ಗ್ರಾಹಕನಿಂದ ₹ 3 ಲಕ್ಷ ಕಟ್ಟಿಸಿಕೊಂಡು ಕಳಪೆ ಕೃತಕ ಕೂದಲು ಹಾಕಿ ಲೋಪ : ಹೆಲ್ತ್‌ ಕೇರ್‌ ಸಂಸ್ಥೆಗೆ ₹3 ಲಕ್ಷ ದಂಡ

KannadaprabhaNewsNetwork |  
Published : Dec 10, 2024, 01:16 AM ISTUpdated : Dec 10, 2024, 05:45 AM IST
ಸಾಂಧರ್ಭಿಕ ಚಿತ್ರ  | Kannada Prabha

ಸಾರಾಂಶ

ಗ್ರಾಹಕನಿಂದ ₹ 3 ಲಕ್ಷ ಕಟ್ಟಿಸಿಕೊಂಡು ಕಳಪೆ ಗುಣಮಟ್ಟದ ಕೃತಕ ಕೂದಲು ಹಾಕಿ, ಸೇವೆಯಲ್ಲಿ ಲೋಪ ಎಸಗಿದ ನಗರದ ಖಾಸಗಿ ಹೆಲ್ತ್ ಕೇರ್ ಸಂಸ್ಥೆಗೆ ಬೆಂಗಳೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಚಾಟಿ ಬೀಸಿದೆ.

 ಬೆಂಗಳೂರು : ಗ್ರಾಹಕನಿಂದ ₹ 3 ಲಕ್ಷ ಕಟ್ಟಿಸಿಕೊಂಡು ಕಳಪೆ ಗುಣಮಟ್ಟದ ಕೃತಕ ಕೂದಲು ಹಾಕಿ, ಸೇವೆಯಲ್ಲಿ ಲೋಪ ಎಸಗಿದ ನಗರದ ಖಾಸಗಿ ಹೆಲ್ತ್ ಕೇರ್ ಸಂಸ್ಥೆಗೆ ಬೆಂಗಳೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಚಾಟಿ ಬೀಸಿದೆ.

ಗುಣಮಟ್ಟದ ಕೃತಕ ಕೂದಲು (ಹೇರ್ ಪ್ಯಾಚ್‌) ಹಾಕುವುದಾಗಿ ಭರವಸೆ ನೀಡಿ ಗ್ರಾಹಕನಿಂದ ಕಟ್ಟಿಸಿಕೊಂಡಿದ್ದ ₹3 ಲಕ್ಷವನ್ನು ವಾರ್ಷಿಕ 7.5ರ ಬಡ್ಡಿ ಸಮೇತ ಮರಳಿಸುವಂತೆ ಆದೇಶ ನೀಡಿದೆ.ಬೊಮ್ಮನಹಳ್ಳಿಯಲ್ಲಿ ನೆಲೆಸಿರುವ 36 ವರ್ಷದ ದ್ವಾರಕೀಶ್(ಹೆಸರು ಬದಲಿಸಲಾಗಿದೆ) ತಮ್ಮ ಬೋಳು ತಲೆಗೆ ಹೇರ್ ಪ್ಯಾಚ್ ಹಾಕಿಸಿಕೊಳ್ಳಲು ಇಂದಿರಾ ನಗರದಲ್ಲಿರುವ ಹೆಲ್ತ್ ಕೇರ್ ಸಂಸ್ಥೆಯೊಂದಕ್ಕೆ ಫೋನ್ ಕರೆ ಮಾಡಿ ವಿಚಾರಿಸಿದ್ದರು.

