ಚಿನ್ನದಂಗಡಿ ದರೋಡೆ ನಡೆಸಿ ವ್ಯಕ್ತಿ ಕೊಲೆ..!

KannadaprabhaNewsNetwork |  
Published : Aug 18, 2025, 12:00 AM IST
೧೭ಕೆಎಂಎನ್‌ಡಿ-೫ಮಳವಳ್ಳಿ ತಾಲೂಕು ಕಿರುಗಾವಲು ಗ್ರಾಮದಲ್ಲಿ ದರೋಡೆಗೊಳಗಾಗಿರುವ ಮಹಾಲಕ್ಷ್ಮೀ ಜುವೆಲ್ಲರ್ಸ್‌ ಅಂಡ್ ಬ್ಯಾಂಕರ್ಸ್‌ ಅಂಗಡಿ ಎದುರು ಜನರು ನೆರೆದಿರುವುದು. | Kannada Prabha

ಸಾರಾಂಶ

ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ಮಾಡುವುದಕ್ಕೆ ಬಂದಿದ್ದ ದರೋಡೆಕೋರರು ಚಿನ್ನಾಭರಣ ದೋಚಿದ ಬಳಿಕ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಧಾರುಣ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಮಂಜಾನೆ ಸಂಭವಿಸಿದೆ.

  ಮಳವಳ್ಳಿ :  ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ಮಾಡುವುದಕ್ಕೆ ಬಂದಿದ್ದ ದರೋಡೆಕೋರರು ಚಿನ್ನಾಭರಣ ದೋಚಿದ ಬಳಿಕ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಧಾರುಣ ಘಟನೆ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಮಂಜಾನೆ ಸಂಭವಿಸಿದೆ.

ತಾಲೂಕಿನ ಕಿರುಗಾವಲು ಗ್ರಾಮದ ಮಾದಪ್ಪ (೭೨) ಕೊಲೆಯಾದ ವ್ಯಕ್ತಿ. ಈತ ಕಳೆದ ೩೦ ವರ್ಷಗಳಿಂದಲೂ ಹೋಟೆಲ್ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ. ಮಹಾಲಕ್ಷ್ಮೀ ಜುವೆಲ್ಲರ್ಸ್‌ ಅಂಡ್ ಬ್ಯಾಂಕರ್ಸ್‌ಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದರೋಡೆ ನಡೆಸಿದ್ದಾರೆ.

ಗ್ರಾಮದ ಮಹಾಲಕ್ಷ್ಮೀ ಜುವೆಲ್ಲರ್ಸ್ ಆಂಡ್ ಬ್ಯಾಂಕರ್ಸ್‌ನಲ್ಲಿ ಭಾನುವಾರ ನಸುಕಿನ ಜಾವ ಸುಮಾರು ೨ ಗಂಟೆ ಸಮಯಕ್ಕೆ ದರೋಡೆ ನಡೆಸಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ನಿಗದಿತ ಯೋಜನೆಯಂತೆ ಅಂಗಡಿ ಬಾಗಿಲನ್ನು ಗ್ಯಾಸ್ ಕಟ್ಟರ್‌ನಿಂದ ಕಟ್ ಮಾಡಿ ಒಳನುಗ್ಗಿದ ದರೋಡೆಕೋರರು ಚಿನ್ನಾಭವರಣ ದೋಚಿ ಪರಾರಿಯಾಗುವ ವೇಳೆ ಶಬ್ಧ ಉಂಟಾಗಿದೆ.

