ಲೈಟ್‌ ಆಫ್‌ ಮಾಡುವ ವಿಚಾರಕ್ಕೆ ಜಗಳ : ಮ್ಯಾನೇಜರ್‌ ಕೊಂದ!

Published : Nov 02, 2025, 08:39 AM IST
Crime news

ಸಾರಾಂಶ

ದೀಪ ಆರಿಸುವ ವಿಚಾರವಾಗಿ ಸಿಟ್ಟಿಗೆದ್ದು ಖಾಸಗಿ ಕಂಪನಿಯ ವ್ಯವಸ್ಥಾಪಕನನ್ನು ಡಂಬಲ್ಸ್‌ನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆಗೈದು ಬಳಿಕ ಗೋವಿಂದರಾಜನಗರ ಠಾಣೆ ಪೊಲೀಸರಿಗೆ ಕೆಲಸಗಾರನೊಬ್ಬ ಶರಣಾಗಿದ್ದಾನೆ.

  ಬೆಂಗಳೂರು :  ದೀಪ ಆರಿಸುವ ವಿಚಾರವಾಗಿ ಸಿಟ್ಟಿಗೆದ್ದು ಖಾಸಗಿ ಕಂಪನಿಯ ವ್ಯವಸ್ಥಾಪಕನನ್ನು ಡಂಬಲ್ಸ್‌ನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆಗೈದು ಬಳಿಕ ಗೋವಿಂದರಾಜನಗರ ಠಾಣೆ ಪೊಲೀಸರಿಗೆ ಕೆಲಸಗಾರನೊಬ್ಬ ಶರಣಾಗಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಭೀಮೇಶ್ ಬಾಬು (41) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಪೊಲೀಸ್ ಠಾಣೆಗೆ ತೆರಳಿ ಮೃತನ ಸಹೋದ್ಯೋಗಿ ಆಂಧ್ರಪ್ರದೇಶದ ವಿಜಯವಾಡದ ಸೋಮಲ ವಂಶಿ ಶರಣಾಗಿದ್ದಾನೆ.

ಕಚೇರಿಯಲ್ಲೇ ಶುಕ್ರವಾರ ರಾತ್ರಿ ಮಲಗಿದ್ದಾಗ ಲೈಟ್ ಆಫ್ ಮಾಡುವ ವಿಚಾರವಾಗಿ ಇಬ್ಬರ ಮಧ್ಯೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ಕೆರಳಿದ ವಂಶಿ, ಭೀಮೇಶ್‌ ಕಣ್ಣಿಗೆ ಖಾರದ ಪುಡಿ ಎರಚಿ ಡಂಬಲ್ಸ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಭೀಮೇಶ್‌ ಬಾಬು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲ ಹೊತ್ತಿನ ನಂತರ ಈ ಹತ್ಯೆ ಬಗ್ಗೆ ಸ್ನೇಹಿತರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ವಂಶಿ ಶರಣಾಗಿದ್ದಾನೆ.

ಖಾರದ ಪುಡಿ ತಂದು ಎರಚಿದ:

