ಉದ್ಯಮಿಗೆ ಮಂಜೂರಾಗಿದ್ದ ಸಾಲಅಕ್ರಮವಾಗಿ ಪಡೆದವನ ಬಂಧನ

KannadaprabhaNewsNetwork | Published : Feb 6, 2024 1:31 AM

ಸಾರಾಂಶ

ಉದ್ದಿಮೆ ವಿಸ್ತರಣೆಗೆ ಪಡೆದಿದ್ದ ಸಾಲವನ್ನು ಬೇರೆಯವರಿಗೆ ವರ್ಗ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ಓರ್ವನ ಬಂಧನ ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಚಿತ ಮಹಿಳಾ ಉದ್ಯಮಿಯೊಬ್ಬರಿಗೆ ಬ್ಯಾಂಕ್‌ನಲ್ಲಿ ಮಂಜೂರಾಗಿದ್ದ ₹2.94 ಕೋಟಿ ಸಾಲವನ್ನು ಅಕ್ರಮವಾಗಿ ಪಡೆದು ವಂಚಿಸಿದ ಪ್ರಕರಣ ಸಂಬಂಧ ಖಾಸಗಿ ಕಂಪನಿ ನಿರ್ದೇಶಕನೊಬ್ಬನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಸ್‌ಎಲ್‌ಎನ್ ಆ್ಯಂಡ್‌ ಸಿಎನ್‌ಸಿ ಟೆಕ್ ಪ್ರೈ.ಲಿ. ನಿರ್ದೇಶಕ ಅಶೋಕ್ ಬಂಧಿತನಾಗಿದ್ದು, ಇನ್ನುಳಿದ ಆರೋಪಿಗಳಾದ ಲೆಕ್ಕಪರಿಶೋಧಕ ಕೆಸಿಎನ್ ಗೌಡ, ಎಸ್‌ಎಲ್‌ಎನ್‌ ಆ್ಯಂಡ್‌ ಸಿಎನ್‌ಸಿ ಟೆಕ್ ಪ್ರೈ.ಲಿ. ನಿರ್ದೇಶಕರಾದ ಮಹಾಲಿಂಗಪ್ಪ ಬೋಥೆಗೌಡ, ಶಿವಪ್ರಸಾದ್, ಲೆಕ್ಕಪರಿಶೋಧಕ ಸಿ.ಮಂಜು, ಪೀಣ್ಯ ಕೆನರಾ ಬ್ಯಾಂಕ್ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಮೇಶ್‌ ಹಾಗೂ ವ್ಯವಸ್ಥಾಪಕ ಕೃಷ್ಣರಾಜ್ ಕೆ.ಭಟ್ ಪತ್ತೆಗೆ ತನಿಖೆ ನಡೆದಿದೆ.

ಮಾಗಡಿ ರಸ್ತೆ ಹೇರೋಹಳ್ಳಿ ವಿಶ್ವನೀಡಂ ಸಮೀಪದ ಕೆಎಲ್‌ಒ ಎಂಜಿನಿಯರಿಂಗ್ ಕಂಪನಿ ಮಾಲಕಿ ಬಿ.ಎಸ್.ಮೇಘನಾ ಅವರಿಗೆ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಮೇಘನಾ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಅಶೋಕ್‌ನನ್ನು ಬಂಧಿಸಿದ್ದಾರೆ.

ಏನೀದು ಪ್ರಕರಣ?:

ನಾಲ್ಕು ವರ್ಷಗಳ ಹಿಂದೆ ತಮ್ಮ ಉದ್ದಿಮೆ ವಿಸ್ತರಿಸಲು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಾಲ ಕೋರಿ ಮೇಘನಾ ಅರ್ಜಿ ಸಲ್ಲಿಸಿದ್ದರು. ಆಗ 2019ರಲ್ಲಿ ಅವರಿಗೆ ₹2.94 ಕೋಟಿ ಸಾಲ ಮಂಜೂರಾಯಿತು. ಆದರೆ ಅದೇ ವೇಳೆ ಕೊರೋನಾದಿಂದ ಲಾಕ್‌ಡೌನ್‌ ಆದ ಪರಿಣಾಮ ಬ್ಯಾಂಕ್‌ನಿಂದ ಸಾಲ ಪಡೆಯದೆ ಮೇಘನಾ ದಂಪತಿ ಸುಮ್ಮನಾದರು. ಇದಾದ ಮೂರು ವರ್ಷಗಳ ಬಳಿಕ ಈ ದಂಪತಿಗೆ ಸಾಲವನ್ನು ಮರು ಪಾವತಿಸುವಂತೆ ಬ್ಯಾಂಕ್‌ನಿಂದ ನೋಟಿಸ್ ಬಂದಿತು.

ಈ ನೋಟಿಸ್‌ ನೀಡಿ ಗಾಬರಿಗೆ ಒಳಗಾದ ಮೇಘನಾ ದಂಪತಿ, ತಕ್ಷಣವೇ ಬ್ಯಾಂಕ್‌ಗೆ ತೆರಳಿ ತಮಗೆ ಮಂಜೂರಾದ ಸಾಲವನ್ನು ಡ್ರಾ ಮಾಡಿಕೊಂಡಿಲ್ಲ. ಹೀಗಿರುವಾಗ ಸಾಲ ಮರುಪಾತಿಸುವಂತೆ ನೋಟಿಸ್ ಹೇಗೆ ಬಂದಿದೆ ಎಂದು ಪ್ರಶ್ನಿಸಿದರು. ಕೊನೆಗೆ ದಾಖಲೆಗಳನ್ನು ಪರಿಶೀಲಿಸಿದಾಗ ಮೇಘನಾ ಅವರಿಗೆ ಮಂಜೂರಾಗಿದ್ದ ಸಾಲ ಅಕ್ರಮವಾಗಿ ಎಸ್‌ಎಲ್‌ಎನ್‌, ಸಿಎನ್‌ಸಿ ಕಂಪನಿಗಳ ಖಾತೆಗೆ ಹಣ ಜಮೆ ಆಗಿರುವುದು ಪತ್ತೆಯಾಗಿದೆ. ಕೂಡಲೇ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ಮೇಘನಾ ದೂರು ಸಲ್ಲಿಸಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿ ಅಶೋಕ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮ್ಮ ಕಂಪನಿಯ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನೆಯನ್ನು ಅಡಿಟರ್ ಕೆಸಿಎನ್‌ ಗೌಡ ಅವರಿಗೆ ಮೇಘನಾ ನೀಡಿದ್ದರು. ಆಗ ನಂಬಿಕೆ ದ್ರೋಹ ಮಾಡಿದ ಆರೋಪಿ, ಮೇಘನಾ ಅವರ ಕಂಪನಿಯ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಮಂಜೂರಾಗಿದ್ದ ಬ್ಯಾಂಕ್ ಸಾಲವನ್ನು ಪಡೆದು ವಂಚಿಸಿದ್ದರು. ಈ ಕೃತ್ಯಕ್ಕೆ ಹಣದಾಸೆಗೆ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರರು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share this article