ಬಯಲಾಯ್ತು ಕಾಮಚಂದ್ರರಾವ್‌ ಐಪಿಎಸ್‌ ವಿಡಿಯೋಗಳ ಅಸಲಿ ಮುಖ

Published : Mar 21, 2026, 05:20 AM IST
ramachandra rao

ಸಾರಾಂಶ

ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ರಾಸಲೀಲೆ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳು ಅಸಲಿ ಎಂದು ರಾಜ್ಯ ಸರ್ಕಾರಕ್ಕೆ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದ ವಿಚಾರಣಾ ಸಮಿತಿ ವರದಿ ಸಲ್ಲಿಸಿದೆ.

  ಬೆಂಗಳೂರು :  ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ರಾಸಲೀಲೆ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳು ಅಸಲಿ ಎಂದು ರಾಜ್ಯ ಸರ್ಕಾರಕ್ಕೆ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದ ವಿಚಾರಣಾ ಸಮಿತಿ ವರದಿ ಸಲ್ಲಿಸಿದೆ.

ಈ ವಿಡಿಯೋಗಳು ಬಹಿರಂಗವಾದಾಗ, ತಮ್ಮ ತೇಜೋವಧೆಗೆ ಕೃತಕ ಬುದ್ಧಿಮತ್ತೆಯಿಂದ (ಎಐ) ವಿಡಿಯೋಗಳನ್ನು ಸೃಷ್ಟಿಸಲಾಗಿದೆ ಎಂದು ರಾಮಚಂದ್ರ ರಾವ್ ಹೇಳಿದ್ದರು. ಆದರೆ ಆ ವಿಡಿಯೋಗಳು ಅಸಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಜ್ಞರು ಸಲ್ಲಿಸಿದ ಅಭಿಪ್ರಾಯ ಆಧರಿಸಿ ಸರ್ಕಾರಕ್ಕೆ ಸುಮಾರು 100ಕ್ಕೂ ಹೆಚ್ಚು ಪುಟಗಳ ವರದಿಯನ್ನು ವಿಚಾರಣಾ ಸಮಿತಿ ಸಲ್ಲಿಸಿದೆ.

ಈ ವರದಿ ಸಲ್ಲಿಕೆ ಬೆನ್ನಲ್ಲೇ ರಾವ್ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ (ಡಿಇ) ಸರ್ಕಾರ ಮುಂದಾಗಿದ್ದು, ಇನ್ನೆರೆಡು ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಲಿದ್ದ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.

2016-17ರ ಅವಧಿಯಲ್ಲಿ ರಾಮಚಂದ್ರ ರಾವ್ ಅವರು ಉತ್ತರ ವಲಯ ಐಜಿಪಿ ಆಗಿದ್ದ ಅವಧಿಯಲ್ಲಿ ಇಬ್ಬರು ಮಹಿಳೆಯರ ಜತೆ ಅವರಿಗೆ ‘ಆತ್ಮೀಯ ಒಡನಾಟ’ ಇತ್ತು. ಈ ಸಲುಗೆಯಲ್ಲಿ ತಮ್ಮ ಐಜಿಪಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಆ ಮಹಿಳೆಯರ ಜತೆ ಅನುಚಿತವಾಗಿ ರಾವ್‌ ನಡೆದುಕೊಂಡಿದ್ದಾರೆ. ಈ ವಿಡಿಯೋಗಳನ್ನು ಆ ಮಹಿಳೆಯರೇ ಚಿತ್ರೀಕರಿಸಿದ್ದಾರೆ ಎಂದು ತನ್ನ ವರದಿಯಲ್ಲಿ ಸಮಿತಿ ಉಲ್ಲೇಖಿಸಿದೆ ಎನ್ನಲಾಗಿದೆ.

ಎಫ್‌ಎಸ್‌ಎಲ್ ವರದಿ-ಸಮಿತಿ:

ಕಳೆದ ಜನವರಿಯಲ್ಲಿ ಆಗಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ರಾಮಚಂದ್ರರಾವ್ ಅವರು ಪರ ಸ್ತ್ರೀಯರ ಜತೆ ನಡೆಸಿದ್ದಾರೆ ಎನ್ನಲಾದ ಅನುಚಿತ ವರ್ತನೆಯ ವಿಡಿಯೋಗಳು ಬಹಿರಂಗವಾಗಿದ್ದವು. ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲೇ ಮಹಿಳೆಯರ ಜತೆ ಈ ರೀತಿಯ ವರ್ತನೆ ನಡೆಸಿದ್ದರಿಂದ ರಾವ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ರಾಸಲೀಲೆ ಹಗರಣ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಿತು. ಅಲ್ಲದೆ ಈ ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲನೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್‌.ಹಿತೇಂದ್ರ ನೇತೃತ್ವದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಚಾರಣಾ ಸಮಿತಿಯನ್ನು ರಚಿಸಿತ್ತು. ಎರಡು ತಿಂಗಳ ವಿಚಾರಣೆ ನಡೆಸಿದ ಸಮಿತಿ, ಆ ವಿಡಿಯೋಗಳ ಪರೀಕ್ಷೆಗೆ ಎಫ್ಎಸ್‌ಎಲ್‌ಗೆ ರವಾನಿಸಿತು. ಇವುಗಳನ್ನು ಪರಿಶೀಲಿಸಿ ಆ ವಿಡಿಯೋಗಳು ಅಸಲಿ ಎಂದು ಸಮಿತಿಗೆ ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಿದ್ದಾರೆ.

