ಪ್ರಯಾಗರಾಜ್‌ಗೆ ಭಕ್ತರ ದಂಡು: ಕುಂಭಮೇಳದ ಹಾದಿಯಲ್ಲಿ ತಗ್ಗದ 300 ಕಿಮೀ ಟ್ರಾಫಿಕ್‌ ಜಾಮ್‌

KannadaprabhaNewsNetwork | Updated : Feb 11 2025, 04:27 AM IST

ಸಾರಾಂಶ

ಕುಂಭಮೇಳದಲ್ಲಿ ಭಾಗಿಯಾಗಲು ಭಕ್ತರ ದಂಡು ಹರಿದುಬರುವುದು ಮುಂದುವರೆದಿದ್ದು, ಪ್ರಯಾಗರಾಜ್‌ಗೆ ಹೋಗುವ ಹಾದಿಯಲ್ಲಿ ನಿರ್ಮಾಣವಾಗಿರುವ 250-300 ಕಿ.ಮೀ ಉದ್ದದಷ್ಟು ಟ್ರಾಫಿಕ್‌ ಜಾಮ್‌ ಸೋಮವಾರವೂ ಮುಂದುವರೆದಿದೆ.  

ಪ್ರಯಾಗರಾಜ್‌: ಕುಂಭಮೇಳದಲ್ಲಿ ಭಾಗಿಯಾಗಲು ಭಕ್ತರ ದಂಡು ಹರಿದುಬರುವುದು ಮುಂದುವರೆದಿದ್ದು, ಪ್ರಯಾಗರಾಜ್‌ಗೆ ಹೋಗುವ ಹಾದಿಯಲ್ಲಿ ನಿರ್ಮಾಣವಾಗಿರುವ 250-300 ಕಿ.ಮೀ ಉದ್ದದಷ್ಟು ಟ್ರಾಫಿಕ್‌ ಜಾಮ್‌ ಸೋಮವಾರವೂ ಮುಂದುವರೆದಿದೆ. ಕೆಲವೆಡೆ ವಾಹನಗಳು 48 ಗಂಟೆ ನಿಂತಲ್ಲೇ ನಿಂತಿದ್ದರೆ, ಕೆಲವೆಡೆ ಅತ್ಯಂತ ನಿಧಾನಗತಿಯ ವಾಹನ ಸಂಚಾರ ಕಂಡುಬಂದಿದೆ.

ವಸಂತ ಪಂಚಮಿಯ ಪವಿತ್ರ ಸ್ನಾನದ ಬಳಿಕ ಕುಂಭಕ್ಕೆ ಆಗಮಿಸುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇತ್ತಾದರೂ, ವಾರಾತ್ಯವಾದ್ದರಿಂದ ಇದರ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪ್ರಯಾಗ್‌ರಾಜ್‌ಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದಿದ್ದಾರೆ.

ಈ ನಡುವೆ ಮಹಾಕುಂಭದಲ್ಲಿ ಭಾಗವಹಿಸಲು ಇಷ್ಟೊಂದು ಭಕ್ತರು ಪ್ರಯಾಗ್‌ರಾಜ್‌ಗೆ ಬರುತ್ತಿರುವುದು ನಮ್ಮ ಸೌಭಾಗ್ಯ. ಆದರೆ ಅವರೆಲ್ಲರ ಸುರಕ್ಷೆತೆಯ ಬಗ್ಗೆ ಚಿಂತೆಯಾಗಿದೆ. ದಯವಿಟ್ಟು ಇನ್ನೆರಡು ದಿನ ಈ ಮಾರ್ಗದಲ್ಲಿ ಪ್ರಯಾಣಿಸಬೇಡಿ. ಮೊದಲು ರಸ್ತೆ ಖಾಲಿ ಇದೆಯೇ ಎಂಬುದನ್ನು ಗೂಗಲ್‌ನಲ್ಲಿ ನೋಡಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಭಕ್ತರಿಗೆ ಮನವಿ ಮಾಡಿದ್ದಾರೆ.

ದೇಶದ ಜನಸಂಖ್ಯೆಯ ಶೇ.33ರಷ್ಟು ಭಾಗ ಜನ ಕುಂಭಮೇಳದಲ್ಲಿ ಭಾಗಿ!

ಪ್ರಯಾಗರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಈ ಬಾರಿ ಸಮರೋಪಾದಿಯಲ್ಲಿ ದೇಶವಿದೇಶಗಳ ಭಕ್ತರನ್ನು ಸೆಳೆಯುತ್ತಿದ್ದು, ಭಕ್ತರ ಸಂಖ್ಯೆಯಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.ಉತ್ತರಪ್ರದೇಶ ಸರ್ಕಾರವು ಈ ಬಾರಿಯ ಕುಂಭಕ್ಕೆ 40-45 ಕೋಟಿ ಭಕ್ತರು ಬರುತ್ತಾರೆ ಎಂದು ಅಂದಾಜಿಸಿತ್ತು. 

ಆದರೆ ಇದನ್ನು ಮೀರಿ ಜ.13ರಿಂದ ಶುರುವಾದ ಕುಂಭಮೇಳದಲ್ಲಿ ಕೇವಲ 45 ದಿನಗಳಲ್ಲಿ 44 ಕೋಟಿ ಜನ ಭಾಗಿಯಾಗಿದ್ದಾರೆ. ಅಂದರೆ ದೇಶದ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಒಂದೇ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದಾರೆ.ಪ್ರಯಾಗ್‌ರಾಜ್‌ಗೆ ನಿತ್ಯವೂ ಸರಾಸರಿ 1ರಿಂದ 1.45 ಕೋಟಿ ಜನರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈ ಲೆಕ್ಕಾಚಾರದಲ್ಲೇ ನೋಡಿದರೆ ಫೆ.26ರ ವರೆಗೆ ಇನ್ನೂ 20-22 ಕೋಟಿ ಭಕ್ತರು ಆಗಮಿಸಬಹುದು ಎಂದು ಅಂದಾಜಿಸಲಾಗಿದೆ. ಇದು ನಿಜವಾದಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದವರ ಸಂಖ್ಯೆ 60 ಕೋಟಿ ದಾಟಲಿದೆ.

Share this article