ಪತ್ನಿ ಚಾಕುವಿನಿಂದ ಇರಿದು ಕೊಂದು ಸೂಟ್‌ಕೇಸ್‌ಗೆ ತುಂಬಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ

KannadaprabhaNewsNetwork |  
Published : Mar 29, 2025, 01:48 AM ISTUpdated : Mar 29, 2025, 04:26 AM IST
ರಾಕೇಶ್‌, ಗೌರಿ | Kannada Prabha

ಸಾರಾಂಶ

ಬನ್ನೇರುಘಟ್ಟ ರಸ್ತೆ ದೊಡ್ಡಕಮ್ಮನಹಳ್ಳಿಯಲ್ಲಿ ಪತ್ನಿ ಗೌರಿ ಅನಿಲ್‌ ಸಾಂಬೇಕರ್‌ಗೆ ಚಾಕುವಿನಿಂದ ಇರಿದು ಕೊಲೆಗೈದು ಬಳಿಕ ಮೃತದೇಹವನ್ನು ಟ್ರಾಲಿ ಸೂಟ್‌ಕೇಸ್‌ಗೆ ತುಂಬಿದ ಪ್ರಕರಣದಲ್ಲಿ ಆರೋಪಿ ಪತಿ ರಾಕೇಶ್‌ ರಾಜೇಂದ್ರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

  ಬೆಂಗಳೂರು :  ಬನ್ನೇರುಘಟ್ಟ ರಸ್ತೆ ದೊಡ್ಡಕಮ್ಮನಹಳ್ಳಿಯಲ್ಲಿ ಪತ್ನಿ ಗೌರಿ ಅನಿಲ್‌ ಸಾಂಬೇಕರ್‌ಗೆ ಚಾಕುವಿನಿಂದ ಇರಿದು ಕೊಲೆಗೈದು ಬಳಿಕ ಮೃತದೇಹವನ್ನು ಟ್ರಾಲಿ ಸೂಟ್‌ಕೇಸ್‌ಗೆ ತುಂಬಿದ ಪ್ರಕರಣದಲ್ಲಿ ಆರೋಪಿ ಪತಿ ರಾಕೇಶ್‌ ರಾಜೇಂದ್ರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಹಾರಾಷ್ಟ್ರದ ಪುಣೆ ಪೊಲೀಸರು ಆರೋಪಿ ರಾಕೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮತ್ತೊಂದೆಡೆ ಹುಳಿಮಾವು ಠಾಣೆ ಪೊಲೀಸರ ತಂಡ ಪುಣೆ ತಲುಪಿದ್ದು, ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಿದೆ. ಸದ್ಯ ಆರೋಪಿ ರಾಕೇಶ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಅಲ್ಲಿನ ವೈದ್ಯರ ಸಮ್ಮತಿ ಮೇರೆಗೆ ಪೊಲೀಸರು ಆತನನ್ನು ಶೀಘ್ರದಲ್ಲೇ ವಶಕ್ಕೆ ಪಡೆದು ಬೆಂಗಳೂರು ನಗರಕ್ಕೆ ಕರೆತರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿಗೆ ಕರ್ನಾಟಕದ ನಂಟು:

ಕೊಲೆಯಾದ ಗೌರಿ ಪೋಷಕರು ಬೆಳಗಾವಿ ಮೂಲದವರು. ದಶಕಗಳ ಹಿಂದೆ ಮಹಾರಾಷ್ಟಕ್ಕೆ ತೆರಳಿ ನೆಲೆಸಿದ್ದರು. ಇನ್ನು ಗೌರಿಗೆ ಐದು ವರ್ಷ ಇದ್ದಾಗ ಆಕೆಯ ತಂದೆ ಮೃತಪಟ್ಟಿದ್ದಾರೆ. ಹೀಗಾಗಿ ಆಕೆ ತಾಯಿ ಮತ್ತು ಸಹೋದರನ ಆಶ್ರಯದಲ್ಲಿ ಬೆಳೆದಿದ್ದಳು. ಸಮೂಹ ಮಾಧ್ಯಮ ವಿಷಯದಲ್ಲಿ ಪದವಿ ಪಡೆದಿದ್ದ ಗೌರಿ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಪ್ರೀತಿಸಿ ಸೋದರ ಮಾವನ ಮಗನ ಮದುವೆ:

