ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದ ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಉಲ್ಲಾಳ ಸಮೀಪದ ಸರ್ಕಾರಿ ಮುದ್ರಣಾಲಯ ಲೇಔಟ್‌ನ ನಿವಾಸಿ ಮಂಜು (27) ಕೊಲೆಯಾದ ದುರ್ದೈವಿ. ಪತ್ನಿ ಕೊಂದು ಬಳಿಕ ಪತಿ ಧರ್ಮಶೀಲನ್ (29) ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ರಾತ್ರಿ ತವರು ಮನೆಯಲ್ಲಿದ್ದ ಪತ್ನಿ ಮನೆಗೆ ಧರ್ಮಶೀಲನ್ ಬಂದಿದ್ದಾಗ ಈ ಕೃತ್ಯ ನಡೆದಿದೆ. ಪೋಷಕರು ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ತಮಿಳುನಾಡು ಮೂಲದ ಧರ್ಮಶೀಲನ್ ಹಾಗೂ ಮಂಜು ವಿವಾಹವಾಗಿದ್ದರು. ಮದುವೆ ಬಳಿಕ ತಮಿಳುನಾಡಿನ ತನ್ನೂರಿನಲ್ಲಿ ತನ್ನ ಪತ್ನಿ ಜತೆ ಆತ ಸಂಸಾರ ನಡೆಸುತ್ತಿದ್ದ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ಧ ಧರ್ಮಶೀಲನ್ ಬಳಿಕ ದುಬೈಗೆ ಕೆಲಸ ಅರಸಿ ಹೋಗಿದ್ದ. ಇತ್ತ ಪತಿ ವಿದೇಶಕ್ಕೆ ಹೋದ ಬಳಿಕ ಮಂಜು, ಉಲ್ಲಾಳದಲ್ಲಿದ್ದ ತನ್ನ ಪೋಷಕರ ಮನೆಗೆ ಬಂದಿದ್ದಳು. ಮಾಳಗಾಳ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಆಕೆ ಶ್ರುಶೂಷಕಿಯಾಗಿದ್ದಳು.ಎರಡು ತಿಂಗಳ ಹಿಂದೆ ದುಬೈನಿಂದ ಮರಳಿದ ಧರ್ಮಶೀಲನ್, ನಗರದಲ್ಲಿದ್ದ ಪತ್ನಿಯನ್ನು ಕರೆದುಕೊಂಡು ತಮಿಳುನಾಡಿನ ತನ್ನೂರಿಗೆ ತೆರಳಿದ್ದ. ಅಲ್ಲಿ 15 ದಿನಗಳಿದ್ದು ಮಂಜು ಮತ್ತೆ ತವರು ಮನೆಗೆ ಮರಳಿದ್ದಳು. ತರುವಾಯ ಬೆಂಗಳೂರಿನಲ್ಲಿ ಮತ್ತೆ ಧರ್ಮಶೀಲನ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಖಾಸಗಿ ಆಸ್ಪತ್ರೆಯ ಕೆಲಸ ತೊರೆದು ತನ್ನೊಂದಿಗೆ ಬರುವಂತೆ ಪತ್ನಿಗೆ ಆತ ತಾಕೀತು ಮಾಡಿದ್ದ. ಇದೇ ವಿಷಯವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿದ್ದವು. ಕೆಲಸದ ನಿಮಿತ್ತ ತುಮಕೂರಿಗೆ ಭಾನುವಾರ ಮಂಜು ಪೋಷಕರು ತೆರಳಿದ್ದರು. ಆಗ ಮಾವನ ಮನೆಗೆ ಬಂದ ಧರ್ಮಶೀಲನ್, ತನ್ನ ಪತ್ನಿ ಜತೆ ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಪತ್ನಿಗೆ ಚಾಕುವಿನಿಂದ ಐದಾರು ಬಾರಿ ಇರಿದು ಕೊಂದು ಬಳಿಕ ಅಲ್ಲೇ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.