ಕಿಟ್ಟಿ ಪಾರ್ಟಿ ವಂಚಕಿ ಸ್ನೇಹಿತೆ ಭೇಟಿಗೆ ವಕೀಲನ ಸೋಗಲ್ಲಿ ಹೋಗಿದ್ದ ಉಪನ್ಯಾಸಕ ಬಂಧನ

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 08:43 AM IST
Arrest representational image

ಸಾರಾಂಶ

ಕಿಟ್ಟಿ ಪಾರ್ಟಿ ಸ್ನೇಹಿತರಿಗೆ ಕೋಟ್ಯಂತರ ವಂಚನೆ ಪ್ರಕರಣದ ಆರೋಪಿಯನ್ನು ಭೇಟಿಯಾಗಲು ವಕೀಲನ ಸೋಗಿನಲ್ಲಿ ಠಾಣೆಗೆ ತೆರಳಿದ್ದ ಖಾಸಗಿ ಕಾಲೇಜಿನ ಉಪನ್ಯಾಸಕನೊಬ್ಬನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಕಿಟ್ಟಿ ಪಾರ್ಟಿ ಸ್ನೇಹಿತರಿಗೆ ಕೋಟ್ಯಂತರ ವಂಚನೆ ಪ್ರಕರಣದ ಆರೋಪಿಯನ್ನು ಭೇಟಿಯಾಗಲು ವಕೀಲನ ಸೋಗಿನಲ್ಲಿ ಠಾಣೆಗೆ ತೆರಳಿದ್ದ ಖಾಸಗಿ ಕಾಲೇಜಿನ ಉಪನ್ಯಾಸಕನೊಬ್ಬನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಂದಿನಿ ಲೇಔಟ್ ನಿವಾಸಿ ಯೋಗಾನಂದ್ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದ ತನ್ನ ಸ್ನೇಹಿತೆ ಜಿ.ಸವಿತಾ ಭೇಟಿಗೆ ತೆರಳಿ ಈಗ ಉಪನ್ಯಾಸಕ ಜೈಲು ಸೇರುವಂತಾಗಿದೆ.

ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ಜನರಿಗೆ ಸವಿತಾ ಪರಿಚಯಿಸಿಕೊಳ್ಳುತ್ತಿದ್ದಳು. ಬಳಿಕ ಕಿಟ್ಟಿ ಪಾರ್ಟಿ ಆಯೋಜಿಸಿ ಶ್ರೀಮಂತ ಕುಟುಂಬದವರಿಗೆ ಕಡಿಮೆ ಬೆಲೆ ಚಿನ್ನ ಕೊಡಿಸುವುದಾಗಿ ನಂಬಿಸಿ ಆಕೆ 20 ಕೋಟಿ ರು.ಗೂ ಅಧಿಕ ವಂಚನೆ ಮಾಡಿದ್ದಳು.

ಈ ಪ್ರಕರಣದಲ್ಲಿ ಆಕೆಯನ್ನು ಬಂಧಿಸಿ ಬಳಿಕೆ ಹೆಚ್ಚಿನ ತನಿಖೆಗೆ ಬಸವೇಶ್ವರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ತನ್ನ ಸ್ನೇಹಿತೆ ಬಂಧನ ಸಂಗತಿ ತಿಳಿದು ಬಸವೇಶ್ವರ ನಗರ ಠಾಣೆಗೆ ಯೋಗಾನಂದ್ ತೆರಳಿದ್ದ. ಆ ವೇಳೆ ಸೆಲ್‌ನಲ್ಲಿದ್ದ ಆಕೆಯನ್ನು ಪೊಲೀಸರ ಅನುಮತಿ ಪಡೆಯದೆ ಮಾತನಾಡಿಸಲು ಉಪನ್ಯಾಸಕ ಯತ್ನಿಸಿದ್ದಾನೆ. ಇದಕ್ಕೆ ಪೊಲೀಸರು ಆಕ್ಷೇಪಿಸಿದ್ದಾಗ ತಾನು ಸವಿತಾ ಪರ ವಕೀಲ ಎಂದು ಹೇಳಿಕೊಂಡು ಜಗಳ ಮಾಡಿದ್ದಾನೆ. ಅದೇ ವೇಳೆ ವಿಜಯನಗರ ಎಸಿಪಿ ಚಂದನ್ ಕುಮಾರ್ ಅವರನ್ನು ಭೇಟಿಯಾಗಲು ಗೋವಿಂದರಾಜನಗರ ಠಾಣೆ ಇನ್ಸ್‌ಪೆಕ್ಟರ್‌ ಸುಬ್ರಹ್ಮಣಿ ತೆರಳಿದ್ದರು.

