ಬೆಂಗಳೂರು : ಸರ್ಜಾಪುರ ಹೋಬಳಿ ಹುಸ್ಕೂರು ಗ್ರಾಮದಲ್ಲಿ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವದ ತೇರು ಕುಸಿದು ಬೀಳಲು ನಿರ್ಬಂಧಿತ 80 ಅಡಿ ಎತ್ತರದ ಮಿತಿ ಮೀರಿ ತೇರು ನಿರ್ಮಾಣ ಮಾಡಿರುವುದು ಹಾಗೂ ಇತರ ನಿಯಮಗಳ ಉಲ್ಲಂಘನೆಯೇ ದುರಂತಕ್ಕೆ ಕಾರಣವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ವರದಿಯಲ್ಲಿ ತಿಳಿಸಲಾಗಿದೆ.
ಘಟನೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಮತ್ತು ಇತರ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿಯವರು ಪತ್ರ ಬರೆದಿದ್ದಾರೆ.
ರಥೋತ್ಸವಕ್ಕೆ ಸಂಬಂಧಿಸಿದಂತೆ ದೇವಾಲಯದ ಸಮಿತಿ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಸಭೆ ನಡೆಸಲಾಗಿತ್ತು. 80 ಅಡಿ ಎತ್ತರದ ಮಿತಿಯಲ್ಲಿ ತೇರು ಕಟ್ಟುವುದು ಹಾಗೂ ಇನ್ನಿತರ ಮಾರ್ಗಸೂಚಿಗಳ ಬಗ್ಗೆ ಷರತ್ತುಗಳನ್ನು ವಿಧಿಸಲಾಗಿತ್ತು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು. ಆದರೆ, ರಥೋತ್ಸವದ ದಿನ ತೇರಿನ ಎತ್ತರ 80 ಅಡಿಗಿಂತ ಹೆಚ್ಚು ಎತ್ತರ ಇತ್ತು. ಎಳೆಯುವ ವೇಳೆ ನಿಯಂತ್ರಣ ತಪ್ಪಿ ಕುಸಿದು ಬಿದ್ದಿದೆ. ದುರಂತದ ಬಳಿಕ ಅಧಿಕಾರಿಗಳ ತಂಡ ಸುತ್ತಲಿನ ಗ್ರಾಮಗಳ ತೇರುಗಳ ಎತ್ತರವನ್ನು ಪರಿಶೀಲಿಸಿದ್ದು, ಕೆಲವು ತೇರುಗಳು ಗರಿಷ್ಠ 120 ಅಡಿ ಎತ್ತರದವರೆಗೆ ಇರುವುದು ಕಂಡು ಬಂದಿದೆ.
ತೇರಿನ ಗಾಲಿಗಳ ಕಡಾಣಿಗೆ ಬೋಲ್ಟ್ ಮತ್ತು ನಟ್ ಭದ್ರವಾಗಿರುವಂತೆ ಪರಿಶೀಲಿಸಬೇಕು. ತೇರು ಸಾಗುವ ಮಾರ್ಗದಲ್ಲಿನ ಗುಂಡಿಗಳನ್ನು ಮಚ್ಚಬೇಕು. ನಿಧಾನವಾಗಿ ಎಳೆಯಬೇಕು ಎಂದು ತಾಲೂಕು ಆಡಳಿತ ಸೂಚನೆ ನೀಡಿತ್ತು. ಅಲ್ಲದೇ ತೇರಿಗೆ ಬೆಂಬಲವಾಗಿ ಕ್ರೇನ್ ಬಳಕೆ, ವಿದ್ಯುತ್ ಕಂಬ, ವೈರ್ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತೇರು ವಾಲದಂತೆ ತಡೆಯಲು ಹಗ್ಗವನ್ನು ಕಟ್ಟಬೇಕು. ತೇರು ಎಳೆಯುವಾಗ ಭಕ್ತಾದಿಗಳು 25 ಅಡಿ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಸೇರಿದಂತೆ 10 ಷರತ್ತುಗಳನ್ನು ವಿಧಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಬಾಕ್ಸ್...
ಅಧಿಕಾರಿಗಳಿಬ್ಬರ ಅಮಾನತು
ಘಟನೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಲ್ಲಿ ಹುಸ್ಕೂರು ವೃತ್ತದ ರಾಜಸ್ವ ನಿರೀಕ್ಷಕ ಪ್ರಶಾಂತ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಡಿ.ಕಾರ್ತಿಕ್ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.
ಮಾ.22 ರಂದು ಜಾತ್ರಾ ಮಹೋತ್ಸವದಲ್ಲಿ ತೇರು ಕುಸಿದು ಬಿದ್ದಿತ್ತು. ಘಟನೆಯಲ್ಲಿ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದು, 8 ಜನ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರ್ಘಟನೆ ತಡೆಯಲು ಸ್ಥಳದಲ್ಲಿದ್ದ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆನೇಕಲ್ ತಹಸೀಲ್ದಾರ್ ನೀಡಿದ್ದ ವರದಿಯ ಆಧಾರದ ಮೇಲೆ ಇಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.