ಜಗದೀಪ್‌ ಧನಕರ್‌ ದಿಢೀರ್‌ ರಾಜೀನಾಮೆ ರಹಸ್ಯ..!

Published : Jul 26, 2025, 08:21 AM ISTUpdated : Jul 26, 2025, 09:04 AM IST
India Gate

ಸಾರಾಂಶ

ತಾವೇ ನೇಮಿಸಿದ ಉಪರಾಷ್ಟ್ರಪತಿಯನ್ನು ಬಿಜೆಪಿ ವರಿಷ್ಠರು ರಾತ್ರೋರಾತ್ರಿ ಕಿತ್ತೊಗೆದಿದ್ದು ಏಕೆ? ಜಗದೀಪ್‌ ಧನಕರ್‌ ದಿಢೀರ್‌ ರಾಜೀನಾಮೆ ರಹಸ್ಯ

ಪ್ರಶಾಂತ್‌ ನಾತು

ಸಾರ್ವಜನಿಕ ಜೀವನದಲ್ಲಿ ಯಾರನ್ನೋ ತಿವಿಯಲು ಯಾರನ್ನೋ ಆಯುಧವಾಗಿ ಬಳಸಲು ಹೋದಾಗ ಅವು ಕೊನೆಗೆ ಚಲಾಯಿಸುವ ಕೈಗಳಿಗೇ ಗಾಯ ಮಾಡುವ ಅಪಾಯ ಇರುತ್ತದೆ ಎನ್ನುವುದಕ್ಕೆ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಪ್ರಕರಣ ಉದಾಹರಣೆ ಅಷ್ಟೆ. ಇಡೀ ಪ್ರಕರಣದಲ್ಲಿ ಕಲಿಯಬೇಕಾದ ನೀತಿ ಕಥೆ ಎಂದರೆ, ಸಂವಿಧಾನಾತ್ಮಕ ಹುದ್ದೆಗಳಲ್ಲಿ ವ್ಯಕ್ತಿಗಳನ್ನು ತಂದು ಕೂರಿಸುವಾಗ ಆ ಹುದ್ದೆಗಿರುವ ಹಿರಿಮೆ, ಗರಿಮೆ, ಘನತೆ ಎತ್ತಿ ಹಿಡಿಯುವ ಜಾಣ್ಮೆ, ಪ್ರಬುದ್ಧತೆ ಮತ್ತು ಬಹುಮುಖ್ಯವಾಗಿ ಮಾತಿನ ಸಂಯಮ ಆ ವ್ಯಕ್ತಿಗೆ ಇದೆಯೋ ಇಲ್ಲವೋ ಎಂಬುದು ಮಾನದಂಡವಾಗಬೇಕೇ ಹೊರತು ದೈನಂದಿನ ಆರೋಪ- ಪ್ರತ್ಯಾರೋಪಗಳ ರಾಜಕಾರಣದಲ್ಲಿ ಅವರನ್ನು ಬಳಸಬಾರದು ಎಂಬುದು ಆಶಯವಾಗಬೇಕು.

