ಯುವತಿ ಇದ್ದ ಕಾರಿನ ಎದುರು ಹಸ್ತಮೈಥುನ ಮಾಡಿಕೊಂಡ ಕಾಮುಕ!

KannadaprabhaNewsNetwork | Updated : Jan 12 2024, 05:28 PM IST

ಸಾರಾಂಶ

ಕಾರಲ್ಲಿ ಕುಳಿತ್ತಿದ್ದ ಯುವತಿಯ ಮುಂದೆ ಅಪರಿಚಿತ ಹಸ್ತಮೈಥುನ ಮಾಡಿಕೊಂಡಿರುವ ಕೃತ್ಯ ಬೆಂಗಳೂರಿನ ಬಾಗ್ಮನೆ ಟೆಕ್‌ ಪಾರ್ಕ್‌ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವತಿಯೊಬ್ಬರು ಕಾರಿನಲ್ಲಿ ಕುಳಿತಿದ್ದಾಗ ಕಾರಿನ ಬಳಿ ಬಂದು ಕಾಮುಕನೊಬ್ಬ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹದೇವಪುರದ ಬಾಗ್ಮನೆ ಟೆಕ್‌ ಪಾರ್ಕ್‌ ಸಮೀಪದ ಸರ್ವಿಸ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆ ಎಕ್ಸ್‌ ಖಾತೆಯಲ್ಲಿ ಘಟನೆಯನ್ನು ವಿವರಿಸಿ, ನಗರ ಪೊಲೀಸರ ಖಾತೆಗೆ ಟ್ಯಾಗ್‌ ಮಾಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ಸಂತ್ರಸ್ತೆಯ ಸಂಪರ್ಕ ಸಂಖ್ಯೆ ಕೇಳಿದ್ದಾರೆ. ಇದರ ಬೆನ್ನಲ್ಲೇ ಮಹದೇವಪುರ ಠಾಣೆ ಪೊಲೀಸರು ಕಾಮುಕನ ಪತ್ತೆಗೆ ಶೋಧಿಸುತ್ತಿದ್ದಾರೆ.

ಏನಿದು ಘಟನೆ?
‘ಜ.4ರಂದು ರಾತ್ರಿ 8.40 ಸುಮಾರಿಗೆ ಮಹದೇವಪುರದ ಬಾಗ್ಮನೆ ಟೆಕ್‌ ಪಾರ್ಕ್‌ ಎದುರಿನ ಸರ್ವಿಸ್‌ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡು ಕಾರಿನೊಳಗೆ ಕುಳಿತ್ತಿದ್ದೆ. ಈ ವೇಳೆ ಕಾರಿನ ಸಮೀಪ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ, ನನ್ನನ್ನೇ ದಿಟ್ಟಿಸಿ ನೋಡಲು ಆರಂಭಿಸಿದ. ಬಳಿಕ ಕಾರಿನ ಎದುರು ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ. 

ಈ ವೇಳೆ ಭಯಗೊಂಡು ಕಾರನ್ನು ಮುಂದೆ ಚಲಾಯಿಸಲು ಪ್ರಯತ್ನಿಸಿದೆ. ಆದರೆ, ನನ್ನ ಕಾರು ಹೋಗಬೇಕಿದ್ದ ದಾರಿಯಲ್ಲಿ ಮತ್ತೊಂದು ಕಾರನ್ನು ನಿಲುಗಡೆ ಮಾಡಲಾಗಿತ್ತು. ಹೀಗಾಗಿ ಕಾರಿನ ಬಾಗಿಲು ಲಾಕ್‌ ಮಾಡಿಕೊಂಡು ಸ್ಟೇರಿಂಗ್‌ ಕೆಳಗೆ ತಲೆ ತಗ್ಗಿಸಿ ಕುಳಿತಿದ್ದೆ’ ಎಂದು ಸಂತ್ರಸ್ತೆ ಘಟನೆಯನ್ನು ವಿವರಿಸಿದ್ದಾರೆ.

ಮುಂದುವರೆದು, ‘ಅಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ನನ್ನ ಕಾರಿನ ಸುತ್ತ ಓಡಾಡಲು ಶುರು ಮಾಡಿದ. ಕಾರಿನ ಗಾಜು ಕುಟ್ಟಿ ಅಸಭ್ಯವಾಗಿ ಸನ್ನೆ ಮಾಡುತ್ತಿದ್ದ. ಆದರೂ ನಾನು ಕಾರಿನಿಂದ ಹೊರಗೆ ಬರಲಿಲ್ಲ. ಸುಮಾರು ಹತ್ತು ನಿಮಿಷದ ಬಳಿಕ ನನ್ನ ಸ್ನೇಹಿತರೊಬ್ಬರು ಕಾರಿನ ಬಳಿಗೆ ಬಂದರು. 

ಈ ವೇಳೆ ನಾನು ಧೈರ್ಯ ಮಾಡಿ ಹೊರಗೆ ಬಂದು ನಡೆದ ಘಟನೆಯನ್ನು ಸ್ನೇಹಿತರಿಗೆ ತಿಳಿಸಿದೆ. ಬಳಿಕ ಇಬ್ಬರೂ ಆ ವ್ಯಕ್ತಿಯನ್ನು ಕಾರಿನ ಸುತ್ತಮುತ್ತ ಹುಡುಕಾಡಿದೆವು. ಆದರೆ, ಆ ವ್ಯಕ್ತಿ ನಾಪತ್ತೆಯಾಗಿದ್ದ’ ಎಂದು ಎಕ್ಸ್‌ ಖಾತೆಯಲ್ಲಿ ಅಂದು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

Share this article