ಲೈಂಗಿಕತೆಗೆ ಸಹಕರಿಸದ ಮಹಿಳಾ ಟೆಕ್ಕಿಯನ್ನು ಕೊಂದ ನೆರೆಮನೆಯ ಯುವಕ

KannadaprabhaNewsNetwork |  
Published : Jan 12, 2026, 04:00 AM IST
carnal | Kannada Prabha

ಸಾರಾಂಶ

ಇತ್ತೀಚೆಗೆ ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿಗೆ ನೆರೆ ಮನೆಯ ಪಿಯುಸಿ ವಿದ್ಯಾರ್ಥಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ, ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿಗೆ ನೆರೆ ಮನೆಯ ಪಿಯುಸಿ ವಿದ್ಯಾರ್ಥಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ, ಹಲ್ಲೆ ನಡೆಸಿ ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಈ ಸಂಬಂಧ ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ಕರ್ನಾಲ್‌ ಕುರೈ(18) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಜ.3ರಂದು ಶರ್ಮಿಳಾ(34) ಮೇಲೆ ಹಲ್ಲೆ ನಡೆಸಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನ ಕಾವೂರು ಮೂಲದ ಶರ್ಮಿಳಾ ಒಂದೂವರೆ ವರ್ಷದಿಂದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದರು. ಸಮೀಪದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಜೆಯಿದ್ದುದರಿಂದ ಈಕೆಯ ಸ್ನೇಹಿತೆ ಊರಿಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಒಬ್ಬರೇ ಇದ್ದರು. ಪಕ್ಕದ ಫ್ಲ್ಯಾಟ್‌ನಲ್ಲಿ ತಾಯಿ ಜತೆ ವಾಸವಾಗಿದ್ದ ಆರೋಪಿಗೆ ಶರ್ಮಿಳಾ ಮತ್ತು ಆಕೆ ಸ್ನೇಹಿತೆಯ ಪರಿಚಯವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶರ್ಮಿಳಾ ಕಿಟಕಿ ಮೂಲಕ ಬಂದಿದ್ದ ಆರೋಪಿ:

ಜ.3ರಂದು ಸಂಜೆ ಶರ್ಮಿಳಾ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಆರೋಪಿ, ಸ್ಲೈಡ್‌ ಕಿಟಕಿ ಮೂಲಕ ಮನೆ ಪ್ರವೇಶಿಸಿ ಶರ್ಮಿಳಾರನ್ನು ತಬ್ಬಿಕೊಂಡಿದ್ದ. ಗಾಬರಿಗೊಂಡ ಆಕೆ ಜೋರಾಗಿ ಕೂಗಿಕೊಂಡು ಆತನನ್ನು ದೂರ ತಳ್ಳಿದ್ದರು. ಆದರೂ ಆತ ದೈಹಿಕವಾಗಿ ತನಗೆ ಸಹಕಾರ ನೀಡುವಂತೆ ಪೀಡಿಸಿದ್ದ. ಆಗ ಕೋಪಗೊಂಡ ಶರ್ಮಿಳಾ ಆರೋಪಿಗೆ ಎಚ್ಚರಿಕೆ ನೀಡಿ ಮನೆಯಿಂದ ಹೊರಗಡೆ ಹೋಗುವಂತೆ ಎಚ್ಚರಿಕೆ ನೀಡಿದ್ದರು. ಅದರಿಂದ ವಿಚಲಿತಗೊಂಡ ಆರೋಪಿ, ಏಕಾಏಕಿ ಶರ್ಮಿಳಾ ಮೇಲೆ ಹಲ್ಲೆ ನಡೆಸಿದ್ದರಿಂದ ಕುತ್ತಿಗೆ ಮತ್ತು ಕೈಗಳಿಗೆ ಗಾಯವಾಗಿತ್ತು. ಬಳಿಕ ಆಕೆಯ ಮೂಗು ಮತ್ತು ಬಾಯಿ ಮುಚ್ಚಿದ್ದ. ಕ್ಷಣಾರ್ಧದಲ್ಲೇ ಆಕೆಯ ಮೂಗಿನಿಂದ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದರು. ರಕ್ತ ಆಕೆ ಬಟ್ಟೆ ಮೇಲೆ ಬಿದ್ದಿತ್ತು. ಗಾಬರಿಗೊಂಡ ಆರೋಪಿ,ರಕ್ತವಾಗಿದ್ದ ಬಟ್ಟೆ ಹಾಗೂ ಇತರೆ ಬಟ್ಟೆಗಳನ್ನು ಹಾಸಿಗೆ ಮೇಲೆ ಹಾಕಿ ಬೆಂಕಿ ಹಚ್ಚಿ, ಸ್ಲೈಡ್ ಕಿಟಕಿ ಮೂಲಕ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ವರದಿಯಲ್ಲಿ ಬಹಿರಂಗ: ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಿಂದ ಉಸಿರುಗಟ್ಟಿ ಶರ್ಮಿಳಾ ಮೃತಪಟ್ಟಿರಬಹುದು ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕುತ್ತಿಗೆ ಭಾಗ, ಕೈಗಳ ಮೇಲೆ ಬಲವಾದ ಗಾಯಗಳಾಗಿರುವುದು ಪತ್ತೆಯಾಗಿತ್ತು. ವೈದ್ಯರು, ಶರ್ಮಿಳಾ ಬೆಂಕಿಯ ಹೊಗೆಯಿಂದ ಪ್ರಜ್ಞೆ ಕಳೆದುಕೊಂಡಿಲ್ಲ. ಅದಕ್ಕಿಂತ ಮೊದಲೇ ಈಕೆ ಮೇಲೆ ಹಲ್ಲೆ ನಡೆಸಿ, ಉಸಿರುಗಟ್ಟಿಸಲಾಗಿದೆ. ಜತೆಗೆ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನ ನಡೆದಾಗ ಹಲ್ಲೆ ಆಗಿರುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದರು.

ಟೆಕ್ಕಿ ಮೇಲೆ ಪ್ರೇಮಾಂಕುರ:

ತನಿಖೆ ಆರಂಭಿಸಿದ ಪೊಲೀಸರು, ಫ್ಲ್ಯಾಟ್‌ನಲ್ಲಿದ್ದ ಕೆಲ ಅಸ್ಸಾಂ ಮೂಲದ ನಾಲ್ಕೈದು ಮಂದಿ ಯುವಕರನ್ನು ‍‍‍‍ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಅನುಮಾನದ ಮೇರೆಗೆ ಕರ್ನಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದ. ನನಗೆ ಆಕೆಯ ಮೇಲೆ ಪ್ರೇಮಾಂಕುರವಾಗಿತ್ತು. ಆಕೆ ನಿರಾಕರಿಸಿದಳು ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿನಗರ ಠಾಣೆ ಪೊಲೀಸರು, ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ
ಬೆತ್ತಲೆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಯುವಕನಿಂದ 1.5 ಲಕ್ಷ ರು. ಸುಲಿಗೆ