ಜಗದೀಪ್ ಧನಕರ್ ವಿಷಯದಲ್ಲಿ ಕೂಡ ಆಗಿದ್ದು ಅದೇ ತಾನೇ? ಅತಿಯಾಗಿ ಮಾತನಾಡುತ್ತಿದ್ದ ಜಗದೀಪ್ ಧನಕರ್ ರಾಜ್ಯಪಾಲರಾಗಿ ಮಮತಾ ಬ್ಯಾನರ್ಜಿ ಅವರ ಚುನಾಯಿತ ಸರ್ಕಾರಕ್ಕೆ ಮುಳ್ಳು ಚುಚ್ಚುತ್ತಿದ್ದರಿಂದಲೇ ಬಿಜೆಪಿ ನಾಯಕರು ಅವರನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ದೇಶದ 2ನೇ ಅತೀ ದೊಡ್ಡ ಸಂವಿಧಾನಿಕ ಪದವಿಯಲ್ಲಿ ಕೂರಿಸಿದರು. ನನ್ನನ್ನು ತಂದಿದ್ದೇ ಚುಚ್ಚಲು ಎಂದು ತಿಳಿದುಕೊಂಡ ಧನಕರ್‌ ಸಾಹೇಬರು ಮೊದಲು ವಿಪಕ್ಷಗಳನ್ನು ನಂತರ ನಿಧಾನವಾಗಿ ಆಡಳಿತ ಪಕ್ಷವನ್ನು ಚುಚ್ಚಲು ಆರಂಭಿಸಿದರು. ಯಾವಾಗ ಇದು ಅಪಥ್ಯವಾಗತೊಡಗಿತೋ ಬಿಜೆಪಿ ನಾಯಕರಿಗೆ ಚುಚ್ಚುವ ಮುಳ್ಳನ್ನು ವ್ಯವಸ್ಥೆಯಿಂದ ತೆಗೆದು ಹಾಕದೇ ಬೇರೆ ದಾರಿ ಇರಲಿಲ್ಲ. ಬಿಜೆಪಿ ನಾಯಕರಿಗೆ ಆಗಿರುವ ಒಂದು ಸಮಾಧಾನ ಎಂದರೆ, ಧನಕರ್‌ ಸಾಹೇಬರು ತಾವೇ ರಾಜೀನಾಮೆ ಕೊಟ್ಟು ಹೋಗಿರುವುದು. ಒಂದು ವೇಳೆ ಅವಿಶ್ವಾಸ ಗೊತ್ತುವಳಿ ತರುವ ಪ್ರಮೇಯ ಉದ್ಭವವಾಗಿದ್ದರೆ ಮೋದಿ ಸರ್ಕಾರಕ್ಕೆ ಇದಕ್ಕಿಂತ ಹತ್ತು ಪಟ್ಟು ಹೆಚ್ಚು ಮುಜುಗರವಾಗುತ್ತಿತ್ತು ಬಿಡಿ.

ತೆರೆಯ ಹಿಂದಿನ ಕಹಾನಿ

ಜಗದೀಪ್‌ ಧನಕರ್‌ ಎಲ್ಲಿಯವರೆಗೆ ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಮಾತ್ರ ಮಾತನಾಡಿ ವಿವಾದ ಸೃಷ್ಟಿಸುತ್ತಿದ್ದರೋ ಅಲ್ಲಿಯವರೆಗೆ ಬಿಜೆಪಿ ನಾಯಕರ good booksನಲ್ಲೇ ಇದ್ದರು. ಆದರೆ ಯಾವಾಗ ಸುಪ್ರೀಂ ಕೋರ್ಟ್ ತೀರ್ಪುಗಳ ಬಗ್ಗೆ ರಾಜ್ಯಸಭೆಯ ಹೊರಗಡೆ ವ್ಯಾಖ್ಯಾನ ಮಾಡಲು ಶುರು ಮಾಡಿದರೋ ಸ್ವತಃ ಮೋದಿ ಮತ್ತು ಅಮಿತ್‌ ಶಾ ಅವರು ಹಿರಿಯ ಕ್ಯಾಬಿನೆಟ್ ಸಚಿವರೊಬ್ಬರನ್ನು ಕಳುಹಿಸಿ ಹೀಗೆಲ್ಲ ಮಾತಾಡಬೇಡಿ ಎಂದು ಹೇಳಿಸಿದರು. ನಂತರ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ, ‘ಒಬ್ಬ ಹಿರಿಯ ಬಿಜೆಪಿ ನಾಯಕರೂ ಸದನದಲ್ಲಿ ನನ್ನ ಪರವಾಗಿ ನಿಲ್ಲಲಿಲ್ಲ’ ಎಂಬ ಸಿಟ್ಟಿನಲ್ಲಿದ್ದರು.