ತಮ್ಮ ಬಳಿ 3 ಮಾದರಿಯ ಹೇರ್ ಪ್ಯಾಚ್ ಲಭ್ಯವಿದೆ. ಉನ್ನತ ತಂತ್ರಜ್ಞಾನ ಬಳಸಿ ಸಿಎನ್‌ಸಿ ಮೆಟಿರಿಯಲ್‌ನಿಂದ ತಯಾರಿಸಿರುವುದನ್ನು ಇಟಲಿಯಿಂದ ಅಮದು ಮಾಡಿಕೊಳ್ಳಲಾಗುತ್ತದೆ. ಗ್ರಾಹಕರ ತಲೆ, ಮುಖಕ್ಕೆ ಸೂಕ್ತ ಎನಿಸುವಂತಹ ಹೇರ್‌ ಪ್ಯಾಚ್ ಸಿದ್ಧಪಡಿಸಲಾಗುತ್ತದೆ. 18 ತಿಂಗಳು ಬಾಳಿಕೆ ಬರುತ್ತದೆ. ₹3 ಲಕ್ಷ ಶುಲ್ಕ ಆಗುತ್ತದೆ ಎಂದು ಸಂಸ್ಥೆಯ ಪ್ರತಿನಿಧಿ ಭರವಸೆ ನೀಡಿದ್ದರು.ಅದಕ್ಕೊಪ್ಪಿದ ದ್ವಾರಕೀಶ್ ಅವರು ನಗದು ಮತ್ತು ಇಎಂಐ ಮೂಲಕ ₹3 ಲಕ್ಷ ಪಾವತಿಸಿದ್ದರು. ಶುಲ್ಕ ಪಾವತಿಸಿದ ಬಳಿಕ ದ್ವಾರಕೀಶ್ ಮನೆಗೆ ತೆರಳಿದ ಹೆಲ್ತ್ ಕೇರ್ ಸಂಸ್ಥೆಯ ಪ್ರತಿನಿಧಿ, ಅಳತೆ ತೆಗೆದುಕೊಂಡು 3 ತಿಂಗಳಲ್ಲಿ ಹೇರ್‌ ಪ್ಯಾಚ್ ನೀಡಲಾಗುತ್ತದೆ ಎಂದು ಹೇಳಿದ್ದರು. ಆದರೆ, ಅದು ವಿಳಂಬವಾಗಿ 5 ತಿಂಗಳ ನಂತರ ಬಂದಿತ್ತು. ಅಲ್ಲದೇ, ತಲೆಗೆ ಸರಿಯಾಗಿ ಕೂರುತ್ತಿರಲಿಲ್ಲ. ಕೂದಲು ಶೈಲಿಯು ವಿಚಿತ್ರವಾಗಿತ್ತು. ಧರಿಸಿದ ಕೆಲವೇ ದಿನಗಳಲ್ಲಿ ದುರ್ವಾಸನೆ ಬೀರಲು ಆರಂಭಿಸಿತು. ಈ ಬಗ್ಗೆ ದ್ವಾರಕೀಶ್ ಹೆಲ್ತ್ ಕೇರ್ ಸಂಸ್ಥೆಗೆ ದೂರು ನೀಡಿದರು.

ಕೆಲವು ದಿನಗಳ ಬಳಿಕ ಸಂಸ್ಥೆಯು ಹೇರ್ ಪ್ಯಾಚ್ ಬದಲಿಸಿಕೊಡಲು ಮುಂದಾಯಿತು. ಆದರೆ, ಅದು ಕಳಪೆ ಗುಣಮಟ್ಟದ್ದಾಗಿದ್ದ ಕಾರಣ ಸ್ವೀಕರಿಸಲು ದ್ವಾರಕೀಶ್ ನಿರಾಕರಿಸಿದರು. ಹಲವು ತಿಂಗಳಗಳಾದರೂ ಸಮಸ್ಯೆಗೆ ಪರಿಹಾರ ಕಲ್ಪಿಸದ ಕಾರಣ ಬೇಸತ್ತ ದ್ವಾರಕೀಶ್ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.ದ್ವಾರಕೀಶ್ ಮಂಡಿಸಿದ ಸಾಕ್ಷ್ಯಾಧಾರಗಳು ಮತ್ತು ಹೆಲ್ತ್ ಕೇರ್ ಸಂಸ್ಥೆಯ ವಾದ ಆಲಿಸಿದ ಬೆಂಗಳೂರು 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಹೇರ್‌ ಪ್ಯಾಚ್‌ಗಾಗಿ ಕಟ್ಟಿಸಿಕೊಂಡಿದ್ದ ಶುಲ್ಕವನ್ನು ಬಡ್ಡಿ ಸಮೇತ ಮರಳಿಸುವಂತೆ ಆದೇಶಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?
ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