ಕನಕನಗರ ಸಮೀಪ ಡಾಟಾ ಡಿಜಿಟಲ್‌ ಬ್ಯಾಂಕ್ ಹೆಸರಿನ ಕಂಪನಿ ಕಚೇರಿ ಇದ್ದು, ಚಲನಚಿತ್ರಗಳ ಚಿತ್ರೀಕರಣದ ವಿಡಿಯೋಗಳನ್ನು ಸಂಗ್ರಹಿಸಿಡುವ ದಾಸ್ತಾನು ಕೇಂದ್ರವಾಗಿತ್ತು. ಈ ಕಂಪನಿಯಲ್ಲಿ ಹಲವು ವರ್ಷಗಳಿಂದ ಭೀಮೇಶ್ ಕೆಲಸ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆ ವಂಶಿ ಕೆಲಸಕ್ಕೆ ಸೇರಿದ್ದ. ಕಂಪನಿ ಸ್ಟೋರೇಜ್‌ನಲ್ಲೇ ವ್ಯವಸ್ಥಾಪಕ ರಾತ್ರಿ ತಂಗುತ್ತಿದ್ದ. ನಾಯಂಡಹಳ್ಳಿ ಬಳಿ ರೂಮ್ ಮಾಡಿಕೊಂಡು ವಂಶಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದ ನಿಮಿತ್ತ ಸ್ಟೋರೇಜ್‌ನಲ್ಲಿ ಶುಕ್ರವಾರ ರಾತ್ರಿ ವಂಶಿ ಸಹ ಇದ್ದ. ಆಗ ಲೈಟ್ ಆರಿಸುವ ವಿಚಾರವಾಗಿ ಇಬ್ಬರ ಮಧ್ಯೆ ತೀವ್ರ ಜಗಳವಾಗಿದೆ. ಇದರಿಂದ ಕೆರಳಿದ ವಂಶಿ, ವ್ಯವಸ್ಥಾಪಕನ ಹತ್ಯೆಗೆ ನಿರ್ಧರಿಸಿದ್ದಾನೆ. ಜಗಳವಾದ ಬಳಿಕ ಹೊರಹೋಗಿ ಖಾರದ ಪುಡಿ ಖರೀದಿಸಿ ಮರಳಿದ್ದಾನೆ. ರಾತ್ರಿ.1.30ರಲ್ಲಿ ಭೀಮೇಶ್‌ ಕಣ್ಣಿಗೆ ಖಾರದ ಪುಡಿ ಎರಚಿ ಅಲ್ಲೇ ಇದ್ದ ಡಂಬಲ್ಸ್ ತೆಗೆದುಕೊಂಡು ಮನಬಂದಂತೆ ತಲೆಗೆ ಆತ ಬಾರಿಸಿದ್ದಾನೆ. ಈ ಹೊಡೆತಕ್ಕೆ ಕಚೇರಿಯಲ್ಲಾ ರಕ್ತಮಯವಾಗಿದೆ. ಆದರೂ ಆತ ಬಿಡದೆ ಕಂಪ್ಯೂಟರ್‌ನ ಸಿಪಿಯು ವೈರ್‌ ನಿಂದ ಕುತ್ತಿಗೆ ಬಿಗಿದು ಆತ ಉಸಿರು ಚೆಲ್ಲಿದ್ದು ಖಚಿತವಾದ ನಂತರ ಆರೋಪಿ ಹಲ್ಲೆ ನಿಲ್ಲಿಸಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ನಾಯಂಡಹಳ್ಳಿಯಲ್ಲಿದ್ದ ರೂಮ್‌ಗೆ ಹೋಗಿ ತನ್ನ ಸ್ನೇಹಿತರಿಗೆ ತಾನು ಭೀಮೇಶ್‌ಗೆ ಹೊಡೆದೆ, ಆತ ಮಾತನಾಡುತ್ತಿಲ್ಲ ಎಂದು ವಂಶಿ ಹೇಳಿದ್ದಾನೆ.

ಶರಣಾಗಲು ಸ್ನೇಹಿತರ ಬುದ್ಧಿಮಾತು:

ಈ ವಿಚಾರ ತಿಳಿದ ಕೂಡಲೇ ಸ್ಟೋರೇಜ್‌ಗೆ ಆತನ ಮೂವರು ಸ್ನೇಹಿತರು ಬಂದಾಗ ರಕ್ತದ ಮಡುವಿನಲ್ಲಿ ಮೃತದೇಹ ಕಂಡಿದೆ. ತಕ್ಷಣವೇ ವಂಶಿಗೆ ಸೀದಾ ಹೋಗಿ ಪೊಲೀಸರಿಗೆ ಶರಣಾಗುವಂತೆ ಸ್ನೇಹಿತರು ಬುದ್ಧಿಮಾತು ಹೇಳಿದ್ದಾರೆ. ನೀನು ತಪ್ಪಿಸಿಕೊಂಡರೆ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ತಿಳಿ ಹೇಳಿ ಆತನನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಅಂತೆಯೇ ಗೋವಿಂದರಾಜನಗರ ಠಾಣೆಗೆ ತೆರಳಿ ವಂಶಿ ಶರಣಾಗಿದ್ದಾನೆ. ಈ ಕೃತ್ಯದ ಮಾಹಿತಿ ತಿಳಿದ ಕೂಡಲೇ ರಾತ್ರಿ ಗಸ್ತಿನಲ್ಲಿದ್ದ ಗೋವಿಂದರಾಜನಗರ ಠಾಣೆ ಇನ್ಸ್‌ಪೆಕ್ಟರ್‌ ಸುಬ್ರಹ್ಮಣಿ ಅವರು, ಘಟನಾ ಸ್ಥಳಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದ ಆರೋಪಿ

ಹಲವು ದಿನಗಳಿಂದ ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದ ವಂಶಿಗೆ ಹೆಚ್ಚು ಪ್ರಕಾಶಮಾನ ಬೆಳಕಿನಲ್ಲಿ ಕಣ್ಣು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸ್ಟೋರೇಜ್ ಕೋಣೆಯಲ್ಲಿ ಕೆಲಸ ಮುಗಿದ ಕೂಡಲೇ ಲೈಟ್ ಆಫ್ ಮಾಡಿ ಮಬ್ಬುಗತ್ತಲಿನಲ್ಲಿ ಆತ ಕೆಲಸ ಮಾಡುತ್ತಿದ್ದ. ತನ್ನ ಸಹೋದ್ಯೋಗಿಗಳಿಗೆ ಸಹ ಕೆಲಸ ಮುಗಿದ ತಕ್ಷಣವೇ ಲೈಟ್ ಆಫ್ ಮಾಡುವಂತೆ ಸಹ ವಂಶಿ ಕೋರುತ್ತಿದ್ದ. ಆದರೆ ಭೀಮೇಶ್ ಶುಕ್ರವಾರ ರಾತ್ರಿ ಲೈಟ್ ಆಫ್ ಮಾಡುವ ವಿಚಾರಕ್ಕೆ ತಕರಾರು ತೆಗೆದಿದ್ದು ಅನಾಹುತಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಆತ್ಮಹತ್ಯೆ ನಿರ್ಧರಿಸಿದ್ದ ಆರೋಪಿ

ಈ ಹತ್ಯೆ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಲು ವಂಶಿ ನಿರ್ಧರಿಸಿದ್ದ. ಆದರೆ ಸ್ನೇಹಿತರು ಬುದ್ಧಿಮಾತು ಹೇಳಿದ್ದರಿಂದ ಕೊನೆಗೆ ನಿರ್ಧಾರ ಬದಲಾಯಿಸಿದ್ದಾನೆ. ಒಂದು ವೇಳೆ ಸ್ನೇಹಿತರನ್ನು ಸಂಪರ್ಕಿಸದೆ ಹೋಗಿದ್ದರೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಪತ್ನಿ ಗರ್ಭಿಣಿ

ಆರೋಪಿ ವಂಶಿ ಪತ್ನಿ ತುಂಬು ಗರ್ಭಿಣಿಯಾಗಿದ್ದು, ವಿಜಯವಾಡದಲ್ಲೇ ತಮ್ಮ ಪೋಷಕರ ಮನೆಯಲ್ಲಿ ಅವರು ನೆಲೆಸಿದ್ದಾರೆ. ಎಂಟು ತಿಂಗಳ ಹಿಂದೆ ಕೆಲಸ ಅರಸಿಕೊಂಡು ವಂಶಿ ಬಂದಿದ್ದ ಎಂದು ಮೂಲಗಳು ಹೇಳಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೇಲ್‌ಗಾಗಿ ಮತ್ತೆ ಹೈಕೋರ್ಟ್‌ಗೆ ಬೈರತಿ
ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