ಆರೋಪಿ ರಾಕೇಶ್‌, ಗೌರಿಗೆ ಸೋದರ ಮಾವನ ಮಗನಾಗಿದ್ದಾನೆ. ರಾಕೇಶ್‌ ಬಿಕಾಂ ಪದವೀಧರನಾಗಿದ್ದು, ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಇಬ್ಬರು ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಮದುವೆಗೆ ಆರಂಭದಲ್ಲಿ ಗೌರಿ ತಾಯಿ ಮತ್ತು ಸಹೋದರ ವಿರೋಧ ವ್ಯಕ್ತಪಡಿಸಿದ್ದರು, ಮದುವೆ ಬಳಿಕ ಗೌರಿ, ಗಂಡನ ಮನೆಗೆ ಹೊಂದಿಕೊಂಡಿರಲಿಲ್ಲ. ಹೀಗಾಗಿ ಗೌರಿ ಹಾಗೂ ರಾಕೇಶ್‌ ದಂಪತಿ ಮನೆ ಬಿಟ್ಟು ಪ್ರತ್ಯೇಕವಾಗಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.

ಉದ್ಯೋಗ ಅರಸಿ ದಂಪತಿ ಬೆಂಗಳೂರಿಗೆ:

ಗೌರಿ ಮತ್ತು ರಾಕೇಶ್‌ ಉದ್ಯೋಗ ಆರಸಿ ಕಳೆದ ತಿಂಗಳು ಬೆಂಗಳೂರಿಗೆ ಬಂದಿದ್ದರು. ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ರಾಕೇಶ್‌ಗೆ ಇತ್ತೀಚೆಗೆ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌ ಕೆಲಸ ಸಿಕ್ಕಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಗೌರಿ ಕೆಲಸದ ಹುಡುಕಾಟದಲ್ಲಿದ್ದಳು. 

ಪತ್ನಿ ಎಸೆದ ಚಾಕುವಿನಲ್ಲೇ ಕೊಂದ:

ಮಾ.26ರಂದು ಗೌರಿ ಮತ್ತು ರಾಕೇಶ್‌ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ರಾಕೇಶ್‌, ಗೌರಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಗೌರಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದು ರಾಕೇಶ್‌ನತ್ತ ಎಸೆದಿದ್ದಾಳೆ. ಇದರಿಂದ ಮತ್ತಷ್ಟು ಕುಪಿತನಾದ ರಾಕೇಶ್‌ ಆ ಚಾಕು ತೆಗೆದುಕೊಂಡು ಗೌರಿಗೆ ಕುತ್ತಿಗೆ ಮತ್ತು ಬೆನ್ನಿಗೆ ಹಲವು ಬಾರಿ ಇರಿದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಗೌರಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಗೌರಿ ಕೊಲೆ ಬಳಿಕ ಆರೋಪಿ ರಾಕೇಶ್‌ ಆಕೆಯ ಮೃದೇಹವನ್ನು ಟ್ರಾಲಿ ಸೂಸ್‌ಕೇಸ್‌ಗೆ ತುಂಬಿದ್ದಾನೆ. ಮೃತದೇಹವಿದ್ದ ಆ ಸೂಟ್‌ಕೇಸ್‌ ಎಳೆದೊಯ್ಯುವಾಗ ಹಿಡಿಕೆ ತುಂಡಾಗಿದೆ. ಹೀಗಾಗಿ ಆರೋಪಿ ಆ ಸೂಟ್‌ಕೇಸ್‌ ಅನ್ನು ಶೌಚಾಗೃಹದಲ್ಲೇ ಬಿಟ್ಟಿದ್ದಾನೆ. ಬಳಿಕ ತನ್ನ ಕಾರಿನಲ್ಲಿ ಪುಣೆಗೆ ಪರಾರಿಯಾಗಿದ್ದಾನೆ.