ಆಗಿನಿಂದ ಬೇಸರದಲ್ಲಿಯೇ ಇದ್ದ ಜಗದೀಪ್ ಸಾಹೇಬರು ಮುಂಬೈನಲ್ಲಿ ನಡೆದ ಹತ್ತಿ ಸಂಶೋಧನಾ ಕೇಂದ್ರದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಅವರನ್ನು ಎಲ್ಲರ ಎದುರೇ ‘ರೈತರಿಗೆ ನೀವು ಭರವಸೆ ಕೊಟ್ಟಿದ್ದೇನು? ಈಗ ಆಗುತ್ತಿರುವುದೇನು?’ ಎಂದು ತರಾಟೆಗೆ ತೆಗೆದುಕೊಂಡಾಗ ಸರ್ಕಾರದ ಮಟ್ಟದಲ್ಲಿ ಇದು ಯಾಕೋ ಅತಿಯಾಯಿತು ಎಂದು ಚರ್ಚೆಯಾಗ ತೊಡಗಿತ್ತು. ಕೆಲ ತಿಂಗಳ ಹಿಂದೆ ಪ್ರಧಾನಿಗೆ ಕೊಡುವ ಬೆಂಗಾವಲು ವಾಹನ ನಂಗೆ ಯಾಕೆ ಕೊಡುವುದಿಲ್ಲ ಎಂದು ಗೃಹ ಇಲಾಖೆ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರಂತೆ. ಏಪ್ರಿಲ್‌ನಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಬಂದಾಗ ‘ಉಪ ರಾಷ್ಟ್ರಪತಿಯವರ ಮಧ್ಯೆ ದ್ವಿಪಕ್ಷೀಯ ಮಾತುಕತೆ ಯಾಕೆ ನಡೆಯೋಲ್ಲ? ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಯಾಕೆ ನಂಗೆ ಮಾಹಿತಿ ಕೊಡೋಲ್ಲ?’ ಎಂದೆಲ್ಲ ವಿದೇಶಾಂಗ ಕಾರ್ಯದರ್ಶಿಗಳನ್ನು ಕರೆಸಿ ಕೇಳಿದ್ದರಂತೆ. ಸಂಸತ್ ಟಿವಿ ಆಡಳಿತ ಮಂಡಳಿ ಸಭೆಯಲ್ಲಿ ‘ದೂರದರ್ಶನದಲ್ಲಿ ಹೇಗೆ ಬರೀ ಮೋದಿ ಬಗ್ಗೆ ತೋರಿಸುತ್ತಾರೋ ಅದೇ ರೀತಿ ಸಂಸತ್ ಟಿವಿಯಲ್ಲಿ ನನ್ನ ಪೂರ್ತಿ ಭಾಷಣ ತೋರಿಸಿ, ನನ್ನ ಮಾತುಗಳ ಬಗ್ಗೆ ಡಿಬೇಟ್ ಮಾಡಿ’ ಎಂದಿದ್ದಾರೆ. ಇದೆಲ್ಲವೂ ಕಾಲದಿಂದ ಕಾಲಕ್ಕೆ ಮೋದಿ ಸಾಹೇಬರಿಗೆ ತಲುಪುತ್ತಲೇ ಇತ್ತು. ಪರಿಣಾಮ ಒಂದುಕಡೆ ಉಪ ರಾಷ್ಟ್ರಪತಿ ಮತ್ತು ಬಿಜೆಪಿ ನಾಯಕರ ನಡುವಿನ ಸಂಬಂಧಗಳು ಸ್ಥಿತ್ಯಂತರಗೊಳ್ಳಲು ಶುರುವಾಗಿತ್ತು. ಇನ್ನೊಂದು ಕಡೆ ನಿಧಾನವಾಗಿ ಧನಕರ್‌ ಸಾಹೇಬರಿಗೂ ಸೋನಿಯಾ ಗಾಂಧಿ ಆಪ್ತರಾದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿಗೂ ಗೆಳೆತನ ಶುರು ಆಗಿತ್ತು. ಸರ್ಕಾರಕ್ಕೆ ಜಗದೀಪ್ ಬಗ್ಗೆ ಆತಂಕ ಶುರು ಆಗಿದ್ದೇ ಆಗ. ಆದರೆ ಬಿಸಿ ತುಪ್ಪ ನೋಡಿ ಉಗುಳೋ ಹಾಗಿಲ್ಲ ನುಂಗೋ ಹಾಗಿಲ್ಲ.

