ಸ್ಮಗ್ಲರ್‌ಗಳಿಂದ ನಾನು ಟ್ರ್ಯಾಪ್‌ : ವಿದೇಶದಿಂದ ಚಿನ್ನ ಕಳ್ಳಸಾಗಣೆ ವೇಳೆ ಬಂಧಿತ ನಟಿ ರನ್ಯಾ ವರಸೆ

KannadaprabhaNewsNetwork |  
Published : Mar 07, 2025, 01:49 AM ISTUpdated : Mar 07, 2025, 04:34 AM IST
Ranya Rao Kannada Actress

ಸಾರಾಂಶ

 ನಟಿ ರನ್ಯಾ ರಾವ್‌ ಪ್ರಕರಣ ಇದೀಗ ಮಹತ್ವದ ತಿರುವು ನೀಡಿದೆ. ‘ನಾನು ಟ್ರ್ಯಾಪ್‌ಗೊಳಗಾಗಿದ್ದೆ’ ಎಂದು ನಟಿ ರನ್ಯಾ ಹೇಳಿಕೆ ನೀಡಿದ್ದು, ಹೀಗಾಗಿ ‘ಟ್ರ್ಯಾಪ್‌’ನ ಹಿಂದಿರುವ ಹ್ಯಾಂಡ್ಲರ್‌ಗಳಿಗಾಗಿ ಇದೀಗ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಇ) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.

 ಬೆಂಗಳೂರು : ವಿದೇಶದಿಂದ ಚಿನ್ನ ಕಳ್ಳಸಾಗಣೆ ವೇಳೆ ಬಂಧಿತ ನಟಿ ರನ್ಯಾ ರಾವ್‌ ಪ್ರಕರಣ ಇದೀಗ ಮಹತ್ವದ ತಿರುವು ನೀಡಿದೆ. ‘ನಾನು ಟ್ರ್ಯಾಪ್‌ಗೊಳಗಾಗಿದ್ದೆ’ ಎಂದು ನಟಿ ರನ್ಯಾ ಹೇಳಿಕೆ ನೀಡಿದ್ದು, ಹೀಗಾಗಿ ‘ಟ್ರ್ಯಾಪ್‌’ನ ಹಿಂದಿರುವ ಹ್ಯಾಂಡ್ಲರ್‌ಗಳಿಗಾಗಿ ಇದೀಗ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಇ) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.

ಪ್ರಕರಣದಲ್ಲಿ ಬಂಧನ ಬಳಿಕ ವಿಶೇಷ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ವೇಳೆ ‘ನಾನು ಟ್ರ್ಯಾಪ್‌ಗೊಳಗಾಗಿದ್ದೇನೆ, ನನ್ನದೇನೂ ತಪ್ಪಿಲ್ಲ’ ರನ್ಯಾ ಅಲವತ್ತುಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಡಿಆರ್‌ಐ ಅಧಿಕಾರಿಗಳು, ನಟಿ ಸಂಪರ್ಕ ಜಾಲದ ಕುರಿತು ಶೋಧ ಆರಂಭಿಸಿದೆ.

ನಟಿ ರನ್ಯಾ ನಿಜಕ್ಕೂ ವಂಚಕರ ಜಾಲಕ್ಕೆ ಸಿಲುಕಿದ್ದಳೇ ಅಥವಾ ಹಣದಾಸೆಗೆ ಚಿನ್ನ ಕಳ್ಳ ಸಾಗಣೆಗೆ ಆಕೆಯೇ ಸಾಥ್ ನೀಡಿದ್ದಾಳೆಯೇ ಎಂಬುದು ತನಿಖೆ ನಂತರವಷ್ಟೇ ಸ್ಪಷ್ಟವಾಗಬೇಕಿದೆ. ಪ್ರಕರಣದಲ್ಲಿ ತಾನು ಮುಗ್ಧೆ ಎನ್ನುವಂತೆ ಆಕೆ ಬಿಂಬಿಸಲು ಪ್ರಯತ್ನಿಸುತ್ತಿರಲೂಬಹುದು. ಟ್ರ್ಯಾಪ್‌ ಎಂದಿರುವ ಕಾರಣಕ್ಕೆ ಆಕೆಯನ್ನು ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಡಿಆರ್‌ಇ ಮೂಲಕ ಕೋರ್ಟ್‌ಗೆ ಕೋರಲಾಗಿದೆ ಎಂದು ಮೂಲಗಳು ಹೇಳಿವೆ.

