ಕನ್ನಡಪ್ರಭ ವಾರ್ತೆ ಭಾರತೀನಗರ
ಕಾರು, ಬೈಕ್ ನಡುವೆ ಡಿಕ್ಕಿ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಮೀಪದ ಚಂದೂಪುರ ಗೇಟ್‌ಬಳಿ ಜರುಗಿದೆ.ಮಳವಳ್ಳಿ ತಾಲೂಕು ಹುಲ್ಲೇಗಾಲ ಗ್ರಾಮದ ನಿವಾಸಿ ಶ್ರೀನಿವಾಸ್ ಪುತ್ರ ಪ್ರಜ್ವಲ್(20) ಸಾವನ್ನಪಿರುವ ದುರ್ದೈವಿ.
ಭಾರತೀನಗರದಿಂದ ಹಲಗೂರು ರಸ್ತೆ ಮಾರ್ಗವಾಗಿ ಹುಲ್ಲೇಗಾಲ ಗ್ರಾಮದೆಡೆಗೆ ಪ್ರಜ್ವಲ್ ತನ್ನ ಬೈಕ್‌ನಲ್ಲಿ ತೆರಳಿತ್ತಿದ್ದ ವೇಳೆ ಎಸ್.ಐ.ಹೊನ್ನಲಗೆರೆ ಕಡೆಯಿಂದ ಇಗ್ಗಲೂರು ಕಡೆಗೆ ಚಲಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಸಂಭವಿಸಿದೆ. ಈ ವೇಳೆ ನೆಲಕ್ಕೆ ಉರುಳಿ ಬಿದ್ದ ಪ್ರಜ್ವಲ್ ತಲೆಗೆ ಪೆಟ್ಟುಬಿದ್ದು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಸ್ಥಳದಲ್ಲೇ ಮೃತಪಟ್ಟಿದ್ದರಿಂದ ವೈದ್ಯರು ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಕಾರನ್ನು ವಶಕ್ಕೆ ಪಡೆದಿರುವ ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮುರಿದುಬಿದ್ದ ವಿದ್ಯುತ್ ಕಂಬ: ಬೈಕ್ ಸವಾರ ಪಾರು
ಮಂಡ್ಯ:ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಹೆದ್ದಾರಿಯಲ್ಲಿ ಕಬ್ಬಿಣದ ವಿದ್ಯುತ್ ಕಂಬ ಬೈಕ್ ಸವಾರನ ಮೇಲೆ ಉರುಳಿ ಬಿದ್ದ ಪರಿಣಾಮ ಸವಾರ ಪ್ರಾಣಾಪಾಯದಿಂದ ಆಶ್ಚರ್ಯಕರ ರೀತಿ ಬಚಾವ್ ಆಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.ಶ್ರೀರಂಗಪಟ್ಟಣದ ಗಂಜಾಂ ಸುರೇಶ್ ಅವರು ಮಂಡ್ಯದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು, ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಹೆದ್ದಾರಿಯ ಬಳಿ ಬರುತ್ತಿದ್ದಂತೆ ಗಾಳಿಗೆ ವಿದ್ಯುತ್ ಕಂಬ ಮುರಿದು ರಸ್ತೆ ಮೇಲೆ ಬೀಳುವಾಗ ಸುರೇಶ್ ಅವರ ದ್ವಿಚಕ್ರ ವಾಹನದ ಹೆಡ್‌ಲೈಟ್ ಮೇಲೆ ಬಿದ್ದಿದೆ.ವಿದ್ಯುತ್ ಕಂಬ ಬಿದ್ದ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಪ್ರಾಣಪಾಯ ಸಂಭವಿಸಿಲ್ಲ. ಗ್ರಾಮಸ್ಥರು ಗಾಯಾಳುವನ್ನ ಉಪಚರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಮೇಲೆ ವಿದ್ಯುತ್ ತಂತಿ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೆ ಕೆಲ ಸಮಯದವರೆಗೆ ಅಡಚಣೆ ಉಂಟಾಗಿತ್ತು.ಸದಾ ವಾಹನಗಳಿಂದಲೇ ಗಿಜಿಗುಡುತ್ತಿದ್ದ ರಸ್ತೆಯು ವಿದ್ಯುತ್ ಕಂಬ ಮುರಿದು ಬೀಳುವ ವೇಳೆ ವಾಹನಗಳ ಸಂಚರಿಸದಿರುವುದರಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ರಾಗಿಮುದ್ದನಹಳ್ಳಿ ಗ್ರಾಮದ ದಿವಾಕರ್ ಮಾಹಿತಿ ನೀಡಿದರು.