ರೌಡಿ ಬಿಕ್ಲು ಶಿವ ಕೊಲೆ ಹತ್ಯೆ ಕೇಸ್ ಸಿಐಡಿಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತಿನಗರ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಕುರಿತು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ಈ ಹತ್ಯೆ ಪ್ರಕರಣದ ಕುರಿತು ಪೂರ್ವ ವಿಭಾಗದ ಪೊಲೀಸರ ತನಿಖೆ ನಡೆದಿರುವಾಗಲೇ ದಿಢೀರ್ ಸಿಐಡಿಗೆ ಸರ್ಕಾರ ಹಸ್ತಾಂತರಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಈ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಭಾರತಿನಗರ ಠಾಣೆಯಲ್ಲಿ ದಾಖಲಾಗಿದ್ದ ರೌಡಿ ಶಿವಪ್ರಕಾಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಡಿಜಿಪಿ ಅವರು ಸೂಚಿಸಿದ್ದಾರೆ ಎಂದರು.
ಜಮೀನು ವಿವಾದದ ಹಿನ್ನೆಲೆಯಲ್ಲಿ ಜು.15 ರಂದು ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ನಿಂತಿದ್ದ ರೌಡಿ ಬಿಕ್ಲು ಶಿವನನ್ನು ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಆಪ್ತ ಎನ್ನಲಾದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಹತ್ಯೆ ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಬೈರತಿ ಬಸವರಾಜು ಅವರ ಹೆಸರನ್ನು 5ನೇ ಆರೋಪಿ ಎಂದು ಉ್ಲಲೇಖಿಸಲಾಗಿತ್ತು. ಪ್ರಕರಣದಲ್ಲಿ ಈವರೆಗೆ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಬಾರಿ ಶಾಸಕ ಬೈರತಿ ಬಸವರಾಜು ಅವರನ್ನು ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಜಗ್ಗ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೆ.ಆರ್.ಪುರ ಸಮೀಪದ ಕಿತ್ತಗನೂರು ಗ್ರಾಮದ ಜಮೀನು ವಿಚಾರವಾಗಿ ಹೆಣ್ಣೂರಿನ ಜಗ್ಗ ಹಾಗೂ ಭಾರತಿನಗರದ ರೌಡಿ ಬಿಕ್ಲು ಶಿವ ಮಧ್ಯೆ ವಿವಾದವಾಗಿತ್ತು. ಈ ಗಲಾಟೆ ಹಿನ್ನೆಲೆಯಲ್ಲಿ ಬಿಕ್ಲು ಶಿವನ ಮೇಲೆ ಹಲ್ಲೆ ನಡೆಸಿ ಜಗ್ಗನ ಗ್ಯಾಂಗ್ ಹತ್ಯೆ ಮಾಡಿತ್ತು ಎಂಬ ಆರೋಪ ಬಂದಿದೆ. ಈ ಸಂಬಂಧ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.