ಬೆಂಗಳೂರು : ಇತ್ತೀಚೆಗೆ ಬನ್ನೇರುಘಟ್ಟ ರಸ್ತೆ ದೊಡ್ಡಕಮ್ಮನಹಳ್ಳಿಯಲ್ಲಿ ಪತ್ನಿ ಗೌರಿ ಅನಿಲ್ ಸಾಂಬೇಕರ್ ಅವರನ್ನು ಹತ್ಯೆಗೈದು ಬಳಿಕ ಮೃತದೇಹವನ್ನು ಟ್ರಾಲಿ ಸೂಟ್‌ಕೇಸ್‌ಗೆ ತುಂಬಿದ ಪ್ರಕರಣ ಸಂಬಂಧ ಆರೋಪಿ ಪತಿ ರಾಕೇಶ್‌ನನ್ನು ಹುಳಿಮಾವು ಠಾಣೆ ಪೊಲೀಸರು ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಭಾನುವಾರ ಆರೋಪಿ ರಾಕೇಶ್‌ನನ್ನು ಪುಣೆಯಿಂದ ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು, ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹೆಚ್ಚಿನ ವಿಚಾರಣೆ ಸಂಬಂಧ ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಆಗದ ಹೊಂದಾಣಿಕೆ:
ಅತ್ತೆಯ ಮಗಳಾದ ಗೌರಿಯನ್ನು ಪ್ರೀತಿಸಿ ಮದುವೆಯಾಗಿದ್ದೆ. ಮದುವೆ ಬಳಿಕ ಆಕೆ ನಮ್ಮ ಕುಟುಂಬದ ಜತೆಗೆ ಹೊಂದಿಕೊಂಡು ಹೋಗಲಿಲ್ಲ. ಹೀಗಾಗಿ ಆಕೆಯ ಒತ್ತಾಯದ ಮೇರೆಗೆ ಪುಣೆಯಲ್ಲಿ ಕುಟುಂಬದಿಂದ ದೂರವಾಗಿ ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದವು. ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತ್ತು. ಹೀಗಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಗೌರಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ.ಆದರೆ, ಪತ್ನಿ ಗೌರಿ ಮತ್ತೆ ಪುಣೆಗೆ ಹೋಗೋಣ ಎಂದು ಒತ್ತಾಯಿಸಲು ಆರಂಭಿಸಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಮಾ.26ರಂದು ಸಹ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಆಕೆ ನನ್ನ ಮೇಲೆ ಹಲ್ಲೆ ಮಾಡಿದಳು. ಹೀಗಾಗಿ ಕೋಪದಿಂದ ನಾನು ಚಾಕುವಿನಿಂದ ಆಕೆ ಇರಿದು ಹತ್ಯೆ ಮಾಡಿದೆ ಎಂದು ಆರೋಪಿ ರಾಕೇಶ್ ಪ್ರಾಥಮಿಕ ವಿಚಾರಣೆಯಲ್ಲಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:
ಆರೋಪಿ ರಾಕೇಶ್ ಮಾ.26ರಂದು ಪತ್ನಿ ಗೌರಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಟ್ರಾಲಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ. ಬಳಿಕ ಸೂಟ್‌ಕೇಸ್‌ನ ಹಿಡಿಕೆ ತುಂಡಾದ ಹಿನ್ನೆಲೆಯಲ್ಲಿ ಸೂಟ್‌ಕೇಸ್ ಅನ್ನು ಶೌಚಾಗೃಹದಲ್ಲೇ ಬಿಟ್ಟು ಕಾರಿನಲ್ಲಿ ಪುಣೆಗೆ ಪರಾರಿಯಾಗಿದ್ದ. ಬಳಿಕ ಗೌರಿಯ ಸಹೋದರ ಹಾಗೂ ಮನೆಯ ಮಾಲೀಕರಿಗೆ ಕರೆ ಮಾಡಿ ಪತ್ನಿ ಗೌರಿ ಹತ್ಯೆ ವಿಚಾರ ತಿಳಿಸಿದ್ದ. ನಂತರ ಪುಣೆಯಲ್ಲಿ ಪೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಪುಣೆ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮನೆ ಮಾಲೀಕನ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗೌರಿ ಹತ್ಯೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಹುಳಿಮಾವು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.