ಕನ್ನಡಪ್ರಭ ವಾರ್ತೆ ಮದ್ದೂರು
ಜಮೀನು ವಿವಾದ ಹಿನ್ನೆಲೆ ಮಲತಾಯಿಯೇ ತನ್ನ ಕುಟುಂಬದವರೊಂದಿಗೆ ಸೇರಿ ಸವತಿ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ.ಗ್ರಾಮದ ದಿ.ಪುಟ್ಟಸ್ವಾಮಿ ಅವರ ಎರಡನೇ ಪತ್ನಿ ಭಾಗ್ಯ ತನ್ನ ಗಂಡನ ಮೊದಲನೇ ಪತ್ನಿ ದಿ.ಶಕುಂತಲಾ ಪುತ್ರಿ ರೋಜಾಳ ಮೇಲೆ ಕುಟುಂಬದವರೊಂದಿಗೆ ಸೇರಿ ಗ್ರಾಮದ ಹೊರವಲಯದ ಜಮೀನಿನ ಕೆಸರು ಗದ್ದೆಯಲ್ಲಿ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ಕೊಪ್ಪ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಹಲ್ಲೆಯಿಂದ ರೋಜಾಳ ತಲೆ, ಎದೆ, ಹೊಟ್ಟೆ ಮತ್ತು ಕೈಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಪುಟ್ಟಸ್ವಾಮಿ ಕಳೆದ 25 ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ಶಕುಂತಲಾಳನ್ನು ವಿವಾಹವಾಗಿದ್ದರು. ದಂಪತಿಗೆ ರೋಜಾ ಸೇರಿದಂತೆ ಮೂವರು ಮಕ್ಕಳಿದ್ದಾರೆ.ಹಲವು ವರ್ಷಗಳ ಹಿಂದೆ ಶಕುಂತಲಾ ಅನಾರೋಗ್ಯದಿಂದ ಮೃತಪಟ್ಟ ಕಾರಣ ಮಕ್ಕಳ ಲಾಲನೆ ಮತ್ತು ಪಾಲನೆಗಾಗಿ ತನ್ನ ಎರಡನೇ ಅಕ್ಕನ ಮಗಳು ಭಾಗ್ಯಳನ್ನು ವಿವಾಹವಾಗಿದ್ದರು. ಈಕೆಗೂ ಸಹ ಸಿಂಚನ ಎಂಬ ಮಗಳಿದ್ದಾಳೆ. ಪುಟ್ಟಸ್ವಾಮಿಯೊಂದಿಗೆ ವಿವಾಹದ ನಂತರ ಸಂಸಾರ ನಡೆಸುತ್ತಿದ್ದ ಭಾಗ್ಯ ಮಲತಾಯಿ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದೆ ಗಂಡನ ಮನೆ ತೊರೆದು ತವರು ಮನೆ ಸೇರಿದ್ದಳು.
ಕಳೆದ 8 ವರ್ಷಗಳ ಹಿಂದೆ ಪುಟ್ಟಸ್ವಾಮಿ ತೀರಿಕೊಂಡ ನಂತರ ಮತ್ತೆ ಗಂಡನ ಮನೆಗೆ ಬಂದ ಭಾಗ್ಯ ಆಸ್ತಿ ವಿವಾದ ಸೃಷ್ಟಿಸಿ ಮಲತಾಯಿ ಮಕ್ಕಳ ಮೇಲೆ ಪದೇ ಪದೇ ದೌರ್ಜನ್ಯ ನಡೆಸಿ ಕೊಲೆ ಬೆದರಿಕೆ ಹಾಕಿ ಆಸ್ತಿಯನ್ನು ತನ್ನ ವಶಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದಳು.ಭಾನುವಾರ ಸಂಜೆ ರೋಜಾ ತನ್ನ ಪಾಲಿಗೆ ಬಂದಿದ್ದ ಎರಡು ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಅಲ್ಲಿಗೆ ಧಾವಿಸಿದ ಭಾಗ್ಯ ತನ್ನ ಕುಟುಂಬದವರೊಂದಿಗೆ ಸೇರಿ ಮಲತಾಯಿ ಮಗಳು ರೋಜಾಳನ್ನು ಕೆಸರುಗದ್ದೆಯಲ್ಲಿ ತುಳಿದು ಹಲ್ಲೆ ನಡೆಸಿ ಆಕೆ ಕತ್ತಿನಲ್ಲಿದ್ದ ಮಾಂಗಲ್ಯ ಸರ, ತಾಳಿ ಸೇರಿದಂತೆ ಚಿನ್ನಾಭರಣಗಳನ್ನು ದೋಚಿ ಕೊಲೆ ಪ್ರಯತ್ನ ನಡೆಸಿದ್ದಾರೆ ಎಂದು ಎಂ.ಪಿ.ರೋಜಾ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಕೊಪ್ಪ ಠಾಣೆ ಪಿಎಸ್ಐ ಭೀಮಪ್ಪ ಬಾಣಸಿ ಅವರು ಭಾಗ್ಯ ಮತ್ತು ಕುಟುಂಬದ ವಿರುದ್ಧ ಬಿಎಸ್ಎನ್ ಕಾಯ್ದೆ 115, 352,119,351ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.