ಎತ್ತಿನಹೊಳೆ ಉದ್ಘಾಟನೆ ಸಮಾರಂಭ ವೇಳೆ ಮುನಿಸಿಕೊಂಡ ಸಚಿವ ಮುನಿಯಪ್ಪ, ಸಿಎಂ ಸಿದ್ದರಾಮಯ್ಯ ಸಮಾಧಾನ

ಸಾರಾಂಶ

ಎತ್ತಿನಹೊಳೆ ಯೋಜನೆ ಉದ್ಘಾಟನೆ ಸಮಾರಂಭ ವೇಳೆ ಕಾರ್ಯಕ್ರಮ ವೇದಿಕೆಯಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಆಗಾಗ ಸಿಡಿಮಿಡಿಕೊಳ್ಳುತ್ತಿದ್ದರು.

ಹಾಸನ: ಎತ್ತಿನಹೊಳೆ ಯೋಜನೆ ಉದ್ಘಾಟನೆ ಸಮಾರಂಭ ವೇಳೆ ಕಾರ್ಯಕ್ರಮ ವೇದಿಕೆಯಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಆಗಾಗ ಸಿಡಿಮಿಡಿಕೊಳ್ಳುತ್ತಿದ್ದರು. ವೇದಿಕೆಯಲ್ಲಿ ಹೆಚ್ಚು ಗಣ್ಯರು ಇರುವುದರಿಂದ ಸಿಎಂ ಮತ್ತು ಡಿಸಿಎಂ ಮಾತ್ರ ಭಾಷಣ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಸಿದ್ಧರಾಮಯ್ಯ ಅವರು ಭಾಷಣ ಮಾಡಲಿದ್ದಾರೆ ಎಂದು ನಿರೂಪಕರು ಹೇಳಿದ ಕೂಡಲೇ ಎದ್ದುಬಂದ ಮುನಿಯಪ್ಪ ಅವರು, ಇಲ್ಲ ನಾನು ಮಾತನಾಡಲೇಬೇಕು ಎಂದು ಪಟ್ಟುಹಿಡಿದರು. ಇದರಿಂದಾಗಿ ಭಾಷಣ ಮಾಡಲು ಎದ್ದು ಹೋರಟಿದ್ದ ಸಿದ್ದರಾಮಯ್ಯ ವಾಪಸ್‌ ಕುರ್ಚಿಗೆ ಹೋಗಿ ಕುಳಿತರು.

ಇದಾದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹಲವರ ಹೆಸರನ್ನು ಹೇಳಿ ಮುನಿಯಪ್ಪ ಅವರ ಹೆಸರು ಹೇಳಲಿಲ್ಲ. ಅದಾಗಲೇ ತನ್ನ ಹೆಸರು ಹೇಳಿಲ್ಲ ಎಂದು ಗುಸುಗುಸು ಎನ್ನುತ್ತಿದ್ದ ಮುನಿಯಪ್ಪ ಅವರನ್ನು ಕಂಡ ಸಿಎಂ, ‘ಸಿಟ್ಟಾಗಬೇಡ್ರಿ ಮುನಿಯಪ್ಪ. ಯಾಕ್ರೀ ರೈಜ್ ಆಗ್ತೀರಾ’ ಎಂದು ಸಮಾಧಾನ ಮಾಡಿದರು.

ಎತ್ತಿನಹೊಳೆ ಯೋಜನೆಯ ಮೊದಲ ಹಂತದಲ್ಲಿ ಕೋಲಾರದವರೆಗೆ ನೀರು ಬರುವುದಿಲ್ಲ ಎನ್ನುವುದನ್ನು ಅರಿತ ಮುನಿಯಪ್ಪ ಅವರು, ಮುಂದಿನ ದಿನಗಳಲ್ಲಿ 2ನೇ ಹಂತದ ಯೋಜನೆ ಕಾಮಗಾರಿ ಮಾಡುತ್ತಾರೋ ಇಲ್ಲವೋ ಎನ್ನುವ ಆತಂಕದಲ್ಲಿದ್ದರು. ಇದನ್ನು ಅರ್ಥ ಮಾಡಿಕೊಂಡ ಸಿದ್ದರಾಮಯ್ಯ ಅವರು, ತಮ್ಮ ಈ ಅವಧಿಯಲ್ಲೇ ಕೋಲಾರದವರೆಗೂ ನೀರು ಹರಿಸಿಯೇ ಸಿದ್ಧ ಎಂದು ಭರವಸೆ ನೀಡಿದರು.

Share this article