ಕುಡಿಯಲು ಹಣಕ್ಕೆ ಪೀಡಿಸುತ್ತಿದ್ದ ಪರಿಚಿತನ ರಾಡ್‌ನಿಂದ ಥಳಿಸಿ ಹತ್ಯೆ

KannadaprabhaNewsNetwork |  
Published : Mar 23, 2026, 02:00 AM IST
Gangaraju | Kannada Prabha

ಸಾರಾಂಶ

ಕುಡಿಯಲು ಪದೇ ಪದೇ ಹಣಕ್ಕೆ ಪೀಡಿಸುತ್ತಿದ್ದ ಪರಿಚಿತ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆಟೋ ಚಾಲಕ ಸೇರಿ ಇಬ್ಬರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

-ಕೊಲೆಯಾದ ಕಿರಣ್‌ ಮತ್ತು ಆರೋಪಿಗಳು ಬೋವಿಪಾಳ್ಯ ವಾಸಿಗಳಾಗಿದ್ದು, ಪರಸ್ಪರ ಪರಿಚಿತರು

-ದುಶ್ಚಟಗಳ ದಾಸನಾಗಿದ್ದ ಕಿರಣ್‌ ಆರೋಪಿಗಳು ಸಿಕ್ಕಾಗಲೆಲ್ಲಾ ಕುಡಿಯಲು ಹಣಕ್ಕೆ ಪೀಡಿಸುತ್ತಿದ್ದ

- ಹಣ ಕೊಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈತನ ಕಾಟಕ್ಕೆ ಆರೋಪಿಗಳು ಬೇಸತ್ತಿದ್ದರು

- ಕೊನೆಗೆ ಕಿರಣ್‌ಗೆ ಆಟೋದಿಂದ ಡಿಕ್ಕಿ ಹೊಡೆಸಿ ಕಬ್ಬಿಣದ ರಾಡ್‌ನಿಂದ ಥಳಿಸಿ ಎಸ್ಕೇಪ್‌ ಆಗಿದ್ದರುಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿಯಲು ಪದೇ ಪದೇ ಹಣಕ್ಕೆ ಪೀಡಿಸುತ್ತಿದ್ದ ಪರಿಚಿತ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆಟೋ ಚಾಲಕ ಸೇರಿ ಇಬ್ಬರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌. ಪುರ ಸಮೀಪದ ಬೋವಿ ಪಾಳ್ಯ ನಿವಾಸಿ ಕಿರಣ್‌ (27) ಕೊಲೆಯಾದ ದುರ್ದೈವಿ. ಇದೇ ಬೋವಿ ಪಾಳ್ಯದ ನಿವಾಸಿಗಳಾದ ಯುವರಾಜ್‌ (28) ಮತ್ತು ಗಂಗರಾಜ್‌ (26) ಬಂಧಿತರು. ಆರೋಪಿಗಳು ಭಾನುವಾರ ಮುಂಜಾನೆ ಸುಮಾರು 4.30ಕ್ಕೆ ಟಿ.ಸಿ. ಪಾಳ್ಯದ ಮುಖ್ಯರಸ್ತೆಯಲ್ಲಿ ಕಿರಣ್‌ಗೆ ಆಟೋದಿಂದ ಡಿಕ್ಕಿ ಹೊಡೆದು ಬಳಿಕ ಕಬ್ಬಿಣದ ರಾಡ್‌ನಿಂದ ತಲೆಗೆ ಹಲ್ಲೆ ಮಾಡಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಕೊಲೆಯಾದ ಕಿರಣ್‌ ಮತ್ತು ಆರೋಪಿಗಳು ಬೋವಿಪಾಳ್ಯ ನಿವಾಸಿಗಳಾಗಿದ್ದು, ಪರಸ್ಪರ ಪರಿಚಿತರು. ಕಿರಣ್‌ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮದ್ಯ ಸೇರಿದಂತೆ ದುಶ್ಚಟಗಳ ದಾಸನಾಗಿದ್ದ. ಆರೋಪಿ ಯುವರಾಜ್‌ ಆಟೋ ಚಾಲಕನಾಗಿದ್ದು, ಮತ್ತೊಬ್ಬ ಆರೋಪಿ ಗಂಗರಾಜ್‌ ಸ್ವಿಗ್ಗಿ ಇನ್ಸ್‌ಸ್ಟಾ ಮಾರ್ಟ್‌ನಲ್ಲಿ ಸ್ಟೋರ್ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಕಿರಣ್ ಆಗಾಗ ಏರಿಯಾದಲ್ಲಿ ಆರೋಪಿಗಳು ಸಿಕ್ಕಾಗಲೆಲ್ಲಾ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈತನ ಕಾಟಕ್ಕೆ ಆರೋಪಿಗಳು ಬೇಸತ್ತಿದ್ದರು ಎನ್ನಲಾಗಿದೆ.

ರಾಡ್‌ನಿಂದ ಹೊಡೆದು ಹತ್ಯೆ:

ಭಾನುವಾರ ಮುಂಜಾನೆ ಆರೋಪಿಗಳಾದ ಯುವರಾಜ್‌ ಮತ್ತು ಗಂಗರಾಜ್‌ ಇಬ್ಬರು ರಾಮಮೂರ್ತಿನಗರದ ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ ಬರುತ್ತಿದ್ದರು. ಇದೇ ವೇಳೆ ಕಿರಣ್‌ ಎದುರಾಗಿದ್ದಾನೆ. ಹಣದ ವಿಚಾರವಾಗಿ ಮೂವರ ನಡುವೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಯುವರಾಜ್‌ ಮತ್ತು ಗಂಗರಾಜ್‌ ಕಬ್ಬಿಣದ ಜಾಕ್‌ ರಾಡ್‌ನಿಂದ ಕಿರಣ್‌ ತಲೆಗೆ ಮನಸೋಇಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದ. ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು.

ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---

- ಕೊಲೆಯಾದ ಕಿರಣ್‌ (ಕೆಂಪಂಗಿ)

- ಬಂಧಿತ ಆರೋಪಿಗಳಾದ ಗಂಗರಾಜ್‌ (ಹಳದಿ) ಯುವರಾಜ್‌

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ವಿಚ್ಛೇದಿತ ಪತ್ನಿ, ಮಗಳ ಮೇಲೆಯೇ ಆ್ಯಸಿಡ್‌ ದಾಳಿ
ಡ್ರಗ್ಸ್‌ ನೀಡಿ 50 ಮಹಿಳೆಯರ ರೇಪ್‌ ಮಾಡಿದ್ದ ಜ್ಯೋತಿಷಿ ಸೆರೆ!