ಚೆನ್ನೈ ಕೇಸ್‌ಗೆ ಸಾಮ್ಯತೆ:

ಕಳೆದ ವರ್ಷ ದುಬೈನಿಂದ 12 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡುವಾಗ ಕೇರಳ ಮೂಲದ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯೊಬ್ಬರ ಪತ್ನಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಕಳ್ಳ ಸಾಗಣೆ ಕೃತ್ಯಕ್ಕೆ ಆಕೆಯ ಸ್ನೇಹಿತನೇ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಬಳಸಿದ್ದ ರೋಚಕ ಸಂಗತಿ ತನಿಖೆ ವೇಳೆ ಬಯಲಾಗಿತ್ತು. ಅಲ್ಲದೆ, ಆಕೆಯದ್ದು ಶ್ರೀಮಂತ ಕುಟುಂಬ, ಪತಿ ಬ್ರಿಟನ್‌ ಮೂಲದ ಐಟಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲೂ ಇದ್ದ. ಆಕೆ ಕೂಡ ಕೇರಳದಲ್ಲಿ ಸಣ್ಣಮಟ್ಟದ ಉದ್ದಿಮೆಯನ್ನೂ ನಡೆಸುತ್ತಿದ್ದು, ದಂಪತಿ ವಾರ್ಷಿಕ ಕೋಟ್ಯಂತರ ವಹಿವಾಟು ನಡೆಸಿದ್ದರು. ಹೀಗಾಗಿ ವೈಯಕ್ತಿಕ ಸಂಗತಿ ಮುಂದಿಟ್ಟು ಆಕೆಯ ಆಪ್ತ ಗೆಳೆಯ ಸ್ಮಗ್ಲಿಂಗ್‌ಗೆ ಬಳಸಿಕೊಂಡಿದ್ದ.

ಚೆನ್ನೈ ಟೆಕ್ಕಿ ಪತ್ನಿ ಪ್ರಕರಣಕ್ಕೂ ರನ್ಯಾ ಪ್ರಕರಣಕ್ಕೂ ಕೆಲ ಸಾಮ್ಯತೆ ಕಂಡು ಬಂದಿದೆ. ಇಬ್ಬರೂ ಶ್ರೀಮಂತ ಕುಟುಂಬದವರು. ಹಾಗೆಯೇ ಇಬ್ಬರೂ ದುಬೈನಿಂದಲೇ ಚಿನ್ನ ಸಾಗಿಸಿದ್ದಾರೆ. ಆದರೆ ರನ್ಯಾ ಪ್ರಕರಣದಲ್ಲಿ ಆಕೆ ಟ್ರ್ಯಾಪ್‌ ಕ್ಕೊಳಗಾಗಿದ್ದಾಳೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ ಚೆನ್ನೈ ಟೆಕ್ಕಿ ಪತ್ನಿ ಪ್ರಕರಣದ ಕುರಿತು ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಮೂಲಗಳು ವಿವರಿಸಿವೆ.