ಆಗ ಎಸಿಪಿ ಕಚೇರಿಯ ಕೆಳ ಮಹಡಿಯಲ್ಲಿರುವ ಬಸವೇಶ್ವರ ನಗರ ಠಾಣೆಯಲ್ಲಿ ಕೂಗಾಟ ಕೇಳಿ ಸುಬ್ರಹ್ಮಣಿ ಅವರು, ಯಾರೂ ಗಲಾಟೆ ಮಾಡುತ್ತಿರುವುದು ಎಂದು ವಿಚಾರಿಸಿದ್ದಾರೆ. ಆಗ ಅವರ ಕಣ್ಣಿಗೆ ಯೋಗಾನಂದ್‌ ಬಿದ್ದಿದ್ದಾನೆ. ಈ ಹಿಂದೆ ಇದೇ ಠಾಣೆಯಲ್ಲಿ ಸಬ್ ಇನ್ಸ್‌ ಪೆಕ್ಟರ್ ಆಗಿ ಸುಬ್ರಹ್ಮಣಿ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಗಲಾಟೆ ಪ್ರಕರಣದಲ್ಲಿ ಯೋಗಾನಂದ್‌ನನ್ನು ಸುಬ್ರಹ್ಮಣಿ ಬಂಧಿಸಿದ್ದರು. ಹೀಗಾಗಿ ಆತನ ಗುರುತು ಪತ್ತೆ ಹಚ್ಚಿದ ಅವರು, ಯೋಗಾನಂದ್ ವಕೀಲ ಅಲ್ಲ ಎಂದಿದ್ದಾರೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದು ಸುಮೋಟೋ ಕೇಸ್ ದಾಖಲಿಸಿದ್ದಾರೆ.

ಬಾಲ್ಯದ ಗೆಳತಿ:

ಪ್ರೌಢಶಾಲೆಯಲ್ಲಿ ಸವಿತಾ ಹಾಗೂ ಯೋಗನಾಂದ್ ಸಹಪಾಠಿಗಳಾಗಿದ್ದು, ಆಗಿನಿಂದಲೂ ಇಬ್ಬರು ಆಪ್ತ ಒಡನಾಡಿಗಳಾಗಿದ್ದರು. ಬಾಲ್ಯದ ಸ್ನೇಹಿತೆಗೆ ವಕೀಲರ ಸೋಗಿನಲ್ಲಿ ನೆರವಾಗಲು ಹೋಗಿ ಯೋಗಾನಂದ್ ಸಂಕಷ್ಟಕ್ಕೆ ತುತ್ತಾಗಿದ್ದಾನೆ ಎಂದು ಮೂಲಗಳು ಹೇಳಿವೆ.

PREV
Read more Articles on

Recommended Stories

ಉಬರ್ ಚಾಲಕನಿಗೆ ಬೆದರಿಸಿ ಕಾರು ದೋಚಿದ್ದ ರೌಡಿ ಸೇರಿ ಇಬ್ಬರ ಸೆರೆ : ಕಾರು, 3 ಮೊಬೈಲ್‌ ವಶ
ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗನ ನಾಪತ್ತೆ ನಾಟಕ : ತಾಯಿಗೆ ಹೈಕೋರ್ಟಿಂದ 2 ಲಕ್ಷ ದಂಡ!