ಅಸ್ಸಾಂ ಮೂಲದ ಯುವತಿ ಬರ್ಬರ ಕೊಲೆ ಕೇಸ್‌ : ಲವ್ವರ್‌ ಕೊಂದು 1 ದಿನ ಶವದ ಜತೆಗಿದ್ದವ ಸೆರೆ

Published : Nov 30, 2024, 09:29 AM IST
Crime News

ಸಾರಾಂಶ

ಇತ್ತೀಚೆಗೆ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಇತ್ತೀಚೆಗೆ ಸರ್ವೀಸ್‌ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಆರವ್‌ ಅನಾಯ್‌(21) ಬಂಧಿತ. ಆರೋಪಿಯು ನ.24ರಂದು ಇಂದಿರಾನಗರ 2ನೇ ಹಂತದ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ನ ಸರ್ವಿಸ್‌ ಪ್ಲ್ಯಾಟ್‌ನಲ್ಲಿ ಸ್ನೇಹಿತೆ ಅಸ್ಸಾಂ ಮೂಲದ ಮಾಯಾ ಗೋಗಾಯಿ(19) ಎಂಬಾಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಹತ್ಯೆಯಾದ ಅಸ್ಸಾಂ ಮೂಲದ ಮಾಯಾ 1 ವರ್ಷದಿಂದ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಎಚ್‌ಎಸ್‌ಆರ್‌ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಇನ್ನು ಆರೋಪಿ ಆರವ್‌ ಕೇರಳದಲ್ಲಿ ವ್ಯಾಸಂಗ ಮುಗಿಸಿ 8 ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದು, ಜೀವನಭೀಮಾನಗರದಲ್ಲಿ ನೆಲೆಸಿದ್ದ. ಖಾಸಗಿ ಕಂಪನಿಯಲ್ಲಿ ಮಾಸಿಕ ₹15 ಸಾವಿರ ವೇತನಕ್ಕೆ ಇಂಟರ್ನ್‌ಶಿಪ್‌ ಮಾಡುತ್ತಿದ್ದ. 6 ತಿಂಗಳ ಹಿಂದೆ ಮಾಯಾ ಮತ್ತು ಆರವ್‌ ಡೇಟಿಂಗ್‌ ಆ್ಯಪ್‌ನಲ್ಲಿ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ದರು.

ವೈಯಕ್ತಿ ಕಾರಣಕ್ಕೆ ಗಲಾಟೆ:

ಪರಸ್ಪರ ಒಪ್ಪಿಗೆ ಮೇರೆಗೆ ನ.23ರಂದು ಇಬ್ಬರು ಇಂದಿರಾನಗರ 2ನೇ ಹಂತದ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ನಲ್ಲಿ ಸರ್ವಿಸ್‌ ಪ್ಲ್ಯಾಟ್‌ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದರು. ನ.24ರ ರಾತ್ರಿ ಇಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಕೋಪಗೊಂಡ ಆರವ್‌, ಮಾಯಾಳನ್ನು ಕೊಲೆ ಮಾಡುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಚಾಕು ಮತ್ತು ನೈಲಾನ್‌ ದಾರವನ್ನು ಆರ್ಡರ್‌ ಮಾಡಿ ಅಪಾರ್ಟ್‌ಮೆಂಟ್‌ಗೆ ತರಿಸಿಕೊಂಡಿದ್ದ.

ನೈಲಾನ್‌ ದಾರ-ಚಾಕುವಿನಿಂದ ಹತ್ಯೆ:

ಅದರಂತೆ ನೈಲಾನ್‌ ದಾರವನ್ನು ಮಾಯಾಳ ಕುತ್ತಿಗೆ ಬಿಗಿದಿದ್ದಾನೆ. ಈ ವೇಳೆ ಆಕೆ ಪ್ರಜ್ಞೆ ತಪ್ಪಿದಾಗ ಚಾಕುವಿನಿಂದ ಎದೆಗೆ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ 1 ದಿನ ಪ್ಲ್ಯಾಟ್‌ನಲ್ಲಿ ಮಾಯಾಳ ಶವದೊಂದಿಗೆ ಇದ್ದು, ನ.26 ಬೆಳಗ್ಗೆ ಕ್ಯಾಬ್‌ ಬುಕ್‌ ಮಾಡಿ ಅಪಾರ್ಟ್‌ಮೆಂಟ್‌ನಿಂದ ಪರಾರಿಯಾಗಿದ್ದ. ಪ್ಲ್ಯಾಟ್‌ನಿಂದ ಊಟ-ತಿಂಡಿಗೆ ಆರ್ಡರ್‌ ಬಾರದ ಹಿನ್ನೆಲೆ ಅನುಮಾನಗೊಂಡ ಸಿಬ್ಬಂದಿ, ಪ್ಲ್ಯಾಟ್‌ಗೆ ತೆರಳಿ ನೋಡಿದಾಗ ಮಾಯಾ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಇಂದಿರಾನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದರು.