ಚೆನ್ನೈ ಟೆಕ್ಕಿ ಪ್ರಕರಣದಲ್ಲಿ ವಿದೇಶದ ಚಿನ್ನ ಕಳ್ಳ ಸಾಗಣಿಕೆದಾರರು ಪತ್ತೆಯಾಗಿರಲಿಲ್ಲ. ಹವಾಲಾ ದಂಧೆ ಮೂಲಕ ಹಣ ವರ್ಗಾವಣೆಯಾಗಿ ದುಬೈನಲ್ಲಿ ಚಿನ್ನ ಖರೀದಿ ನಡೆದಿತ್ತು. ಒಂದು ವೇಳೆ ರನ್ಯಾ ಕೂಡ ಟ್ರ್ಯಾಪ್‌ಗೊಳಗಾಗಿದ್ದರೆ ಅದರ ಹಿಂದಿರುವವರ ಬಗ್ಗೆ ಅವರೇ ಹೇಳಬೇಕು. ಯಾವ ಕಾರಣಕ್ಕಾಗಿ ಟ್ರ್ಯಾಪ್‌ಗೊಳಗಾಗಿದ್ದು ಎಂಬುದನ್ನು ಬಹಿರಂಗಪಡಿಸಬೇಕು. ಇದಕ್ಕಾಗಿ ಆಕೆಯ ವಿಚಾರಣೆ ಅಗತ್ಯವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ವಾದವಾಗಿದೆ ಎನ್ನಲಾಗಿದೆ.

ರನ್ಯಾ ಮೊಬೈಲ್‌ ಜಾಲಾಡಿದ ಡಿಆರ್‌ಐ:

ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ರನ್ಯಾ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ಜಾಲಾಡಿದ್ದಾರೆ. ನಟಿ ಜತೆ ನಿರಂತರ ಸಂಪರ್ಕದಲ್ಲಿದ್ದವರ ಪಟ್ಟಿ ತಯಾರಿಸಿದ್ದು, ಇದರಲ್ಲಿ ಚಿನ್ನ ಸಾಗಣೆ ಜಾಲದಲ್ಲಿ ಪಾತ್ರವಹಿಸಿದವರ ಕುರಿತು ಡಿಆರ್‌ಐ ಶೋಧ ನಡೆಸಿದೆ ಎಂದು ತಿಳಿದು ಬಂದಿದೆ.

ಕಳೆಗುಂದಿದ ರನ್ಯಾ ಹೊಸ ಫೋಟೋ ಬಿಡುಗಡೆ!

ರನ್ಯಾ ಅವರ ವಿಚಾರಣೆ ವೇಳೆಯ ಫೋಟೋವನ್ನು ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಆಕೆಯ ಮುಖ ತೀವ್ರ ಕಳೆಗುಂದಿದಂತೆ ಕಂಡುಬಂದಿದೆ. ವಿಚಾರಣೆ ವೇಳೆ ಆಕೆ ತೀವ್ರವಾಗಿ ಅತ್ತ ಕಾರಣ ಹೀಗಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.

27ಕ್ಕೂ ಹೆಚ್ಚು ಬಾರಿ ದುಬೈ ಯಾತ್ರೆ

ಆರು ತಿಂಗಳ ಅವಧಿಯಲ್ಲಿ 27ಕ್ಕೂ ಹೆಚ್ಚು ಬಾರಿ ದುಬೈಗೆ ರನ್ಯಾ ಪಯಣಿಸಿದ್ದರು. ಈ ಪ್ರವಾಸದ ಕುರಿತು ಅವರಿಂದ ವಿವರ ಪಡೆಯಬೇಕಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ. ಅವರು ದುಬೈಗೆ ನಿರಂತರವಾಗಿ ಹೋಗಿ ಬರುತ್ತಿದ್ದರು. ಅಲ್ಲಿ ಉದ್ಯಮ ಅಥವಾ ಉದ್ಯೋಗ ಹೊಂದಿರುವ ಬಗ್ಗೆ ರನ್ಯಾ ಮಾಹಿತಿ ನೀಡಿಲ್ಲ. ಹೀಗಾಗಿ ಯಾವ ಕಾರಣಕ್ಕೆ ದುಬೈಗೆ ನಿರಂತರ ಭೇಟಿ ಕೊಡುತ್ತಿದ್ದರು ಎಂಬುದು ತಿಳಿಯಬೇಕಿದೆ ಎಂದು ಮೂಲಗಳು ತಿಳಿಸಿವೆ.

