ಬೈಕ್‌ ಡಿಕ್ಕಿಯಾಗಿ ಟೀ ಕುಡಿಯಲುಬಂದ ಕಾರ್ಮಿಕ ಸ್ಥಳದಲ್ಲೇ ಸಾವು

KannadaprabhaNewsNetwork | Published : Jan 16, 2024 1:51 AM

ಸಾರಾಂಶ

ಟೀ ಕುಡಿಯಲು ರಸ್ತೆ ದಾಟುತ್ತಿದ್ದ ಮಹಾರಾಷ್ಟ್ರ ಮೂಲದ ದೇವನಹಳ್ಳಿಯ ಕಾರ್ಮಿಕನಿಗೆ ಬೈಕ್‌ ಗುದ್ದಿ ಸಾವು

ಕನ್ನಡಪ್ರಭ ವಾರ್ತೆ ಬೆಂಗಳೂರು

ವೇಗವಾಗಿ ಬಂದ ಅಪರಿಚಿತ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ನಾಗೇಶ್‌ (20) ಮೃತ ಪಾದಾಚಾರಿ. ಭಾನುವಾರ ರಾತ್ರಿ 9.15ರ ಸುಮಾರಿಗೆ ಬೆಂಗಳೂರು-ಬಳ್ಳಾರಿ ಮುಖ್ಯರಸ್ತೆಯ ಸಣ್ಣ ಅಮಾನಿಕೆರೆ ಗೇಟ್‌ ಬಳಿ ಈ ಅಪಘಾತ ಸಂಭವಿಸಿದೆ.

ಮಹಾರಾಷ್ಟ್ರದ ನಾಂದೇಡ್‌ ಮೂಲದ ಮೃತ ನಾಗೇಶ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ್ಪಾರಹಳ್ಳಿ ಗ್ರಾಮದ ಥೀಮ್ ಆಂಬಿಯನ್ಸ್‌ ಪ್ರಾಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಿರ್ಮಾಣದ ಹಂತದ ಕಟ್ಟಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಇಬ್ಬರು ಸ್ನೇಹಿತರ ಜತೆಗೆ ಟೀ ಕುಡಿಯಲು ಹೋಗುವಾಗ ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಏಕಾಏಕಿ ನಾಗೇಶ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ನಾಗೇಶ್‌ಗೆ ತಲೆ ಹಾಗೂ ಕೈ ಕಾಲುಗಳಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಆ್ಯಂಬುಲೆನ್ಸ್‌ ಕರೆಸುವ ವೇಳೆಗೆ ತೀವ್ರ ರಕ್ತಸ್ರಾವವಾಗಿ ನಾಗೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಪಘಾತ ಎಸಗಿದ ದ್ವಿಚಕ್ರ ವಾಹನ ಸವಾರ ಘಟನೆ ಬಳಿಕ ಪರಾರಿಯಾಗಿದ್ದಾನೆ. ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದ್ವಿಚಕ್ರ ವಾಹನ ಸವಾರನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ ಗುದ್ದಿದ ಆಟೋ: ತಂದೆಸಾವು, ಮಕ್ಕಳಿಬ್ಬರಿಗೆ ಗಾಯಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ಯಾಸೆಂಜರ್‌ ಆಟೋವೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಾರುತಿನಗರದ ಮಹದೇಶ್ವರನಗರ ಮುಖ್ಯರಸ್ತೆ ನಿವಾಸಿ ಚಂದ್ರಶೇಖರ್‌ (42) ಮೃತ ಸವಾರ. ಇವರ ಮಕ್ಕಳಾದ ಲೋಹಿತ್‌ (13) ಮತ್ತು ಗ್ರೀಷ್ಮಾ (9) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಂದ್ರಶೇಖರ್‌ ತಮ್ಮ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಪೀಣ್ಯ 2ನೇ ಹಂತದ ಬಸ್‌ ನಿಲ್ದಾಣದ ಕಡೆಯಿಂದ ಹೆಗ್ಗನಹಳ್ಳಿ ಕ್ರಾಸ್‌ ಕಡೆಗೆ ಹೋಗುತ್ತಿದ್ದರು. ಹೆಗ್ಗನಹಳ್ಳಿ ಮುಖ್ಯರಸ್ತೆಯ ಫುಡ್ ಲ್ಯಾಂಡ್‌ ಹೈಪರ್‌ ಮಾರ್ಕೆಟ್‌ ಎದುರು ಈ ಘಟನೆ ನಡೆದಿದೆ.ಚಂದ್ರಶೇಖರ್‌ ತಮ್ಮ ಇಬ್ಬರು ಮಕ್ಕಳಿಗೆ ಹೋಟೆಲ್‌ನಲ್ಲಿ ತಿಂಡಿ ತಿನಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಪ್ಯಾಸೆಂಜರ್‌ ಆಟೋ ರಿಕ್ಷಾ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಮೂವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರ ಚಂದ್ರಶೇಖರ್‌ ಅವರಿಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಳಾಗಿದೆ. ಸ್ಥಳೀಯರು ಗಾಯಾಳು ಚಂದ್ರಶೇಖರ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.ಅಪಘಾತದ ಬಳಿಕ ಪ್ಯಾಸೆಂಜರ್‌ ಆಟೋರಿಕ್ಷಾ ವಾಹನ ಸಹಿತ ಪರಾರಿಯಾಗಿರುವ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಪೀಣ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article