ಶೂಟೌಟ್‌ ತನಿಖೆ ಚುರುಕು - ನನ್ನ ಚಿಕ್ಕಮ್ಮ ಅನುರಾಧ ಅವರೇ ಅಟ್ಯಾಕ್ ಮಾಡಿಸಿದ್ದು : ರಿಕ್ಕಿ ರೈ

ಸಾರಾಂಶ

ದುಷ್ಕರ್ಮಿಯ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈ ಅವರನ್ನು ಭೇಟಿಯಾಗಿ ರಾಮನಗರ ಉಪವಿಭಾಗ ಡಿವೈಎಸ್ಪಿ ಪಿ.ಶ್ರೀನಿವಾಸ್ ಭಾನುವಾರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ರಾಮನಗರ : ಮಾಜಿ ಭೂಗತ ಡಾನ್‌ ದಿ.ಮುತ್ತಪ್ಪ ರೈಯವರ ಮಗ ರಿಕ್ಕಿ ರೈ ಮೇಲಿನ ಶೂಟೌಟ್‌ ಪ್ರಕರಣದ ತನಿಖೆ ಚುರುಕುಗೊಂಡಿದೆ. ದುಷ್ಕರ್ಮಿಯ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈ ಅವರನ್ನು ಭೇಟಿಯಾಗಿ ರಾಮನಗರ ಉಪವಿಭಾಗ ಡಿವೈಎಸ್ಪಿ ಪಿ.ಶ್ರೀನಿವಾಸ್ ಭಾನುವಾರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

ಪೊಲೀಸರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ರಿಕ್ಕಿ ರೈ ಅವರು ರಾಕೇಶ್ ಮಲ್ಲಿ ಮತ್ತು ನನ್ನ ಚಿಕ್ಕಮ್ಮ ಅನುರಾಧ ರೈ ಅವರೇ ಅಟ್ಯಾಕ್ ಮಾಡಿಸಿದ್ದಾರೆ ಎಂದು ಪುನರುಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ. ವಿದೇಶದಿಂದ ಬೆಂಗಳೂರಿಗೆ ಬಂದಾಗ ಸದಾಶಿವನಗರ ಹಾಗೂ ಬಿಡದಿಯಲ್ಲಿ ಹೆಚ್ಚಾಗಿ ಇರುತ್ತೇನೆ. ಬಿಡದಿಯಿಂದ ಸದಾಶಿವನಗರದ ಮನೆಗೆ ಹೋಗುವಾಗ ಅಟ್ಯಾಕ್ ಮಾಡಲಾಗಿದೆ. ನನ್ನ ಸ್ನೇಹಿತರು ಮತ್ತು ಚಾಲಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ರಿಕ್ಕಿರೈ ತಿಳಿಸಿದ್ದಾರೆ.

ಬಿಡದಿ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ:

ಮುತ್ತಪ್ಪ ರೈ ನಿವಾಸದ ಗೇಟ್ ನಿಂದ ಸ್ವಲ್ಪ ದೂರದಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಶ್ವಾನದಳ ಹಾಗೂ ಮೆಟಲ್ ಡಿಟೆಕ್ಟರ್ ಮೂಲಕ ಫಾರ್ಮ್ ಹೌಸ್ ಒಳಭಾಗದಲ್ಲಿ ಪರಿಶೀಲನೆ ನಡೆಸಿದರು. ಶೂಟೌಟ್ ಪ್ರಕರಣ ಪೊಲೀಸರ ಪಾಲಿಗೆ ಕಗ್ಗಂಟಾಗಿರುವ ಕಾರಣ ಸಿಸಿಬಿ ಪೊಲೀಸರೂ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈ ದಾಳಿ ಹಿಂದೆ ಭೂಗತ ಲೋಕದ ನಂಟಿರುವ ಶಂಕೆ ವ್ಯಕ್ತವಾಗಿರುವುದರಿಂದ ಆ ಆಯಾಮದಲ್ಲಿಯೂ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this article