ಕನ್ನಡ ಮಾತಾಡಿದ್ದಕ್ಕೆ ಬೆದರಿಕೆ ಹಾಕಿದ ಹಾಸ್ಟೆಲ್‌ ವಾರ್ಡನ್‌ ಬಂಧನ

KannadaprabhaNewsNetwork |  
Published : Jan 06, 2026, 04:15 AM IST
Kannada

ಸಾರಾಂಶ

ಕನ್ನಡ ಮಾತನಾಡದಂತೆ ವಿದ್ಯಾರ್ಥಿಗಳಿಗೆ ಬೈದು, ಬೆದರಿಕೆ ಹಾಕಿದ ಎಎಂಸಿ ಎಂಜಿನಿಯರಿಂಗ್‌ ಕಾಲೇಜು ಹಾಸ್ಟೆಲ್‌ ವಾರ್ಡನ್‌ ಸುರೇಶ್‌ (48) ವಿರುದ್ಧ ಯುವ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿವೆ.

 ಬೆಂಗಳೂರು :  ಕನ್ನಡ ಮಾತನಾಡದಂತೆ ವಿದ್ಯಾರ್ಥಿಗಳಿಗೆ ಬೈದು, ಬೆದರಿಕೆ ಹಾಕಿದ ಎಎಂಸಿ ಎಂಜಿನಿಯರಿಂಗ್‌ ಕಾಲೇಜು ಹಾಸ್ಟೆಲ್‌ ವಾರ್ಡನ್‌ ಸುರೇಶ್‌ (48) ವಿರುದ್ಧ ಯುವ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿವೆ.

ಕನ್ನಡ ವಿರೋಧಿ ವಾರ್ಡನ್‌

ಈ ಹಿನ್ನೆಲೆಯಲ್ಲಿ ಕನ್ನಡ ವಿರೋಧಿ ವಾರ್ಡನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಕೇರಳ ಮೂಲದ ಹಾಸ್ಟೆಲ್‌ ವಾರ್ಡನ್‌ ಸುರೇಶ್‌, ಸಂಸ್ಥೆಯಲ್ಲಿ ಕನ್ನಡ ಮಾತನಾಡುವಂತಿಲ್ಲ. ಕನ್ನಡದಲ್ಲಿ ಮಾತನಾಡುವುದಾದರೆ ನಿಮ್ಮ ಮನೆಗೆ ಹೋಗಿ ಮಾತನಾಡು. ಇಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮಾತನಾಡಬಾರದು. ಈ ಬಗ್ಗೆ ನಿನಗೆ ಅನುಮಾನವಿದೆಯೇ? ನೀನು ಕನ್ನಡದಲ್ಲಿ ಮಾತನಾಡಬೇಕೇ ಅಥವಾ ಹಿಂದಿಯಲ್ಲಿ ಮಾತನಾಡಬೇಕೇ ಎಂಬುದನ್ನು ನಾನು ನಿರ್ಧಾರ ಮಾಡುತ್ತೇನೆ. ನೀನು ಕನ್ನಡದಲ್ಲಿ ಮಾತನಾಡುವುದಾದರೆ ನಿಮ್ಮ ಮನೆಯಲ್ಲಿ ಹೋಗಿ ಕುಳಿತುಕೋ. ಇಲ್ಲಿ ನಡೆಯಲ್ಲ. ಇದು ನಿನ್ನ ಮನೆಯಲ್ಲ, ಇನ್‌ಸ್ಟಿಟ್ಯೂಷನ್‌, ಇಲ್ಲಿ ಇರಬೇಕಾದರೆ ಕನ್ನಡ ಮಾತನಾಡಬಾರದು’ ಎಂದು ಬೆದರಿಕೆ ಹಾಕಿದ್ದರು.

ಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಯುವ ಕರ್ನಾಟಕ ವೇದಿಕೆ, ನಮ್ಮ ಕನ್ನಡಿಗರ ವಿಜಯಸೇನೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ಸ್ಥಳೀಯ ಮುಖಂಡರು ಎಎಂಸಿ ಎಂಜಿನಿಯರಿಂಗ್‌ ಕಾಲೇಜು ಮುಂದೆ ಜಮಾವಣೆಗೊಂಡು ತೀವ್ರ ಪ್ರತಿಭಟನೆ ನಡೆಸಿದರು. ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದೆಂದು ಹೇಳಿ ವಿದ್ಯಾರ್ಥಿಗಳನ್ನು ಬೈದು ದಬ್ಬಾಳಿಕೆ ಮಾಡಿ ಉದ್ದಟತನ ಮೆರೆದಿದ್ದ ಕಾಲೇಜು ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಕನ್ನಡ ವಿರೋಧಿ ಹಾಸ್ಟೆಲ್‌ ವಾರ್ಡ್‌ನನ್ನು ಕೆಲಸದಿಂದ ವಜಾ ಮಾಡಿದ್ದು, ಆ ಜಾಗಕ್ಕೆ ಕನ್ನಡಿಗರನ್ನೇ ನೇಮಕ ಮಾಡುವುದಾಗಿ ಒಪ್ಪಿಗೆ ನೀಡಿದೆ. ಇನ್ನು ಮುಂದೆ ಕಾಲೇಜಿನಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಆಡಳಿತ ಮಂಡಳಿಗೆ ತಾಕೀತು ಮಾಡಲಾಗಿದೆ. ಕನ್ನಡಿಗರಿಗೆ ಅನ್ಯಾಯವಾದರೆ, ಕನ್ನಡಿಗ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ ಎಂದು ಯುವ ಕರ್ನಾಟಕ ವೇದಿಕೆ ಅಧ್ಯಕ್ಷ ರೂಪೇಶ್‌ ರಾಜಣ್ಣ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ದೊಮ್ಮಲೂರು ಸೀನಣ್ಣ, ನವೀನ್‌ ನರಸಿಂಹ, ಮೂರ್ತಿ, ಚೇತನ್‌, ಸಿದ್ದು, ಶಶಿಕಿರಣ್‌, ಕಲ್ಕೆರೆ ಭಾಗದ ಮುಖಂಡರಾದ ಮಂಜು, ಶಶಿಕಿರಣ್‌, ಮಹದೇವ ಸೇರಿದಂತೆ ಮತ್ತಿತರರು ಇದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಎಕ್ಸ್ ಪ್ರೆಸ್ ವೇನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ
ಕದೀಮರಿಗೆ ಸಾರ್ವಜನಿಕರಿಂದ ಧರ್ಮದೇಟು..!