ಸೋಮವಾರ ನಿಜಕ್ಕೂ ಆಗಿದ್ದು ಏನು?

ರವಿವಾರ ಮಧ್ಯಾಹ್ನ ಜಗದೀಪ್ ಅವರ ಅಧಿಕೃತ ನಿವಾಸಕ್ಕೆ ಕೆಲ ವಿಪಕ್ಷಗಳ ನಾಯಕರು ಭೇಟಿ ನೀಡಿದ್ದು, ಹಿರಿಯ ಕೇಂದ್ರ ಸಚಿವರಿಗೆ ಗೊತ್ತಾಗಿತ್ತು. ಆದರೆ, ಅಲ್ಲಿ ನ್ಯಾಯಮೂರ್ತಿ ಯಶವಂತ್‌ ವರ್ಮಾ ವಿರುದ್ಧದ ಮಹಾಭಿಯೋಗದ ಅರ್ಜಿಯನ್ನು ತರಾತುರಿಯಲ್ಲಿ ಸಿದ್ಧಪಡಿಸಬೇಕೆಂದು ತೀರ್ಮಾನವಾಗಿತ್ತು ಎನ್ನುವುದು ಲೋಕಸಭೆಯಲ್ಲಿ ಇಂಥದ್ದೇ ಅರ್ಜಿ ತಯಾರಿಸಿ 100 ಸಂಸದರ ಸಹಿ ಸಂಗ್ರಹ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲ. ಆದರೆ, ಯಾವಾಗ ಅಭಿಷೇಕ್ ಮನು ಸಿಂಘ್ವಿ ಬರೀ ವಿಪಕ್ಷಗಳಿಗೆ ಸೇರಿದ 63 ಸಂಸದರ ಸಹಿ ಹಾಕಿಸಿ ಧನಕರ್ ಸಾಹೇಬರ ಕಚೇರಿಗೆ ತಂದು ಕೊಟ್ಟರೋ ಮಧ್ಯಾಹ್ನ 1 ಗಂಟೆಗೆ ತರಾತುರಿಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ಮುಗಿಸಿ ಸದನಕ್ಕೆ ಬಂದು ‘ನಾನು ಅರ್ಜಿ ಸ್ವೀಕಾರ ಮಾಡಿದ್ದೇನೆ, ಅಗತ್ಯ ಕ್ರಮ ಜರುಗಿಸಿ’ ಎಂದು ಸೆಕ್ರೆಟರಿ ಜನರಲ್‌ಗೆ ಹೇಳಿದಾಗ ಸರ್ಕಾರಕ್ಕೆ ಸರ್ಕಾರವೇ ಹೌಹಾರಿತ್ತು. ಕೇಂದ್ರ ಸರ್ಕಾರದ ಜೊತೆಗೆ ಔಪಚಾರಿಕ ಚರ್ಚೆ ಇಲ್ಲದೆ ಇದು ನಡೆದದ್ದು ಮೋದಿ ಮತ್ತು ಶಾ ಇಬ್ಬರಿಗೂ ಅಚ್ಚರಿ ಮೂಡಿಸಿತ್ತು. ಅದಾದ ಒಂದು ಗಂಟೆಯಲ್ಲಿ ಸರ್ಕಾರವನ್ನು ಕೇಳದೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತಾಡಲು ಕೊಟ್ಟಿದ್ದು ಇನ್ನಷ್ಟು ಮುಜುಗರಕ್ಕೆ ಕಾರಣವಾಯಿತು. ಕೂಡಲೇ ಉಪ ರಾಷ್ಟ್ರಪತಿ ವಿರುದ್ಧ 50ಕ್ಕೂ ಹೆಚ್ಚು ರಾಜ್ಯಸಭಾ ಸಂಸದರ ಸಹಿ ಹಾಕಿಸಿ ಅವಿಶ್ವಾಸ ಪ್ರಸ್ತಾವನೆ ತರುವ ಪ್ರಕ್ರಿಯೆ ಆರಂಭಿಸಿದ ಬಿಜೆಪಿ ನಾಯಕರು ಸಂಜೆ 4.30ರ ಕಲಾಪ ಸಲಹಾ ಸಮಿತಿಗೆ ಹೋಗದಿರುವ ತೀರ್ಮಾನ ತೆಗೆದುಕೊಂಡರು.