ಗೌರಿಯ ಸಹೋದರನಿಗೆ ಕರೆ:

ಮಾರನೇ ದಿನ ಅಂದರೆ, ಮಾ.27ರಂದು ಮಧ್ಯಾಹ್ನ ಗೌರಿಗೆ ಸಹೋದರ ಗಣೇಶ್‌ಗೆ ಕರೆ ಮಾಡಿರುವ ಆರೋಪಿ ರಾಕೇಶ್‌, ನಿನ್ನ ತಂಗಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿ ಕಣ್ಣೀರಿಟ್ಟು ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ದೊಡ್ಡಕಮ್ಮನಹಳ್ಳಿಯ ಬಾಡಿಗೆ ಮನೆಯ ನೆಲಮಹಡಿಯಲ್ಲಿದ್ದ ಪರಿಚಿತ ಬಾಡಿಗೆದಾರರಿಗೆ ಕರೆ ಮಾಡಿ, ಪತ್ನಿ ಗೌರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.

ಬಳಿಕ ಆ ಬಾಡಿಗೆದಾರ ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಮನೆಯ ಮಾಲೀಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಗೌರಿಯ ಮೃತದೇಹ ಪತ್ತೆಯಾಗಿತ್ತು.

ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನ?

ಆರೋಪಿ ರಾಕೇಶ್‌, ಗೌರಿ ಸಹೋದರನಿಗೆ ಕರೆ ಮಾಡಿ ಪತ್ನಿ ಕೊಲೆ ವಿಚಾರ ತಿಳಿಸಿದ ಬಳಿಕ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದಾನೆ. ಬಳಿಕ ಪುಣೆಯ ಶಿರವಾರ ಪೊಲೀಸ್‌ ಠಾಣೆ ಸಮೀಪ ಇಲಿ ಪಾಷಾಣ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥನಾಗಿ ಬಿದ್ದಿದ್ದ ರಾಕೇಶ್‌ನನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿರವಾರ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ ವಿಚಾರಣೆ ಮಾಡಿದಾಗ, ಬೆಂಗಳೂರಿನಲ್ಲಿ ಪತ್ನಿಯ ಕೊಲೆ ಮಾಡಿರುವ ವಿಚಾರ ಹೇಳಿಕೊಂಡಿದ್ದ. ಅಷ್ಟರಲ್ಲಿ ಹುಳಿಮಾವು ಠಾಣೆ ಪೊಲೀಸರು, ಪುಣೆ ಪೊಲೀಸರನ್ನು ಸಂಪರ್ಕ ಮಾಡಿ ಆರೋಪಿ ರಾಕೇಶ್‌ ಬಗ್ಗೆ ಮಾಹಿತಿ ನೀಡಿದ್ದರು. ಹೀಗಾಗಿ ಘಟನೆ ಬೆಳಕಿಗೆ ಬಂದ ಕೆಲವೇ ತಾಸಿನಲ್ಲಿ ಆರೋಪಿ ಪತ್ತೆಯಾಗಿದ್ದ.

ಕೆಲ ದಿನಗಳ ಹಿಂದೆ ಠಾಣೆಗೆ ಬಂದಿದ್ದಳು?

ಕೊಲೆಯಾದ ಗೌರಿ ಕೆಲ ದಿನಗಳ ಹಿಂದೆ ಪತಿ ರಾಕೇಶ್ ಜತೆಗೆ ಹುಳಿಮಾವು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು. ತನ್ನ ಮೊಬೈಲ್‌ ಹ್ಯಾಕ್‌ ಆಗಿದ್ದು, ಡೇಟಾ ಕಳುವಾಗುತ್ತಿದೆ ಎಂದು ಆರೋಪಿಸಿದ್ದಳು. ಬಳಿಕ ಪೊಲೀಸರು ಆಕೆಯನ್ನು ಮೊಬೈಲ್‌ ಪರಿಶೀಲಿಸಿ, ಹ್ಯಾಕ್‌ ಆಗಿಲ್ಲ ಎಂದು ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.

ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಕೊಲೆಯಾದ ಗೌರಿ ಮೃತದೇಹವನ್ನು ಶುಕ್ರವಾರ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮಹಾರಾಷ್ಟ್ರದಿಂದ ಬಂದಿದ್ದ ಗೌರಿ ಕುಟುಂಬದ ಸದಸ್ಯರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಮೃತದೇಹ ಕಂಡು ಕುಟುಂಬದ ಸದಸ್ಯರು ಕಣ್ಣೀರಿಟ್ಟರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಹತ್ಯೆ: ಯಾವುದೇ ಕ್ಷಣ ಶಾಸಕ ಬೈರತಿ ಸೆರೆ
ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು