ಬೆಂಗಳೂರು : ಅಪರಿಚಿತ ವ್ಯಕ್ತಿಯೊಬ್ಬ ನಾಗಾ ಸಾಧು ಸೋಗಿನಲ್ಲಿ ಕಾರು ಚಾಲಕನೊಬ್ಬನಿಗೆ ಐದು ರುದ್ರಾಕ್ಷಿ ಕೊಟ್ಟು ಹಣೆಗೆ ವಿಭೂತಿ ಹಚ್ಚಿ ಮಂಕು ಬರಿಸಿ ಬೆರಳಲಿದ್ದ 10 ಗ್ರಾಂ ಚಿನ್ನದ ಉಂಗುರವನ್ನು ಕೆಲವೇ ಕ್ಷಣದಲ್ಲಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೈಯಾಲಿಕಾವಲ್ ನಿವಾಸಿ ಎ.ವಿ.ವೆಂಕಟಕೃಷ್ಣಯ್ಯ(53) ಉಂಗುರ ಕಳೆದುಕೊಂಡ ಕಾರು ಚಾಲಕ. ಏ.19ರಂದು ಮಧ್ಯಾಹ್ನ ಸುಮಾರು 2.30ಕ್ಕೆ ಅರಮನೆ ರಸ್ತೆಯ ಶಾಂಗ್ರಿಲಾ ಹೋಟೆಲ್ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ದೂರುದಾರ ಎ.ವಿ.ವೆಂಕಟಕೃಷ್ಣಯ್ಯ ಗಂಜಾಂ ನಾಗಪ್ಪ ಆ್ಯಂಡ್ ಸನ್ಸ್ ಪ್ರೈವೇಟ್ ಕಂಪನಿಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಏ.19ರಂದು ಮಧ್ಯಾಹ್ನ ಸುಮಾರು 2.30ಕ್ಕೆ ಕಂಪನಿಯ ಅಧಿಕಾರಿಯೊಬ್ಬರನ್ನು ಕಾರ್ಯ ನಿಮಿತ್ತ ಶಾಂಗ್ರೀಲಾ ಹೋಟೆಲ್‌ಗೆ ಕರೆತಂದಿದ್ದಾರೆ. ಬಳಿಕ ಕಾರನ್ನು ಹೋಟೆಲ್ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಕೊಂಡಿದ್ದಾರೆ. ಈ ವೇಳೆ ನಾಗಾ ಸಾಧು ಸೋಗಿನಲ್ಲಿ ವ್ಯಕ್ತಿಯೊಬ್ಬ ವೆಂಕಟಕೃಷ್ಣಯ್ಯನ ಬಳಿ ಬಂದಿದ್ದಾನೆ. ನನಗೆ ಬಹಳ ಆಯಾಸವಾಗಿದೆ, ಸ್ವಲ್ಪ ಸಮಯ ನಿನ್ನ ಕಾರಿನಲ್ಲಿ ಕೂರುತ್ತೇನೆ ಎಂದಿದ್ದಾನೆ.
ಮಾನವೀಯತೆ ದೃಷ್ಟಿಯಿಂದ ವೆಂಕಟಕೃಷ್ಣಯ್ಯ ಆ ನಾಗಾ ಸಾಧುಗೆ ಕಾರಿನಲ್ಲಿ ಕೂರಲು ಅವಕಾಶ ನೀಡಿದ್ದಾರೆ. ಈ ವೇಳೆ ಆ ನಾಗಸಾಧು ವೆಂಕಟಕೃಷ್ಣಯ್ಯ ಅವರ ಕುಟುಂಬದ ಬಗ್ಗೆ ವಿಚಾರಿಸಿದ್ದಾನೆ. ನಿಮ್ಮ ಮನೆ ಎಲ್ಲಿ? ಎಷ್ಟು ಜನ ಇದ್ದಾರೆ ಎಂದು ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ವೆಂಕಟಕೃಷ್ಣಯ್ಯ ಮನೆಯಲ್ಲಿ ಐದು ಮಂದಿ ಇದ್ದೇವೆ ಎಂದು ಹೇಳಿದ್ದಾರೆ. ಆಗ ನಾಗಾ ಸಾಧು ಐದು ರುದ್ರಾಕ್ಷಿಗಳನ್ನು ನೀಡಿದ್ದಾನೆ. ಬಳಿಕ ಹಣೆಗೆ ವಿಭೂತಿ ಹಚ್ಚಿದ್ದಾನೆ. ಆಗ ವೆಂಕಟಕೃಷ್ಣಯ್ಯಗೆ ಮಂಕು ಕವಿದಂತಾಗಿದೆ.
ಕೈಬೆರಳಲಿದ್ದ ಉಂಗುರ ಎಗರಿಸಿ ಎಸ್ಕೇಪ್:
ಈ ವೇಳೆ ನಾಗಸಾಧು ವೆಂಕಟಕೃಷ್ಣಯ್ಯನ ಕೈಬೆರಳಲಿದ್ದ 10 ಗ್ರಾಂ ಚಿನ್ನದ ನವರತ್ನದ ಉಂಗುರವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ವೆಂಕಟಕೃಷ್ಣಯ್ಯ ಸಹಜ ಸ್ಥಿತಿಗೆ ಮರಳಿದಾಗ ಆ ನಾಗಾ ಸಾಧು ಇಲ್ಲದಿರುವುದು ಗೊತ್ತಾಗಿದೆ. ಕೈಬೆರಳಲಿದ್ದ ಉಂಗುರವೂ ಇಲ್ಲದಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಕಾರು ಚಾಲಕ ವೆಂಕಟಕೃಷ್ಣಯ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ನೀಡಿದ್ದು, ಆ ಅಪರಿಚಿತ ವ್ಯಕ್ತಿಯ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮಾಡಿದ್ದಾರೆ.