ವಿಳಾಸ ಕೇಳುವ ನೆಪದಲ್ಲಿ ಸ್ತ್ರೀಯರ ಸರ ಕಳವು ಮಾಡುತ್ತಿದ್ದ ನಾಗಪುರ ಗ್ಯಾಂಗ್‌ ಸೆರೆ

KannadaprabhaNewsNetwork |  
Published : Apr 16, 2025, 01:52 AM IST
Alinaki | Kannada Prabha

ಸಾರಾಂಶ

ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಸರ ಕಳವು ಮಾಡುತ್ತಿದ್ದ ಮಹಾರಾಷ್ಟ್ರದ ಕುಖ್ಯಾತ ‘ನಾಗಪುರ ಗ್ಯಾಂಗ್‌’ನ ನಾಲ್ವರು ಸದಸ್ಯರನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹6 ಲಕ್ಷ ಮೌಲ್ಯದ 87 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಸರ ಕಳವು ಮಾಡುತ್ತಿದ್ದ ಮಹಾರಾಷ್ಟ್ರದ ಕುಖ್ಯಾತ ‘ನಾಗಪುರ ಗ್ಯಾಂಗ್‌’ನ ನಾಲ್ವರು ಸದಸ್ಯರನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹6 ಲಕ್ಷ ಮೌಲ್ಯದ 87 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ.

ಮಹಾರಾಷ್ಟ್ರ ನಾಗಪುರ ಮೂಲದ ಶಬೀರ್‌ (39), ಶಾಹೀದ್‌(34), ಅಲಿನಾಕಿ(21) ಹಾಗೂ ತನ್ವೀರ್‌(37) ಬಂಧಿತರು. ಇತ್ತೀಚೆಗೆ ಜಯಮಹಲ್‌ 1ನೇ ಮುಖ್ಯರಸ್ತೆಯ ನಿವಾಸಿ ಮಹಿಳೆ ಮನೆ ಎದುರು ವಾಕಿಂಗ್‌ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು, ವಿಳಾಸ ಕೇಳುವ ನೆಪದಲ್ಲಿ ಆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಇನ್‌ಸ್ಪೆಕ್ಟರ್‌ ಕೆ.ಎಂ.ಚೈತನ್ಯ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನಲ್ಲಿ ಬಂಧನ:

ಈ ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಸಿಸಿಟಿವಿ ದೃಶ್ಯಾವಳಿಗಳ ಸುಳಿವಿನ ಮೇರೆಗೆ ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಈ ಪ್ರಕರಣದ ಇಬ್ಬರು ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಮಹಿಳೆಯ ಸರ ಕಳವು ಮಾಡಿದ್ದು ತಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ನಗರದ ವಿವಿಧೆಡೆ ಸರ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ತಾವು ನಗರದಲ್ಲಿ ಕಳವು ಮಾಡಿದ ಚಿನ್ನದ ಸರಗಳನ್ನು ಮಹಾರಾಷ್ಟ್ರದ ನಾಗಪುರದ ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದಾಗಿ ಹೇಳಿದ್ದಾರೆ. ಅದರಂತೆ ನಾಗಪುರದ ಜ್ಯುವೆಲರಿ ಅಂಗಡಿಯಲ್ಲಿ ಆರೋಪಿಗಳು ಮಾರಾಟ ಮಾಡಿದ್ದ 87 ಗ್ರಾಂ ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ.

ಮೂರು ಪ್ರಕರಣ ಪತ್ತೆ:ಆರೋಪಿಗಳ ಬಂಧನದಿಂದ ಅಶೋಕನಗರ, ಸದಾಶಿವನಗರ ಹಾಗೂ ಜೆ.ಸಿ.ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಸರಗಳವು ಸೇರಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ನಾಗಪುರ ಗ್ಯಾಂಗ್‌?:

ಮಹಾರಾಷ್ಟ್ರದ ನಾಗಪುರ ಮೂಲದ ದರೋಡೆಕೋರರ ಗ್ಯಾಂಗ್‌ ಇದಾಗಿದ್ದು, ಅಪರಾಧ ಜಗತ್ತಿನಲ್ಲಿ ನಾಗಪುರ ಗ್ಯಾಂಗ್‌ ಎಂದೇ ಕುಖ್ಯಾತಿ ಪಡೆದಿದೆ. ಈ ಗ್ಯಾಂಗ್‌ನ ಸದಸ್ಯರು ಮಹಾರಾಷ್ಟ್ರದಿಂದ ಸ್ವಂತ ವಾಹನಗಳಲ್ಲಿ ನೆರೆಯ ರಾಜ್ಯಗಳಿಗೆ ತೆರಳಿ ಸರಗಳವು, ಮನೆಗಳವು, ದರೋಡೆ ಸೇರಿದಂತೆ ವಿವಿಧ ಅಪರಾಧ ಕೃತ್ಯ ಎಸೆಗುತ್ತಾರೆ. ಬಳಿಕ ಕದ್ದ ಮಾಲುಗಳೊಂದಿಗೆ ನಾಗಪುರಕ್ಕೆ ತೆರಳಿ ವಿಲೇವಾರಿ ಮಾಡುತ್ತಾರೆ. ಇವರು ಒಮ್ಮೆ ಬಂದರೆ, ಐದಾರು ಅಪರಾಧ ಕೃತ್ಯಗಳನ್ನು ಮಾಡಿಯೇ ಪರಾರಿಯಾಗುತ್ತಾರೆ. ಇನ್ನು ಆರು ತಿಂಗಳು ಅಥವಾ ವರ್ಷ ಆ ಕಡೆಗೆ ಬರುವುದಿಲ್ಲ. ಈ ಗ್ಯಾಂಗ್‌ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿಯೂ ಅಪರಾಧ ಕೃತ್ಯಗಳಲ್ಲಿ ತೊಡಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