;Resize=(412,232))
ಬೆಂಗಳೂರು : ಹಿಂದೂ ಕಾನೂನಿನಡಿ ವಿವಾಹ ಎಂಬುದು ಕೇವಲ ನಾಗರಿಕ ಒಪ್ಪಂದವಲ್ಲ ಅಥವಾ ಸಾಮಾಜಿಕ ಒಗ್ಗೂಡುವಿಕೆಯ ಸಂಕೇತವಲ್ಲ. ಅದೊಂದು ಪವಿತ್ರವಾದ ಶಾಶ್ವತ ಸಮ್ಮಿಲನ. ಸ್ವರ್ಗದಲ್ಲಿ ನಿಶ್ಚಯಗೊಂಡು ಭೂಮಿಯಲ್ಲಿ ನೆರವೇರುವ ಬಂಧವೆಂದು ನಂಬಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವರದಕ್ಷಿಣೆ ಕಿರುಕುಳ ಸಂಬಂಧ ಪತಿ ವಿರುದ್ಧ ಸುಳ್ಳು ಆರೋಪ ಹೊರಿಸಿ ವಿಚ್ಛೇದನ ಮಂಜೂರಾತಿಗೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠವು ಹೀಗೆ ನುಡಿದಿದೆ.
ಕ್ರೌರ್ಯಸಾಬೀತುಪಡಿಸದ ಹೊರತು ವಿಚ್ಛೇದನ ನೀಡಲು ಸಾಧ್ಯವಿಲ್ಲ
ಹಿಂದೂ ವಿವಾಹ ಕಾಯ್ದೆಯಡಿ ಪತಿ ಮತ್ತವರ ಕುಟುಂಬದವರಿಂದ ಕ್ರೌರ್ಯಕ್ಕೆ ಒಳಗಾಗಿರುವುದನ್ನು ಸಾಬೀತುಪಡಿಸದ ಹೊರತು ವಿಚ್ಛೇದನ ನೀಡಲು ಸಾಧ್ಯವಿಲ್ಲ. ಪತಿಯ ಮನೆಯಲ್ಲಿ ಅರ್ಜಿದಾರೆ ಕೇವಲ 21 ದಿನ ವಾಸವಿದ್ದರು. ಅಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದರು. ಆದರೆ, ಶಿಕ್ಷಣ ಮುಗಿದ ಬಳಿಕ ಮತ್ತೆ ಪತಿ ಮನೆಗೆ ತೆರಳುವುದಾಗಿ ತಿಳಿಸಿದ್ದರು. ಇದರಿಂದ ಕೇವಲ ಪತಿಯಿಂದ ವಿಚ್ಛೇದನ ಪಡೆಯಲು ವರದಕ್ಷಿಣೆ ಕಿರುಕುಳ ಆರೋಪ ಮಾಡಿರುವುದು ದೃಢಪಡಲಿದ್ದು, ವಿಚ್ಛೇದನ ಮಂಜೂರು ಮಾಡಬೇಕೆಂಬ ಅರ್ಜಿದಾರೆಯ ಮನವಿ ಪುರಸ್ಕರಿಸಲಾಗದು ಎಂದು ಪೀಠ ಹೇಳಿದೆ.
ಅಲ್ಲದೆ, ಹಿಂದೂ ಕಾನೂನಿನಡಿ ವಿವಾಹ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿ ಮೇಲೆ ನೆರವೇರುವ ಬಂಧ ಎಂದು ನಂಬಲಾಗಿದೆ. ಅಗ್ನಿ ಸಾಕ್ಷಿಯಾಗಿ ವಧು ಮತ್ತು ವರ ಪರಸ್ಪರ ಕೈಹಿಡಿದು ಧರ್ಮೇಚ, ಅರ್ಥೇಚ, ಕಾಮೇಚ ಮತ್ತು ಮೋಕ್ಷೇಚವೆಂದು ವೈವಾಹಿಕ ಜೀವನದ ನಾಲ್ಕು ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಪ್ರತಿಜ್ಞೆ ಮಾಡುತ್ತಾರೆ. ಆ ಮೂಲಕ ಸದಾಚಾರ, ಸಮೃದ್ಧಿ, ಪ್ರೀತಿ ಮತ್ತು ಆಧ್ಯಾತ್ಮಿಕ ಬಂಧದಲ್ಲಿ ಒಟ್ಟಿಗೆ ನಡೆಯುವ ಬದ್ಧತೆ ಸೂಚಿಸುತ್ತಾರೆ. ಆದ್ದರಿಂದ ವಿವಾಹ ಸಮಾರಂಭವು ಕೇವಲ ಸಾಮಾಜಿಕ ಒಗ್ಗೂಡಿಕೆಯನ್ನು ಸೂಚಿಸುವುದಿಲ್ಲ. ಬದಲಾಗಿ ವಿಧಿ ನಿರ್ಣಯಿಸಿದ ದೈವಿಕ ಸಹಭಾಗಿತ್ವವನ್ನು ಸೂಚಿಸುತ್ತದೆ ಎಂದು ಪೀಠ ನುಡಿಯುವ ಮೂಲಕ ಅರ್ಜಿದಾರೆಗೆ ವೈವಾಹಿಕ ಜೀವನದ ಮಹತ್ವದ ಬಗ್ಗೆ ಪಾಠ ಮಾಡಿದೆ.
ಪ್ರಕರಣವೇನು?
ಅರ್ಜಿದಾರೆಯು ರವಿ ಎಂಬಾತ (ಹೆಸರು ಬದಲಿಸಲಾಗಿದೆ) ಬೆಂಗಳೂರಿನಲ್ಲಿ 2012ರ ಮೇ 30ರಂದು ಮದುವೆಯಾಗಿದ್ದರು. ಅದಾದ ಸ್ವಲ್ಪದಿನದಲ್ಲೇ ಪೊಲಿಸರಿಗೆ ಪತ್ನಿ ದೂರು ನೀಡಿದ್ದರು. ಪತಿಯ ಮನೆಯಲ್ಲಿ ನಾನು 21 ದಿನಗಳ ಕಾಲ ವಾಸವಿದ್ದೆ. ಈ ನಡುವೆ 50 ಸಾವಿರ ರು. ಹೆಚ್ಚುವರಿ ವರದಕ್ಷಿಣೆಗೆ ಪತಿ ಬೇಡಿಕೆಯಿಟ್ಟರು. ಹಣ ನೀಡದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಅರ್ಜಿದಾರೆ ಆರೋಪಿಸಿದ್ದರು.
ಬಳಿಕ ವಿಚ್ಛೇದನ ಮಂಜೂರು ಮಾಡಬೇಕು ಹಾಗೂ ಜೀವನಾಂಶ ನೀಡಲು ಪತಿಗೆ ಆದೇಶಿಸಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದ್ದರಿಂದ ಅರ್ಜಿದಾರೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಪತ್ನಿಯ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದ ಪತಿ, ಮದುವೆಗೆ ನಾನೇ ಪತ್ನಿಗೆ ಆರ್ಥಿಕ ನೆರವು ನೀಡಿದ್ದೆ. ಮದುವೆ ಬಳಿಕ ಪೋಷಕರನ್ನು ಬಿಟ್ಟು ಬರಲು ಒತ್ತಾಯಿಸಿದ್ದಳು. ಅದಕ್ಕೆ ಒಪ್ಪದ ಕಾರಣ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ವಿಚ್ಛೇದನ ಕೋರಿದ್ದಾರೆ ಎಂದು ಆಕ್ಷೇಪಿಸಿದ್ದರು.