ವಾರಣಾಸಿಯಲ್ಲಿ ತಲೆಮರಿಸಿಕೊಂಡಿದ್ದ:

ಆರೋಪಿ ಆರವ್‌ ಅನಾಯ್‌ ಪತ್ತೆಗೆ ಪೊಲೀಸರ 3 ವಿಶೇಷ ತಂಡ ರಚಿಸಲಾಗಿತ್ತು. 1 ತಂಡ ಕೇರಳ ಮತ್ತು ಮತ್ತೊಂದು ತಂಡ ಉತ್ತರ ಕರ್ನಾಟಕಕ್ಕೆ ತೆರಳಿತ್ತು. ಮೂರನೇ ತಂಡ ತಾಂತ್ರಿಕ ಮಾಹಿತಿ ಸಂಗ್ರಹಿಸುವಲ್ಲಿ ನಿರತವಾಗಿತ್ತು. ಆರೋಪಿ ಆರವ್‌ ಸ್ನೇಹಿತೆ ಕೊಲೆ ಬಳಿಕ ರೈಲಿನಲ್ಲಿ ರಾಯಚೂರಿಗೆ ತೆರಳಿ ಅಲ್ಲಿಂದ ಮಧ್ಯಪ್ರದೇಶ ಬಳಿಕ ಉತ್ತರಪ್ರದೇಶಕ್ಕೆ ತೆರಳಿ ವಾರಣಾಸಿಯಲ್ಲಿ ತಲೆಮರೆಸಿಕೊಂಡಿದ್ದ.

ವಿಮಾನದಲ್ಲಿ ಬಂದು ಪೊಲೀಸರಿಗೆ ಶರಣು:

ಈ ನಡುವೆ ಪೊಲೀಸರ 1 ತಂಡ ಕೇರಳಕ್ಕೆ ತೆರಳಿ ಆರವ್‌ನ ಕುಟುಂಬದ ಸದಸ್ಯರನ್ನು ಸಂಪರ್ಕಿಸಿತ್ತು. ಈ ವಿಚಾರ ತಿಳಿದ ಆರೋಪಿ ಆರವ್‌ ಬಳಿಕ ಇಂದಿರಾನಗರ ಠಾಣೆ ಪೊಲೀಸರಿಗೆ ಮೊಬೈಲ್‌ ಕರೆ ಮಾಡಿ ತಾನೇ ಶರಣಾಗುವುದಾಗಿ ತಿಳಿಸಿದ್ದ. ಅದರಂತೆ ಶುಕ್ರವಾರ ವಿಮಾನದಲ್ಲಿ ವಾರಣಾಸಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ವಿಮಾನ ನಿಲ್ದಾಣದಲ್ಲೇ ಆರೋಪಿಗಾಗಿ ಕಾದು ನಿಂತಿದ್ದ ಇಂದಿರಾನಗರ ಪೊಲೀಸರು, ಆತ ಹೊರಗೆ ಬರುತ್ತಿದ್ದಂತೆ ಬಂಧಿಸಿದ್ದಾರೆ. ಬಳಿಕ ಪೊಲೀಸ್‌ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

ತಾತನ ಆರೈಕೆಯಲ್ಲಿ ಬೆಳೆದಿದ್ದ ಆರವ್‌

ಕೇರಳದ ಕಣ್ಣೂರು ಮೂಲದ ಆರೋಪಿ ಆರವ್‌ ಅನಾಯ್‌, ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದರು. ಬಳಿಕ ತಾಯಿ ಎರಡನೇ ಮದುವೆಯಾಗಿದ್ದರು. ಕೆಲ ಸಮಯದ ಬಳಿಕ ಮತ್ತೊಬ್ಬರನ್ನು ಮದುವೆಯಾಗಿದ್ದರು. ಹೀಗಾಗಿ ಆರವ್‌, ನಿವೃತ್ತ ಸೈನಿಕನಾಗಿರುವ ತಾತನ ಜತೆಗೆ ಆರೈಕೆಯಲ್ಲಿ ಬೆಳೆದಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.

ಮೊಬೈಲ್‌ ವಿಚಾರಕ್ಕೆ ಹತ್ಯೆ?

ಮಾಯಾ ಮತ್ತು ಆರವ್‌ ಆರು ತಿಂಗಳ ಹಿಂದೆಯಷ್ಟೇ ಡೇಟಿಂಗ್‌ ಆ್ಯಪ್‌ನಲ್ಲಿ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ದರು. ಬಳಿಕ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲ್ಯಾಟ್‌ ಬುಕ್‌ ಮಾಡಿಕೊಂಡು ಉಳಿದುಕೊಂಡಿದ್ದರು. ಮಾಯಾ ಹೆಚ್ಚು ಮೊಬೈಲ್‌ ಬಳಸುತ್ತಿದ್ದಳು. ಇದರಿಂದ ಆರವ್‌ ಕೋಪಗೊಂಡು ಜಗಳ ಮಾಡಿದ್ದ. ಎಷ್ಟೇ ಹೇಳಿದರೂ ಮಾಯಾ ಮೊಬೈಲ್‌ ಬಳಕೆ ಕಡಿಮೆ ಮಾಡಲಿಲ್ಲ. ಹೀಗಾಗಿ ಆರವ್‌ ಆನ್‌ಲೈನ್‌ನಲ್ಲಿ ನೈಲಾಲ್‌ ದಾರ ಮತ್ತು ಚಾಕು ತರಿಸಿಕೊಂಡು ಮಾಯಾಳನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

ಯುವತಿ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಯುವತಿಯ ಹತ್ಯೆ ನಡೆದಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಯ ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದ್ದು, ತನಿಖೆ ಮುಂದುವರೆದಿದೆ.

- ಡಿ.ದೇವರಾಜ್‌, ಪೂರ್ವ ವಿಭಾಗದ ಡಿಸಿಪಿ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