ಮದ್ಯಕ್ಕೆ ಹಣ ನೀಡದ ಪತ್ನಿಗೆ ಇರಿದ ಪತಿ!

KannadaprabhaNewsNetwork | Updated : Apr 08 2024, 05:38 AM IST

ಸಾರಾಂಶ

ಮದ್ಯ ಸೇವಿಸಲು ಹಣ ನೀಡದ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು:  ಮದ್ಯ ಸೇವಿಸಲು ಹಣ ನೀಡದ ಪತ್ನಿಗೆ ಪತಿಯೇ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪರಪ್ಪನ ಅಗ್ರಹಾರದ ದೊಡ್ಡನಾಗಮಂಗಲ ನಿವಾಸಿ ಮೈಮುದಾ(28) ಹಲ್ಲೆಗೆ ಒಳಗಾದವರು. ಕೃತ್ಯ ಎಸಗಿದ ಆಕೆಯ ಪತಿ ಮಹಮ್ಮದ್(34) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ರಾಯಚೂರು ಮೂಲದ ಮಹಮ್ಮದ್ ಮತ್ತು ಮೈಮುದಾ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಮಹಮ್ಮದ್ ಕೂಲಿ ಕೆಲಸ ಮಾಡಿಕೊಂಡಿದ್ದು. ಮದ್ಯದ ದಾಸನಾಗಿದ್ದ. ನಿತ್ಯ ಕುಡಿದು ಬಂದು ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಮೈಮುದಾ ಒಂದು ವರ್ಷದ ಹಿಂದೆ ತನ್ನ ಮೂವರು ಮಕ್ಕಳನ್ನು ಕರೆತಂದು ಬೆಂಗಳೂರಿನ ದೊಡ್ಡನಾಗಮಂಗಲದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮನೆ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು.

ಮನೆಗೆ ಆಗಾಗ ಬಂದು ಹಣಕ್ಕೆ ಪೀಡಿಸುತ್ತಿದ್ದ:

ಆರೋಪಿ ಮಹಮ್ಮದ್‌ ಆಗಾಗ ರಾಯಚೂರಿನಿಂದ ಬೆಂಗಳೂರಿಗೆ ಬಂದು ಪತ್ನಿಯ ಮನೆಗೆ ಹೋಗುತ್ತಿದ್ದ. ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸುತ್ತಿದ್ದ. ಹಣ ಇಲ್ಲ ಎಂದಾಗ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಯು ಶನಿವಾರ ರಾತ್ರಿ 9 ಗಂಟೆಗೆ ಸುಮಾರಿಗೆ ಕಂಠಮಟ್ಟ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಮೈಮುದಾಗೆ ಹಣ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಆಕೆ ಹಣ ಇಲ್ಲ ಎಂದಾಗ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿ ಮಹಮ್ಮದ್‌ ಚಾಕು ತೆಗೆದು ಮೈಮುದಾಳ ಎದೆ, ಭುಜದ ಭಾಗಕ್ಕೆ ಹಲವು ಬಾರಿ ಇರಿದಿದ್ದಾನೆ. ಜಗಳ ನೋಡಿದ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಗಾಯಾಳು ಮೈಮುದಾಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಗಲಾಟೆ ವೇಳೆ ಮಕ್ಕಳುಮನೆಯಲ್ಲಿ ಇರಲಿಲ್ಲ:

ಮನೆಯಲ್ಲಿ ದಂಪತಿ ಗಲಾಟೆ ವೇಳೆ ಮಕ್ಕಳು ಮನೆಯಲ್ಲಿ ಇರಲಿಲ್ಲ. ಮನೆಯ ಸಮೀಪದಲ್ಲೇ ಇದ್ದ ಮಾವನ ಮನೆಗೆ ಹೋಗಿದ್ದರು. ತಂದೆಯೇ ತಾಯಿಗೆ ಚಾಕುವಿನಿಂದ ಇರಿದ ಸುದ್ದಿ ಗೊತ್ತಾಗಿ ಬಳಿಕ ಮನೆಗೆ ಬಂದಿದ್ದಾರೆ. ಮಕ್ಕಳು ಮತ್ತು ಸ್ಥಳೀಯರ ಹೇಳಿಕೆ ಪಡೆಯಲಾಗಿದೆ. ಆರೋಪಿಯು ಆಗಾಗ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಆರೋಪಿ ಮಹಮ್ಮದ್‌ನನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಆತನ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article