ಕಿಡ್ನಿ ಸಮಸ್ಯೆ : ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಬಂದು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ...!

KannadaprabhaNewsNetwork | Updated : Feb 09 2025, 04:21 AM IST

ಸಾರಾಂಶ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿಬಂದು ನಾಗಮಂಗಲ ತಾಲೂಕಿನ ಗಡಿಭಾಗದ ಖರಡ್ಯ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಭವಿಸಿದೆ.  

 ನಾಗಮಂಗಲ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿಬಂದು ತಾಲೂಕಿನ ಗಡಿಭಾಗದ ಖರಡ್ಯಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಭವಿಸಿದೆ.

ತಾಲೂಕಿನ ಬೆಳ್ಳೂರು ಹೋಬಳಿಯ ಚಬ್ಬನಹಳ್ಳಿಯ ಲಕ್ಷ್ಮಣಗೌಡರ ಪತ್ನಿ ಮಂಜುಳ (45) ಕೆರೆಗೆ ಹಾರಿ ಸಾವನ್ನಪ್ಪಿದವರು.

ಕೆಲ ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜುಳ ಶನಿವಾರ ಬೆಳಗ್ಗೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬರುವುದಾಗಿ ಮನೆಯಲ್ಲಿ ಹೇಳಿಬಂದಿದ್ದರು. ಆದರೆ, ಆಸ್ಪತ್ರೆಗೆ ಹೋಗದೆ 55 ಕಿ.ಮೀ.ದೂರದ ತಾಲೂಕಿನಗಡಿ ಗ್ರಾಮ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಖರಡ್ಯ ಕೆರೆಗೆ ಹಾರಿ ಸಾವನ್ನಪ್ಪಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ರಾಜೇಂದ್ರ ಪರಿಶೀಲನೆ ನಡೆಸಿ ಮಂಜುಳ ಮೃತ ದೇಹವನ್ನು ಕೆರೆಯಿಂದ ಹೊರತೆಗೆಸಿ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಶಾಲೆಯಲ್ಲಿ ಆಹಾರ ಸಾಮಗ್ರಿ ಕಳ್ಳತನಹಲಗೂರು: ಶಾಲೆ ಬಾಗಿಲು ಮುರಿದು ಕಳ್ಳರು ಆಹಾರ ಸಾಮಗ್ರಿಗಳನ್ನು ಹೊತ್ತೊಯ್ದ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ. ಫೆ.7ರಂದು 9 ಗಂಟೆಗೆ ಶಾಲೆಗೆ ಬಂದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ.

 ಶಾಲೆ ಮುಂಭಾಗದ ಗೇಟ್ ಒಡೆದು ಒಳ ನುಗ್ಗಿರುವ ಕಳ್ಳರು ಮಕ್ಕಳ ಬಿಸಿಯೂಟ ಯೋಜನೆಗೆ ಬಳಸುವ 80 ಹಾಲಿನ ಪುಡಿ ಪೊಟ್ಟಣ ಗಳಿದ್ದ ನಾಲ್ಕು ಚೀಲಗಳು, 9 ಅಡುಗೆ ಎಣ್ಣೆ ಪ್ಯಾಕೆಟ್ ಮತ್ತು ಎಚ್.ಪಿ.ಕಂಪನಿ ಸ್ಟೌವ್ ಮತ್ತು ಎರಡು ಗ್ಯಾಸ್ ಸಿಲಿಂಡರ್ ಗಳು ಸೇರಿದಂತೆ ಒಟ್ಟು 29 ಸಾವಿರ ರು. ಮೌಲ್ಯದ ಆಹಾರ ಸಾಮಾಗ್ರಿಗಳು ಕಳ್ಳತನ ಆಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಲಕ್ಷ್ಮೀ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article