ಇದೇ ಸಮಯಕ್ಕೆ ಶ್ರೀಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ ಎಂದಿನಂತೆ ನಸುಕಿನ ಜಾವ ಎದ್ದು ಒಲೆಯ ಮೇಲೆ ಹಾಲಿಟ್ಟು ತರಕಾರಿ ಹಚ್ಚುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಪಕ್ಕದ ಅಂಗಡಿಯಲ್ಲಿ ಉಂಟಾದ ಶಬ್ಧ ಕೇಳಿ ಮಾದಪ್ಪ ಅವರು ಹೊರಗೆ ಬಂದು ನೋಡಿದರು. ದರೋಡೆಕೋರರು ಚಿನ್ನಾಭರಣ ದೋಚಿಕೊಂಡು ಜ್ಯುವೆಲ್ಲರಿ ಅಂಗಡಿಯಿಂದ ವಾಪಸ್ ಬರುವಾಗ ಮಾದಪ್ಪ ದರೋಡೆಕೋರರನ್ನು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಮಾದಪ್ಪ ಅವರ ಮೇಲೆ ಹಲ್ಲೆ ನಡೆಸಿ, ಸ್ಥಳದಲ್ಲೇ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ದರೋಡೆಕೋರರು ಜ್ಯುವೆಲ್ಲರಿ ಅಂಗಡಿಯ ಸಿಸಿಟಿವಿಯ ಡಿವಿಆರ್‌ನ್ನು ಹೊತ್ತು ಪರಾರಿಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್, ಪಿಎಸ್‌ಐ ರವಿಕುಮಾರ್, ಶ್ವಾನ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಇನ್ನು ದರೋಡೆ ನಡೆದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲೇ ಕಳೆದೊಂದು ತಿಂಗಳ ಹಿಂದೆ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಘಟನೆ ನಡೆದಿತ್ತು. ಗ್ರಾಮದಲ್ಲಿ ಪದೇ ಕಳ್ಳತನ, ಕೊಲೆ, ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಗ್ರಾಮದಲ್ಲಿ ರಾತ್ರಿ ಗಸ್ತಿಗೆ ಬಂದ ಪೊಲೀಸರು ಶ್ರೀಉಂತೂರಮ್ಮ ದೇವಸ್ಥಾನದ ಬಳಿ ನಿದ್ರಿಸುತ್ತಿದ್ದುದು ಇದಕ್ಕೆ ಸಾಕ್ಷಿಯಾಗಿದೆ.

ಕಿರುಗಾವಲು ಗ್ರಾಮದ ರಸ್ತೆಗಳಲ್ಲಿ ಗ್ರಾಪಂನಿಂದ ಅಳವಡಿಸಿದ್ದ ಸಿಸಿಟಿವಿಗಳಿಗೆ ರೀಚಾರ್ಜ್ ಮಾಡಿಸದ ಪರಿಣಾಮ ದರೋಡೆಕೋರರ ಚಲನ ವಲನಗಳು ಕೂಡ ಸೆರೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ವಿರುದ್ಧ ಕಿಡಿಕಾರಿದ್ದಾರೆ.

ಐದು ತಂಡ ರಚನೆ:

ಜುವೆಲ್ಲರಿ ಅಂಗಡಿಯಲ್ಲಿ ಚಿನ್ನಾಭರಣ ದರೋಡೆ ನಡೆಸಿದ ದರೋಡೆಕೋರರ ಪತ್ತೆಗೆ ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿದೆ.

₹13 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳವು:

ಮಹಾಲಕ್ಷ್ಮೀ ಜುವೆಲ್ಲರ್ಸ್ ಆಂಡ್ ಬ್ಯಾಂಕರ್ಸ್‌ ನಲ್ಲಿ 13 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಅಂಗಡಿ ಮಾಲೀಕ ಸುರೇಶ್ ಕಿರುಗಾವಲು ಪೊಲೀಸರಿಗೆ ದೂರು ನೀಡಿದ್ದಾರೆ. ಜುವೆಲ್ಲರ್ಸ್ ನಲ್ಲಿದ್ದ 110 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಸೇರಿ 13 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿರುವುದಾಗಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

PREV
Read more Articles on

Recommended Stories

ಮಗು ಬಕೆಟ್‌ ನೀರು ಮುಟ್ಟಿದ್ದಕ್ಕೆ ಪಾಲಕರಿಗೆ ಬ್ಯಾಟ್‌ನಿಂದ ಹಲ್ಲೆ !
65 ವರ್ಷದ ತಾಯಿ ಮೇಲೆ 39ರ ಪುತ್ರನ ಅತ್ಯಾ*ರ!