಳ ಸಾವಿನ ಸುದ್ದಿ ಕೇಳಿ ಅಜ್ಜಿ ರಾಕಮ್ಮ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ನಡೆದಿದೆ. ಅಜ್ಜಿ-ಮೊಮ್ಮಗಳ ಸಾವಿನಿಂದ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.