ಮಹಾ ಶಿವರಾತ್ರಿಯಂದು ಬೆಳ್ಳಂಬೆಳಗ್ಗೆಯೇ ಮಂಡ್ಯದಲ್ಲಿ ಪುಡಿ ರೌಡಿಗೆ ಪೊಲೀಸರಿಂದ ಕಾಲಿಗೆ ಗುಂಡೇಟು...!

KannadaprabhaNewsNetwork | Updated : Feb 27 2025, 04:16 AM IST

ಸಾರಾಂಶ

ಮಹಾ ಶಿವರಾತ್ರಿಯಂದು ಬೆಳ್ಳಂಬೆಳಗ್ಗೆಯೇ ಪೊಲೀಸರ ಗನ್ ಸದ್ದು ಮಾಡಿದೆ. ಪುಡಿ ರೌಡಿಯೊಬ್ಬನ ಕಾಲಿಗೆ ಗುಂಡು ಹೊಡೆದು ಪುಡಿ ರೌಡಿಗಳ ಸದ್ದಡಗಿಸಲು ಹಾಗೂ ಮಟ್ಟಹಾಕುವ ನಿಟ್ಟಿನಲ್ಲಿ ಪೊಲೀಸರು ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.  

  ಮಂಡ್ಯ : ಮಹಾ ಶಿವರಾತ್ರಿಯಂದು ಬೆಳ್ಳಂಬೆಳಗ್ಗೆಯೇ ಪೊಲೀಸರ ಗನ್ ಸದ್ದು ಮಾಡಿದೆ. ಪುಡಿ ರೌಡಿಯೊಬ್ಬನ ಕಾಲಿಗೆ ಗುಂಡು ಹೊಡೆದು ಪುಡಿ ರೌಡಿಗಳ ಸದ್ದಡಗಿಸಲು ಹಾಗೂ ಮಟ್ಟಹಾಕುವ ನಿಟ್ಟಿನಲ್ಲಿ ಪೊಲೀಸರು ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.

ನಗರದ ಚಿಕ್ಕೇಗೌಡನದೊಡ್ಡಿಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನವೊಂದರಲ್ಲಿ ಪುಡಿರೌಡಿಗಳು ಲಾಂಗು-ಮಚ್ಚು ಝಳಪಿಸಿ ಯುವಕನೊಬ್ಬನಿಗೆ ಮನಸೋಇಚ್ಛೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಸುಭಾಷ್ ಎಂಬುವವನಿಗಾಗಿ ಹುಡುಕಾಟ ನಡೆಸಿದ್ದರು.

ಬುಧವಾರ ಬೆಳಗ್ಗೆ ಬಿ.ಹೊಸೂರು ಗ್ರಾಮದ ಬಳಿ ಪತ್ತೆಯಾದ ಸುಭಾಷ್‌ನನ್ನು ಪೊಲೀಸರು ಸೆರೆ ಹಿಡಿಯುವ ವೇಳೆ ಪೂರ್ವ ಠಾಣೆ ಪಿಎಸ್‌ಐ ಶೇಷಾದ್ರಿ ಮೇಲೆ ಕಲ್ಲಿನಿಂದ ದಾಳಿ ನಡೆಸಲು ಮುಂದಾದಾಗ ಆತನ ಬಲಗಾಲಿಗೆ ಶೇಷಾದ್ರಿ ಅವರು ಗುಂಡು ಹಾರಿಸಿ ವಶಕ್ಕೆ ಪಡೆದರು. ಸದ್ಯ ಆತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ತಾವರೆಗೆರೆಯ ಹೇಮಂತ, ಗಾಂಧಿನಗರದ ಮಹಮ್ಮದ್ ಸಮೀರ್ ಅಲಿಯಾಸ್ ಸಾಲ್ಟ್, ಶಿವಾನಂದ ಅಲಿಯಾಸ್ ಗೊಳ್ಳೆ, ಅಜಯ ಅಲಿಯಾಸ್ ಚಿಕ್ಕಣ್ಣ, ಮರೀಗೌಡ ಬಡಾವಣೆಯ ಪುನೀತ, ಕಾವೇರಿನಗರದ ಉಲ್ಲಾಸ, ಗೆಜ್ಜಲಗೆರೆಯ ಸ್ವರೂಪ್‌ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

ಪ್ರಕರಣವೇನು?