ಉನ್ನತ ಮೂಲಗಳು ಹೇಳುವ ಪ್ರಕಾರ, ‘ನೀವಾಗಿಯೇ ರಾಜೀನಾಮೆ ಕೊಡಿ, ಇಲ್ಲವಾದಲ್ಲಿ ನಾವು ನಾಳೆ ಬೆಳಗ್ಗೆಯೇ ಅವಿಶ್ವಾಸ ಗೊತ್ತುವಳಿ ತರುತ್ತೇವೆ’ ಎಂದು ರಾಜಸ್ಥಾನದ ಹಿರಿಯ ಸಂಸದರೊಬ್ಬರ ಮೂಲಕ ಸಂಸದರ ಸಹಿ ಹಾಕಿದ ಪತ್ರವನ್ನು ಜಗದೀಪ್ ಧನಕರ್‌ಗೆ ತೋರಿಸಲಾಯಿತು. ಆಗ ರಾತ್ರಿ 8 ಗಂಟೆ ಸುಮಾರಿಗೆ ಬೇರೆ ದಾರಿ ಕಾಣದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುಜುಗರ ತರಬಹುದಾಗಿದ್ದ ಸಂವಿಧಾನಿಕ ತಿಕ್ಕಾಟಕ್ಕೊಂದು ಸುಖವೋ ದುಃಖವೋ ಅಂತ್ಯ ಸಿಕ್ಕಿದೆ ಅಷ್ಟೆ.

ಜಗದೀಪ್ ಧನಕರ್‌ ಸಾಧಿಸಿದ್ದೇನು?

ಭಾರತ ಸಂವಿಧಾನದ ಪ್ರಕಾರ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಸ್ಪೀಕರ್‌ ಮತ್ತು ರಾಜ್ಯಪಾಲರಿಗೆ ದೈನಂದಿನ ರಾಜಕಾರಣದಿಂದ ಮೇಲೆದ್ದು ಸಂವಿಧಾನದ ಸ್ವಾತಂತ್ರ್ಯದ ರಕ್ಷಣೆಯ ಜವಾಬ್ದಾರಿ ಕೊಡಲಾಗಿದೆಯೇ ಹೊರತು ಪಕ್ಷ-ವಿಪಕ್ಷಗಳ ಪರ ವಿರುದ್ಧ ನಿಲ್ಲುವುದಕ್ಕಲ್ಲ. ಒಮ್ಮೆ ಆ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುವ ತೀರ್ಮಾನ ಆದಾಗ ಸಂವಿಧಾನದ ಆರ್ಟಿಕಲ್‌ಗಳು ಏನುಹೇಳುತ್ತವೆ, Things ವ್ಯಾಖ್ಯಾನ ಮುಖ್ಯವಾಗಬೇಕೆ ಹೊರತು ಬೇರೆ ಯಾವುದೂ ಅಲ್ಲ.

