ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ

| Published : Sep 13 2025, 02:04 AM IST

ಸಾರಾಂಶ

ದುಷ್ಕರ್ಮಿಗಳು ಯುವಕನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂವಳ್ಳಿ ಬಳಿಯ ನಂಜಾಪುರ ಏತ ನೀರಾವರಿ ಕಾಲುವೆ ಏರಿ ಮೇಲೆ ಗುರುವಾರ ರಾತ್ರಿ ನಡೆದಿದೆ. ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿಯ ಆರ್.ಎಂ.ಮಹದೇವಸ್ವಾಮಿ ಪುತ್ರ ಆರ್.ಎಂ.ಮೋಹನ್ ಕುಮಾರ್ (24) ಕೊಲೆಯಾದ ಯುವಕ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ದುಷ್ಕರ್ಮಿಗಳು ಯುವಕನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂವಳ್ಳಿ ಬಳಿಯ ನಂಜಾಪುರ ಏತ ನೀರಾವರಿ ಕಾಲುವೆ ಏರಿ ಮೇಲೆ ಗುರುವಾರ ರಾತ್ರಿ ನಡೆದಿದೆ. ತಾಲೂಕಿನ ರಾಗಿಬೊಮ್ಮನಹಳ್ಳಿಯ ಆರ್.ಎಂ.ಮಹದೇವಸ್ವಾಮಿ ಪುತ್ರ ಆರ್.ಎಂ.ಮೋಹನ್ ಕುಮಾರ್(24) ಕೊಲೆಯಾದ ಯುವಕ.

ಮೃತ ಆರ್.ಎಂ.ಮೋಹನ್ ಕುಮಾರ್ ಮತ್ತು ಸಹೋದರ ಆರ್.ಎಂ.ಮನೋಜ್ ಇಬ್ಬರು ಸಹ ಎರಡು ಜೆಸಿಬಿಗಳನ್ನು ಹೊಂದಿದ್ದರು. ಗುರುವಾರ ರಾತ್ರಿ ನೆಲ್ಲಿಗೆರೆ ಮತ್ತು ದೊಡ್ಡಬೂವಳ್ಳಿ ನಂಜಾಪುರ ಏತ ನೀರಾವರಿ ಕಾಲುವೆ ಏರಿ ಮೇಲೆ ದುಷ್ಕರ್ಮಿಗಳು ಆರ್.ಎಂ.ಮೋಹನ್ ಕುಮಾರ್ ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಬಿ.ಎಸ್.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ಶೂರೆನ್ಸ್ ಆಸೆಗೆ ಕೊಲೆ?:

ಕೊಲೆಯಾದ ಆರ್.ಎಂ.ಮೋಹನ್ ಕುಮಾರ್ ಮತ್ತು ಇತನ ಸಹೋದರ ಆರ್.ಎಂ.ಮನೋಜ್ ಇಬ್ಬರು ಎರಡು ಜೆಸಿಬಿಗಳನ್ನು ಹೊಂದಿದ್ದರು ಎನ್ನಲಾಗಿದೆ. ಮೃತ ಮೋಹನ್ ಕುಮಾರ್ ಹೆಸರಿನಲ್ಲಿ 50 ಲಕ್ಷ ರು. ಇನ್ಶೂರೆನ್ಸ್ ಮಾಡಿಸಲಾಗಿತ್ತು. ನಾಮಿನಿಯಾಗಿ ತನ್ನ ಸಹೋದರ ಆರ್.ಎಂ.ಮನೋಜ್ ನನ್ನು ಕಾಣಿಸಲಾಗಿತ್ತು. ಅಲ್ಲದೇ, ಜೆಸಿಬಿಗಳ ಸಂಪೂರ್ಣ ವ್ಯವಹಾರವನ್ನು ಆರ್.ಎಂ.ಮೋಹನ್ ಕುಮಾರ್ ಒಬ್ಬನೇ ನಿರ್ವಹಿಸುತ್ತಿದ್ದ. ಇದ್ದರಿಂದ ನೊಂದಿದ್ದ ಆರ್.ಎಂ.ಮನೋಜ್ ಇನ್ಶೂರೆನ್ಸ್‌ನ 50 ಲಕ್ಷ ರು. ಆಸೆಗೆ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿ ಪೊಲೀಸರು ಮನೋಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.