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಹಸುವಟ್ಟಿ ಗ್ರಾಮದ ಯಶ್ವಂತ್ (19) ಎಂಬಾತ ಫೆ.15ರಂದು ತನ್ನ ಸ್ನೇಹಿತನಾದ ಚಿಕ್ಕಮುಲಗೂಡು ಗ್ರಾಮದ ಸಿದ್ದರಾಜು ಜೊತೆ ಕೆಲಸದ ನಿಮಿತ್ತ ಮಂಡ್ಯಕ್ಕೆ ಬಂದು ಮತ್ತೆ ವಾಪಸ್ ಊರಿಗೆ ತೆರಳಲು ಸಾರಿಗೆ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಅಲ್ಲಿಗೆ ವರದ, ಸುಬ್ಬಿ, ಚಿರು, ಧನು ಅವರು ಅಲ್ಲಿಗೆ ಬಂದು ಸಿದ್ದರಾಜುವಿಗೆ ಬಾಯಿಗೆ ಬಂದಂತೆ ಬೈಯ್ದು ಹಲ್ಲೆ ನಡೆಸಿದರು. ಆ ಸಮಯದಲ್ಲಿ ಯಶ್ವಂತ್ ಮಧ್ಯಪ್ರವೇಶಿಸಿ ಸಿದ್ದರಾಜು ರಕ್ಷಣೆಗೆ ನಿಂತಿದ್ದನೆನ್ನಲಾಗಿದೆ.

ಇದರಿಂದ ಕ್ರೋಧಗೊಂಡ ನಾಲ್ವರು ನೀನು ನಮ್ಮ ಕಡೆಯವನಾಗಿದ್ದು ಆತನನ್ನು ರಕ್ಷಣೆ ಮಾಡುತ್ತಿದ್ದೀಯಾ. ನಿನಗಿದೆ ಮಗನೇ ಎಂದು ಎಚ್ಚರಿಕೆ ನೀಡಿ ಹೋಗಿದ್ದರು. ನಂತರ ಫೆ.17ರಂದು ಬೆಳಗ್ಗೆ 10.30ರ ವೇಳೆಗೆ ಯಶ್ವಂತನಿಗೆ ಫೋನ್ ಮಾಡಿದ ವರದ ನಿನ್ನ ಬಳಿ ಮಾತನಾಡಬೇಕು ಬಾ ಎಂದು ಹೇಳಿದನು. ಅದಕ್ಕೆ ಒಪ್ಪಿ ಯಶ್ವಂತ್ ಮಧ್ಯಾಹ್ನ 12 ಗಂಟೆಗೆ ಮಂಡ್ಯಕ್ಕೆ ಬಂದು ವಿದ್ಯಾನಗರದ ಉದ್ಯಾನವನದ ಬಳಿ ಇದ್ದೆನು. ಮಧ್ಯಾಹ್ನ ೨.೩೦ರ ವೇಳೆಗೆ ವರದ, ಸುಭಾಷ್ ಮತ್ತು ಧನುಷ್ ಅವರು ಮೋಟಾರ್ ಬೈಕ್‌ನಲ್ಲಿ ಬಂದಿಳಿದರು. ವರದ ಏಕಾಏಕಿ ಯಶ್ವಂತನ ಮುಖಕ್ಕೆ ಹೊಡೆದು ನಮ್ಮ ಜೊತೆ ಬಾ ಎಂದರು. ಇದರಿಂದ ಹೆದರಿದ ಯಶ್ವಂತ್ ಅಲ್ಲಿಂದ ಹೋಗಲು ಯತ್ನಿಸಿದಾಗ ಬಲವಂತವಾಗಿ ಕೂರಿಸಿಕೊಂಡು ಚಿಕ್ಕೇಗೌಡನದೊಡ್ಡಿಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನಕ್ಕೆ ಕರೆದೊಯ್ದರು.