ಸ್ಪೀಕರ್‌ ಮತ್ತು ಸಭಾಪತಿಗಳು ಸದನದಲ್ಲಿ ಸರ್ಕಾರಕ್ಕೆ ಚಾಟಿ ಬೀಸುವಾಗ ವಿಪಕ್ಷಗಳಿಗೆ ಸಮಯ ಕೊಡಬೇಕು ರಕ್ಷಣೆಗೆ ನಿಲ್ಲಬೇಕು ಅನ್ನುವುದು ಹೌದಾದರೂ ಹೋಗಿ ವಿಪಕ್ಷಗಳ ಜೊತೆಯೇ ಕೈ ಜೋಡಿಸಿ ರಣತಂತ್ರ ಹೆಣೆಯಲು ಆರಂಭಿಸಿದರೆ ಯಾವುದೇ ಸರ್ಕಾರ, ಸದನ ಮತ್ತು ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಸ್ವತಂತ್ರ ಬಂದಾಗ ಪ್ರಧಾನಿ ಮತ್ತು ಮುಖ್ಯಮಂತ್ರಿ ನೇರವಾಗಿ ಚುನಾಯಿತರಾಗಿ ಬರಬೇಕು. ಆದರೆ, ರಾಷ್ಟ್ರಪತಿ ಅವರ ಚುನಾವಣೆ ಪರೋಕ್ಷವಾಗಿ ನಡೆಯಬೇಕು. ಇಲ್ಲವಾದಲ್ಲಿ ಇಬ್ಬರೂ ಜನರಿಂದ ನೇರವಾಗಿ ಆರಿಸಿ ಬಂದರೆ ತಿಕ್ಕಾಟಗಳು ನಡೆದು ಸರ್ಕಾರ ನಡೆಸುವುದಾದರೂ ಹೇಗೆ ಎಂಬ ನಿಷ್ಕರ್ಷೆಗೆ ಬರಲಾಯಿತು.

ಧನಕರ್‌ ಉಪ ರಾಷ್ಟ್ರಪತಿಯಾಗಿ ಮೊದಲು ವಿಪಕ್ಷಗಳನ್ನು ನಡೆಸಿಕೊಂಡ ರೀತಿಯಾಗಲಿ, ಕೆಲ ತಿಂಗಳಿಂದ ಸರ್ಕಾರದ ಜೊತೆ ನಡೆಸಿದ ತಿಕ್ಕಾಟದ ನಂತರ ಸೋಮವಾರ ನಡೆದುಕೊಂಡ ರೀತಿಯಾಗಲಿ ಯಾವುದು ಕೂಡ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮತ್ತು ಪ್ರಬುದ್ಧತೆಯಿಂದ ಕೂಡಿರಲಿಲ್ಲ.

ಹೊಸ ಉಪ ರಾಷ್ಟ್ರಪತಿ ಯಾರು?

ಬಹುತೇಕ ಮುಂದಿನ ಸೋಮವಾರ ಕೇಂದ್ರ ಚುನಾವಣಾ ಆಯೋಗ ಉಪ ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಬಹುದು. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮಾತ್ರವೇ ಇಲ್ಲಿ ಮತದಾರರಾಗಿದ್ದು, ಮೋದಿ ಸರ್ಕಾರಕ್ಕೆ ಚುನಾವಣೆ ಗೆಲ್ಲುವುದು ಕಷ್ಟವಲ್ಲ. ನಿತೀಶ್ ಕುಮಾರ್‌ ಮತ್ತು ರಾಜನಾಥ್ ಸಿಂಗ್‌ ಹೆಸರು ಓಡಾಡುತ್ತಿವೆಯಾದರೂ ಅಂತಹ ಸಾಧ್ಯತೆಗಳಿಲ್ಲ. ಏಕೆಂದರೆ ಬಿಹಾರದಿಂದ ಹೊರ ಬರುವುದಕ್ಕೆ ನಿತೀಶ್‌ ಒಪ್ಪುವುದಿಲ್ಲ ಮತ್ತು ವಿಪಕ್ಷಗಳ ಸಂವಹನಕ್ಕೆ ಮೋದಿ ಸರ್ಕಾರದ ಬಳಿ ರಾಜನಾಥ್‌ ಬಿಟ್ಟರೆ ಬೇರೆ ಹೆಸರಿಲ್ಲ.

