ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದ ಆಯೋಪಿ ಬಂಧನ

KannadaprabhaNewsNetwork | Updated : Apr 06 2025, 11:29 AM IST

ಸಾರಾಂಶ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿ ಕುತ್ತಿಗೆಯನ್ನು ಕುಯ್ದು ಹತ್ಯೆಗೈದಿದ್ದ ಕೂಲಿ ಕಾರ್ಮಿಕನೊಬ್ಬನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿ ಕುತ್ತಿಗೆಯನ್ನು ಕುಯ್ದು ಹತ್ಯೆಗೈದಿದ್ದ ಕೂಲಿ ಕಾರ್ಮಿಕನೊಬ್ಬನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕತೊಗೂರು ನಿವಾಸಿ ಶಾರದಾ (35) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪತಿ ಕೃಷ್ಣಪ್ಪ ಬಂಧಿತನಾಗಿದ್ದಾನೆ. ಕೌಟುಂಬಿಕ ಕಲಹ ಕಾರಣಕ್ಕೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟ್ಟಿದ್ದ ಶಾರದಾ ಅವರನ್ನು ಅಡ್ಡಗಟ್ಟಿ ಶುಕ್ರವಾರ ರಾತ್ರಿ ಕೃಷ್ಣಪ್ಪ ಹತ್ಯೆಗೈದು ಪರಾರಿಯಾಗಿದ್ದ. ಈ ಕೃತ್ಯದ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಆತನನ್ನು ಎರಡು ತಾಸಿನಲ್ಲೇ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

17 ವರ್ಷಗಳ ಹಿಂದೆ ಆಂಧ್ರಪ್ರದೇಶ ರಾಜ್ಯದ ಕದ್ರಿ ಮೂಲದ ಶಾರದಾ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಕೃಷ್ಣಪ್ಪ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕಗೊಂಡಿದ್ದ ಶಾರದಾ, ಬಳಿಕ ಚಿಕ್ಕತೊಗೂರಿಗೆ ಬಂದು ತಮ್ಮ ಮಗಳ ಜತೆ ನೆಲೆಸಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಆಕೆ ಜೀವನ ಸಾಗಿಸುತ್ತಿದ್ದರು. ತಮ್ಮ ಪತ್ನಿ ಚಾರಿತ್ರ್ಯ ಮೇಲೆ ಶಂಕೆಗೊಂಡ ಕೃಷ್ಣಪ್ಪ ಶುಕ್ರವಾರ ರಾತ್ರಿ ನಗರಕ್ಕೆ ಬಂದಿದ್ದಾನೆ. ಆ ವೇಳೆ ವಿಪರೀತ ಮದ್ಯ ಸೇವಿಸಿದ್ದ ಆತ, ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಪತ್ನಿಯನ್ನು ಅಡ್ಡಗಟ್ಟಿ ಏಕಾಏಕಿ ಎರಗಿದ್ದಾನೆ. ಈ ಹಂತದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಕತ್ತು ಕುಯ್ದು ಕೃಷ್ಣಪ್ಪ ಹತ್ಯೆಗೈದಿದ್ದಾನೆ. ಈ ವೇಳೆ ಆಕೆಯ ಚೀರಾಟ ಕೇಳಿ ಶಾರದಾಳ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ವೇಳೆ ಕೃಷ್ಣಪ್ಪನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಆಗ ಜನರಿಂದ ತಪ್ಪಿಸಿಕೊಂಡು ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article