ಅಲ್ಲಿ ಅವರ ಸ್ನೇಹಿತರಾದ ಚಿರು, ಹರ್ಷ ಮತ್ತು ಇತರೆ ಎಂಟ್ಹತ್ತು ಮಂದಿ ಸೇರಿ ಯಶ್ವಂತ್‌ನನ್ನು ಒಂದು ಗೋರಿಯ ಮೇಲೆ ಕೂರಿಸಿ ಲಾಂಗ್‌ಗಳಿಂದ ಹಲ್ಲೆ ನಡೆಸಿದರು. ಡ್ರ್ಯಾಗನ್‌ನಿಂದ ಕೈ-ಕಾಲುಗಳ ಮೇಲೆ ಹಲ್ಲೆ ನಡೆಸಿ ಸಾಯಿಸುವುದಾಗಿ ಬೆದರಿಕೆ ಹಾಕಿದರು. ಅವರ ಬಳಿ ಕಾಡಿ ಬೇಡಿ ಅಲ್ಲಿಂದ ತಪ್ಪಿಸಿಕೊಂಡು ಯಶ್ವಂತ್ ಊರಿಗೆ ಹೋಗಿದ್ದನು. ಅವರಿಗೆ ಹೆದರಿ ಪೊಲೀಸರಿಗೆ ದೂರು ಕೊಡದೆ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿರಲಿಲ್ಲ ಎಂದು ಗೊತ್ತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವೀಡಿಯೋ ಆಧರಿಸಿ ತನಿಖೆ ನಡೆಸಿದ ಪೊಲೀಸರು ಹಲ್ಲೆಗೊಳಗಾದ ಯುವಕ ಮೈಸೂರಿನ ಟಿ.ನರಸೀಪುರ ತಾಲೂಕಿನ ಹಸುವಟ್ಟಿ ಗ್ರಾಮದ ಯಶ್ವಂತ್ ಎಂಬುದು ತಿಳಿದುಬಂದಿತು. ಆತನಿಂದ ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು.

ಈ ಎಂಟು ಜನ ಬಿ.ಹೊಸೂರು ಗ್ರಾಮದಲ್ಲಿರುವ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ತಲೆಮರೆಸಿಕೊಂಡಿದ್ದ ಸುಭಾಷ್‌ಗಾಗಿ ಶೋಧ ಕಾರ್ಯ ಕೈಗೊಂಡಿದ್ದರು.

ಕಲ್ಲಿನಿಂದ ಹಲ್ಲೆಗೆ ಮುಂದಾದಾಗ ಗುಂಡೇಟು: ಎಸ್‌ಪಿ

  ಮಂಡ್ಯ : ಆರೋಪಿ ಸುಭಾಷ್‌ನನ್ನು ಬಂಧಿಸುವ ಸಮಯದಲ್ಲಿ ಪೂರ್ವ ಠಾಣೆ ಪಿಎಸ್‌ಐ ಶೇಷಾದ್ರಿ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಶೇಷಾದ್ರಿ ಅವರು ಆತನ ಬಲಗಾಲಿಗೆ ಗುಂಡು ಹಾರಿಸಿದರು ಎಂದು ಜಿಲ್ಲಾ ಪೊಲೀಸ್ ಆರಕ್ಷಕ ನಿರೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಕನಿಗೆ ಹಲ್ಲೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಹಲ್ಲೆಗೊಳಗಾದ ಯುವಕ ಮೈಸೂರಿನ ಟಿ.ನರಸೀಪುರ ತಾಲೂಕಿನ ಯಶ್ವಂತ್ ಎಂಬುದು ಪತ್ತೆಯಾಗಿತ್ತು ಎಂದು ವಿವರಿಸಿದರು.

ಆತನಿಂದ ದೂರು ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ದೂರು ಕೊಡುವ ಸಮಯದಲ್ಲಿ ಹಲ್ಲೆ ಮಾಡಿದ ನಾಲ್ವರ ಹೆಸರು ಹೇಳಿದ್ದನು. ಈ ಪ್ರಕರಣ ಸಂಬಂಧ ಮಂಡ್ಯ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು ಎಂದರು.

ಮಂಗಳವಾರ ಸಂಜೆ ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದ ಬಳಿ ಆರೋಪಿಗಳು ಅಡಗಿರುವ ಮಾಹಿತಿ ಲಭ್ಯವಾಗಿತ್ತು. ದಾಳಿ ಮಾಡಿ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಸುಭಾಷ್ ಅಲಿಯಾಸ್ ಸುಬ್ಬು ಎಂಬಾತ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಇಂದು ಬೆಳಿಗ್ಗೆ ಮತ್ತೆ ಅದೇ ಜಾಗದಲ್ಲಿ ಶೋಧ ಮಾಡಲಾಗುತ್ತಿತ್ತು. ಈ ವೇಳೆ ಸುಭಾಷ್ ಅಲ್ಲೇ ಇದ್ದದ್ದು ಕಂಡು ಬಂದಿತ್ತು. ಅವನನ್ನು ಬಂಧಿಸುವಾಗ ಆತ ಪಿಎಸ್‌ಐ ಶೇಷಾದ್ರಿಗೆ ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾದನು. ಹೀಗಾಗಿ ಆತನ ಬಲಗಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆಯಲಾಗಿದೆ. ಆತ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದರು.

Share this article