ಬಿಹಾರದ ಚುನಾವಣೆ ಗಮನದಲ್ಲಿರಿಸಿಕೊಂಡು ಹಿಂದುಳಿದ ವರ್ಗದ ರಾಮನಾಥ್‌ ಠಾಕೂರ್ ಹೆಸರು ಓಡುತ್ತಿದೆ. ಆದರೆ, ಇನ್ನು ಯಾವುದೇ ಚರ್ಚೆ ನಡೆದಿಲ್ಲ. ಧನಕರ್ ಪ್ರಕರಣದ ಬಳಿಕ ಆರ್‌ಎಸ್‌ಎಸ್ ಬಿಟ್ಟು ಬೇರೆ ಹಿನ್ನೆಲೆಯ ವ್ಯಕ್ತಿಗಳನ್ನು ಸಂವಿಧಾನಿಕ ಹುದ್ದೆಗಳಲ್ಲಿ ಕೂರಿಸುವ ಸಾಧ್ಯತೆ ಕಡಿಮೆ. ಬಿಹಾರ ಮತ್ತು ಉತ್ತರಪ್ರದೇಶದ ಯಾದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಮತ್ತು ಶಾ ಅವರಿಗೂ ನಿಷ್ಠರಾಗಿರುವ ಭೂಪೇಂದ್ರ ಯಾದವರನ್ನು ತಂದರೂ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲು ಆರ್‌ಎಸ್‌ಎಸ್ ತಯಾರಿಲ್ಲ. ಆರೀಫ್ ಮೊಹಮ್ಮದ್ ಖಾನ್ ಹೆಸರು ಕೂಡ ಓಡುತ್ತಿದೆಯಾದರೂ ಧನಕರ್‌ ಪ್ರಕರಣದ ನಂತರ ಮೋದಿ ಎಷ್ಟರ ಮಟ್ಟಿಗೆ ಹೊರಗಿನಿಂದ ಬಂದವರನ್ನು ತಂದು ಕೂರಿಸುತ್ತಾರೆ ಅನ್ನೋದೇ ಪ್ರಶ್ನೆ?

ಒಂದಂತೂ ನಿಜ. ಗುಲಾಂ ನಬಿ ಆಜಾದ್, ಶಶಿ ತರೂರ್ ಅವರನ್ನು ಕಾಂಗ್ರೆಸ್‌ಗೆ ಮುಜುಗರ ತರಲು ಉಪಯೋಗಿಸುತ್ತಿದ್ದ ಮೋದಿ ಸಾಹೇಬರಿಗೆ ತಮ್ಮ ಸೇನಾ ಪಡೆಯಲ್ಲೂ ಬಂಡಾಯ ಎದ್ದರೆ ಏನಾಗಬಹುದು ಎಂಬ ಮುಜುಗರದ ಪಾಠವನ್ನು ಅವರದೇ ಆಯ್ಕೆಯಾಗಿದ್ದ ಧನಕರ್ ಕಲಿಸಿ ತಾವು ಹಿಟ್ ವಿಕೆಟ್ ಆಗಿದ್ದಾರೆ.

PREV
Read more Articles on

Recommended Stories

ಬಾಯ್‌ಫ್ರೆಂಡಿಂದ ₹2.5 ಕೋಟಿ ಸುಲಿಗೆ ಮಾಡಲು ಮಾಜಿ ಪ್ರಿಯತಮೆ ಯತ್ನ
ಅಣ್ಣನ ಮೇಲಿನ ದ್ವೇಷಕ್ಕೆ ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಂದ ಚಿಕ್ಕಪ್ಪ