ಬೆಂಗಳೂರು : ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗದ್ದಕ್ಕೆ ಮನನೊಂದು ಬಿ.ಕಾಂ.ವಿದ್ಯಾರ್ಥಿಯೊಬ್ಬ ಮಾಲ್‌ವೊಂದರ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೆ.ಪಿ.ನಗರ ನಿವಾಸಿ ಸುಹಾಸ್ ಅಡಿಗ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶುಕ್ರವಾರ ಮಧ್ಯಾಹ್ನ ಸುಮಾರು 2.30ಕ್ಕೆ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್‌ನಲ್ಲಿ ಈ ಘಟನೆ ನಡೆದಿದೆ.
ಮೃತ ಸುಹಾಸ್ ಅಡಿಗ ತಂದೆ ಖಾಸಗಿ ಕಂಪನಿಯ ಮ್ಯಾನೇಜರ್ ವಾಸುದೇವ ಅಡಿಗ ಕುಟುಂಬದ ಜತೆಗೆ ಜೆ.ಪಿ.ನಗರದಲ್ಲಿ ನೆಲೆಸಿದ್ದಾರೆ. ಸುಹಾಸ್ ಅಡಿಗ ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷ ಬಿ.ಕಾಂ.ಪದವಿ ವ್ಯಾಸಂಗ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಸುಹಾಸ್ ಅಡಿಗ ಆಯ್ಕೆಯಾಗಿರಲಿಲ್ಲ. ಓದಿನಲ್ಲಿ ಮುಂದಿದ್ದ ಸುಹಾಸ್ ಅಡಿಗ ಉತ್ತಮ ಅಂಕ ಪಡೆದಿದ್ದ. ಆದರೂ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗದಿರುವುದಕ್ಕೆ ಮಾಸಿಕವಾಗಿ ನೊಂದಿದ್ದ. ಹೀಗಾಗಿ ಮನೆಯಲ್ಲಿ ಸಹ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೂ ಮುನ್ನ ಸ್ನೇಹಿತಗೆ ಫೋನ್
ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆ ಸ್ನೇಹಿತನೊಬ್ಬನಿಗೆ ಕರೆ ಮಾಡಿದ್ದ ಸುಹಾಸ್ ಅಡಿಗ, ಕ್ಯಾಂಪಸ್ ಸೆಲೆಕ್ಷನ್ ಆಗದಿರುವ ವಿಚಾರ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದ್ದ. ಬಳಿಕ ದ್ವಿಚಕ್ರ ವಾಹನದಲ್ಲಿ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್‌ಗೆ ಒಬ್ಬನೇ ತೆರಳಿರುವ ಸುಹಾಸ್, ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ 4ನೇ ಮಹಡಿಗೆ ತೆರಳಿ ಕೆಳಗೆ ಜಿಗಿದಿದ್ದಾನೆ. ಇದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಾಲ್ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸುಹಾಸ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕ್ಯಾಂಪಸ್ ಸೆಲೆಕ್ಷನ್ ಆಗದಿರುವುದಕ್ಕೆ ಬೇಸರಗೊಂಡಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.