- ನಟಿ ಹೇಳಿಕೆ ನಿಜವೇ? । ಡಿಆರ್‌ಇನಿಂದ ತನಿಖೆ ಶುರು

- ನನ್ನದೇನೂ ತಪ್ಪಿಲ್ಲ ಅನ್ನುತ್ತಿರುವ ಡಿಜಿಪಿ ರಾವ್‌ ಪುತ್ರಿ

- ತನಿಖೆ ಬಿಸಿ

ರನ್ಯಾ ಹೊಸ ವರಸೆ- ತನ್ನನ್ನು ಸಿಲುಕಿಸಲಾಗಿದೆ ಎಂದು ವಿಚಾರಣೆ ವೇಳೆ ಹೇಳುತ್ತಿರುವ ನಟಿ

- ರನ್ಯಾ ಹೇಳಿದ್ದು ನಿಜವೇ ಅಥವಾ ಮುಗ್ಧೆ ಎಂಬ ನಾಟಕವೇ: ಸಂದೇಹ

- ಹೀಗಾಗಿ ನಟಿ ಹೇಳಿಕೆ ಬಗ್ಗೆ ಸವಿಸ್ತಾರ ತನಿಖೆಗೆ ಡಿಆರ್‌ಇ ನಿರ್ಧಾರ

ಹೀಗಾಗಿ ರನ್ಯಾರನ್ನು ಕಸ್ಟಡಿಗೆ ನೀಡುವಂತೆ ಕೋರ್ಟಿಗೆ ಕೋರಿಕೆ

ಪುತ್ರಿ ರನ್ಯಾ ತಪ್ಪು ಮಾಡಿದ್ದರೆ ಕ್ರಮವಾಗಲಿ: ಡಿಜಿಪಿ ರಾವ್‌

- ಘಟನೆಯಿಂದ ನನಗೆ ಆಘಾತ: ಮಲ ತಂದೆ 

ಬೆಂಗಳೂರು: ನಟಿ ರನ್ಯಾ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಆಕೆಯ ವಿರುದ್ಧ ಕ್ರಮವಾಗಲಿ. ಆದರೆ ನಮ್ಮ ಕುಟುಂಬದ ಮೇಲೆ ಗೌರವವಿರಲಿ ಎಂದು ಆಕೆಯ ಮಲತಂದೆ, ರಾಜ್ಯ ಪೊಲೀಸ್‌ ಗೃಹ ಮಂಡಳಿ ಡಿಜಿಪಿ ರಾಮಚಂದ್ರರಾವ್‌ ಮನವಿ ಮಾಡಿದ್ದಾರೆ.

ನಾನು ಓರ್ವ ಅಧಿಕಾರಿಯಾಗಿ ಮಾತ್ರವಲ್ಲ, ಮಾನಸಿಕವಾಗಿ ಘಾಸಿಗೊಂಡ ಪೋಷಕನಾಗಿ ಹೇಳುತ್ತಿದ್ದೇನೆ. ಪ್ರಕರಣಲ್ಲಿ ನನಗಾಗಿರುವ ನೋವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ನನ್ನ ಇಡೀ ವೃತ್ತಿ ಬದುಕಲ್ಲಿ ಪ್ರಾಮಾಣಿಕತೆ ಹಾಗೂ ಮೌಲ್ಯಗಳಿಂದ ನಡೆದುಕೊಂಡು ಬಂದಿದ್ದೇನೆ ಎಂದು ಭಾವುಕವಾಗಿ ಹೇಳಿದ್ದಾರೆ.

ನನ್ನ ದಕ್ಷ ವೃತ್ತಿ ಜೀವನದಲ್ಲಿ ಇಂಥ ಸಂಕಷ್ಟ ಪರಿಸ್ಥಿತಿ ಎದುರಾಗುತ್ತಲೇ ಇವೆ. ಕಳೆದ ವರ್ಷ ಜಿತಿನ್ ಜತೆ ರನ್ಯಾ ವಿವಾಹವಾಯಿತು. ಮದುವೆ ಬಳಿಕ ನಮ್ಮಿಂದ ಅವರು ಪ್ರತ್ಯೇಕವಾಗಿ ನೆಲೆಸಿದ್ದರು. ನಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ದಂಪತಿ ಬಂದಿರಲೂ ಇಲ್ಲ ಎಂದು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