ಕಚೇರಿ ಸಿಬ್ಬಂದಿ ಹೇಳಿಕೆ ದಾಖಲು:

ಈ ಲೈಂಗಿಕ ಕೃತ್ಯ ರಾಮಚಂದ್ರ ರಾವ್ ಅವರು ಉತ್ತರ ವಲಯ ಐಜಿಪಿ ಆಗಿದ್ದಾಗ ನಡೆದಿದ್ದು ಎಂಬುದು ಸಹ ಖಚಿತವಾಗಿದೆ. ಬೆಳಗಾವಿ ನಗರದಲ್ಲಿದ್ದ ಉತ್ತರ ವಲಯ ಐಜಿಪಿ ಕಚೇರಿಯಲ್ಲೇ ಸಮವಸ್ತ್ರದಲ್ಲಿ ಇಬ್ಬರು ಮಹಿಳೆಯರ ಜತೆ ಐಜಿಪಿ ಅನುಚಿತವಾಗಿ ನಡೆದುಕೊಂಡಿದ್ದರು. ಆ ಇಬ್ಬರು ಮಹಿಳೆಯರನ್ನು ಸಮಿತಿ ಗುರುತಿಸಿದೆ. ಅಲ್ಲದೆ ಈ ಬಗ್ಗೆ ಐಜಿಪಿ ಕಚೇರಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಸಮಿತಿ ಹೇಳಿಕೆ ಪಡೆದಿದೆ. ವಿಡಿಯೋದಲ್ಲಿ ಕಂಡು ಬಂದಿರುವ ಆ ಮಹಿಳೆಯರು ಐಜಿಪಿ ಕಚೇರಿಗೆ ಆಗಾಗ್ಗೆ ಬರುತ್ತಿದ್ದರು ಎಂಬುದನ್ನು ಸಿಬ್ಬಂದಿ ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಕಾಮಪುರಾಣ?

- ಇತ್ತೀಚೆಗೆ ಮಹಿಳೆಯರ ಜತೆ ಐಪಿಎಸ್ ರಾಮಚಂದ್ರರಾವ್‌ ಚಕ್ಕಂದದ ವಿಡಿಯೋ ಬಹಿರಂಗ

- ಇದರ ಬೆನ್ನಲ್ಲೇ ವಿಡಿಯೋ ಸತ್ಯಾಸತ್ಯತೆ ಪರಿಶೀಲನೆಗಾಗಿ ತನಿಖೆಗೆ ಆದೇಶಿಸಿದ್ದ ಸರ್ಕಾರ

- ಇದು ಎಐ ದೃಶ್ಯ ಎಂಬ ರಾವ್‌ ಸ್ಪಷ್ಟನೆ ಸುಳ್ಳು. ಎಫ್‌ಎಸ್‌ಎಲ್‌ನಲ್ಲಿ ಅಸಲಿ ಎಂದು ದೃಢ

- 2016-17ರಲ್ಲಿ ಐಜಿ ಆಗಿದ್ದಾಗ 2 ಮಹಿಳೆಯರ ಜತೆ ಸಲುಗೆ ಹೊಂದಿ ಚಕ್ಕಂದ ಆಡಿದ್ದ ರಾವ್‌

- ಆ ವಿಡಿಯೋಗಳನ್ನು ಮಹಿಳೆಯರೇ ಚಿತ್ರೀಕರಿಸಿದ್ದರು ಎಂದು ದೃಢ. ಸರ್ಕಾರಕ್ಕೆ ವರದಿ ಸಲ್ಲಿಕೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ತಂಗಿಯನ್ನು ಕೆಣಕಿದ್ದಕ್ಕೆ ಕೊಲೆಯಾದ ನಂಜುಂಡಸ್ವಾಮಿ
ಕಲ್ಯಾಣ ಮಂಟಪದಲ್ಲಿ ಅತಿಥಿ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದ್ದವ ಬಂಧನ