ಬೆಂಗಳೂರು ಜಿಲ್ಲೆಯ ಆನೇಕಲ್‌ ಜಿಗಣಿಯಲ್ಲಿದ್ದ ಪಾಕಿಸ್ತಾನ ಪ್ರಜೆಯ ಬಾಂಗ್ಲಾ ಕುಟುಂಬ ಸೆರೆ!

KannadaprabhaNewsNetwork |  
Published : Oct 01, 2024, 01:19 AM ISTUpdated : Oct 01, 2024, 04:41 AM IST
arrest

ಸಾರಾಂಶ

ಬೆಂಗಳೂರು ಗ್ರಾಮಾಂತರ ಪೊಲೀಸರು ಪಾಕಿಸ್ತಾನದ ಪ್ರಜೆ ಮತ್ತು ಆತನ ಬಾಂಗ್ಲಾ ಪತ್ನಿಯನ್ನು ನಕಲಿ ದಾಖಲೆಗಳ ಆರೋಪದ ಮೇಲೆ ಬಂಧಿಸಿದ್ದಾರೆ. ದಂಪತಿ ಜೊತೆಗಿದ್ದ ಮಹಿಳೆಯ ತಂದೆ-ತಾಯಿಯನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಭಾರತದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ಆನೇಕಲ್ : ಉಲ್ಫಾ ಸಂಘಟನೆಯ ಶಂಕಿತ ಉಗ್ರನ ಬಂಧನ ಬೆನ್ನಲ್ಲೇ ಈಗ ಪಾಕಿಸ್ತಾನದ ಪ್ರಜೆಯೊಬ್ಬನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈತನ ಪತ್ನಿ ಬಾಂಗ್ಲಾ ಪ್ರಜೆಯನ್ನೂ ಕೂಡ ಬಂಧಿಸಲಾಗಿದೆ. ಇವರೊಂದಿಗೆ ಇದ್ದ ಆಕೆಯ ತಂದೆ, ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನದಿಂದ ಬಂದು ಬೆಂಗಳೂರು ಜಿಲ್ಲೆಯ ಆನೇಕಲ್‌ ತಾಲೂಕಿನ ಜಿಗಣಿಯಲ್ಲಿ ಹಿಂದುಗಳ ಹೆಸರಿಟ್ಟುಕೊಂಡು ಇವರೆಲ್ಲರೂ ವಾಸವಾಗಿದ್ದರು.

ಪಾಕಿಸ್ತಾನದ ಕರಾಚಿ ಬಳಿಯ ಲಿಯಾಖತಾಬಾದ್‌ ನಿವಾಸಿ, ರಶೀದ್‌ ಅಲಿ ಸಿದ್ದಿಕಿ(51), ಈತನ ಪತ್ನಿ ಬಾಂಗ್ಲಾ ದೇಶದ ಆಯೇಷಾ(38) ಬಂಧಿತರು. ಇವರೊಂದಿಗೆ ಇದ್ದ ಆಯೇಷಾಳ ತಂದೆ ಮಹಮ್ಮದ್ ಹನೀಫ್ (76), ತಾಯಿ ರುಬಿನಾ (60)ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಪೊಲೀಸರ ಸುಪರ್ಧಿಯಲ್ಲಿ ಇರಿಸಲಾಗಿದೆ. ಆತನ ಮನೆಯಲ್ಲಿದ್ದ ಲ್ಯಾಪ್ ಟಾಪ್, ಟಿವಿ, ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ. ರಶೀದ್‌ ಮತ್ತು ಆಯೇಷಾಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆದ ವಿಚಾರದಲ್ಲಿ ಅರೆಸ್ಟ್ ಆದ ಮೊಹಮ್ಮದ್ ಯೂನೀಸ್ ಹಾಗೂ ಜೈನಾಬ್ ನೂರ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇವರು ನೀಡಿದ ಸುಳಿವನ್ನು ಆಧರಿಸಿ ಕೇಂದ್ರ ಗುಪ್ತಚರ ಇಲಾಖೆ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಭಾನುವಾರ ತಡರಾತ್ರಿ ಜಿಗಣಿ ಇನ್‌ಸ್ಪೆಕ್ಟರ್‌ ಮಂಜುನಾಥ್‌ ತನ್ನ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ರಶೀದ್‌, ಆಯೇಷಾಳನ್ನು ಬಂಧಿಸಿದ್ದಾರೆ. ರಶೀದ್‌ ತನ್ನ ಹೆಸರನ್ನು ಶಂಕರ್‌ ಶರ್ಮಾ, ಆಯೇಷಾ (ಆಶಾ ಶರ್ಮಾ), ಮಹಮ್ಮದ್‌ ಹನೀಫ್‌ (ರಾಮ್ ಬಾಬು), ರುಬಿನಾ (ರಾಣಿ) ಎಂದು ಹೆಸರು ಬದಲಿಸಿಕೊಂಡಿದ್ದರು. ರಶೀದ್‌ ಪಾಕಿಸ್ತಾನದಲ್ಲಿ ಧರ್ಮ ಪ್ರಚಾರಕನಾಗಿದ್ದ. ಆತ ಮೆಹದಿ ಪಂಥದ ಅನುಯಾಯಿ ಆಗಿದ್ದ ಎಂದು ಡಿವೈಎಸ್‌ಪಿ ಮೋಹನ್‌ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಧರ್ಮ ಪ್ರಚಾರಕರ ಮೇಲೆ ದಾಳಿ ಹೆಚ್ಚಿದ್ದರಿಂದ ಬಾಂಗ್ಲಾ ದೇಶದ ಡಾಕ್ಕಾಕ್ಕೆ ಹೋಗಿದ್ದೆ. ಅಲ್ಲಿ ಆಯೇಷಾಳನ್ನು ಮದುವೆ ಆದೆ. ಅಲ್ಲಿಯೂ ತನ್ನ ಮೇಲೆ ದಾಳಿ ಹೆಚ್ಚಿದ್ದರಿಂದ ಪಶ್ಚಿಮ ಬಂಗಾಳದ ಏಜೆಂಟ್‌ ಮೂಲಕ ಭಾರತಕ್ಕೆ 2011ರಲ್ಲಿ ಆಗಮಿಸಿದೆ. ದೆಹಲಿಯಲ್ಲಿ ಹಿಂದೂ ಹೆಸರನ್ನು ಇಟ್ಟಕೊಂಡು ಆಧಾರ್‌, ಪಾಸ್‌ಪೋರ್ಟ್‌ ಇನ್ನಿತರ ದಾಖಲೆ ಪಡೆದುಕೊಂಡೆ. ಬಳಿಕ 2018ರಲ್ಲಿ ಬೆಂಗಳೂರಿನ ಜಿಗಣಿಯ ಅಪಾರ್ಟ್‌ಮೆಂಟ್‌ನ ಡೂಪ್ಲೆಕ್ಸ್‌ ಮನೆಯಲ್ಲಿ ವಾಸವಾಗಿದ್ದೇವೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಮೆಹದಿ ಫೌಂಡೇಷನ್‌:

ರಶೀದ್ ಪಾಕಿಸ್ತಾನದಲ್ಲಿ ಧರ್ಮಗುರು ಗೋಹರ್‌ ಸಾಹಿಯ ಅನುಯಾಯಿ ಆಗಿದ್ದ. ಆತನ ಹಿಂದೂ ಹೆಸರು ಇಟ್ಟಿಕೊಂಡರೂ ಜಿಗಣಿಯ ತನ್ನ ಮನೆ ಮುಂದೆ ಮೆಹದಿ ಫೌಂಡೇಷನ್‌ JASHAN-E-YOUNUS ಎಂದು ಬರೆದಿದ್ದ. ಮನೆಯಲ್ಲಿ ಗೋಹರ್‌ ಸಾಹಿಯ ಫೋಟೋ ಕೂಡ ಸಿಕ್ಕಿದೆ. ಜಿಗಣಿಯಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದ ರಶೀದ್, ಗೋಹರ್‌ ಸಾಹಿ ಪ್ರಚಾರ ಮಾಡುವ ಅಲ್ರಾ ಟೀವಿಯನ್ನು ವೀಕ್ಷಿಸುವಂತೆ ಪ್ರಚೋದಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂದೂ ಹೆಸರಿನಲ್ಲಿ ಆಧಾರ್‌, ಪಾಸ್‌ಪೋರ್ಟ್‌

ರಶೀದ್‌ ತನ್ನ ಕುಟುಂಬದ ಸದಸ್ಯರಿಗೆ ಹಿಂದೂ ಹೆಸರು ಇಟ್ಟುಕೊಂಡಿದ್ದ. ರಶೀದ್‌, ಆಯೇಷಾ, ಹನೀಫ್‌, ರುಬಿನಾ ಬಳಿ ಭಾರತದ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌ ಸಿಕ್ಕಿದೆ. ರಶೀದ್‌ ಪಾಸ್‌ಪೋರ್ಟ್ (R2848031), ಆಧಾರ್ ಕಾರ್ಡ್(4748 3593 4624) ಇದೆ. ಅಲ್ಲದೆ ಹೆಂಡತಿ ಆಶಾ ಶರ್ಮಾ ಹೆಸರಿನಲ್ಲಿ ಭಾರತೀಯ ಪಾಸ್ ಪೋರ್ಟ್ (R2848545), ಆಧಾರ್ ಕಾರ್ಡ್ (9569 1922 2506) ಇದೆ. ಅತ್ತೆ ರಾಣಿ ಶರ್ಮಾ ಬಳಿ ಭಾರತೀಯ ಪಾಸ್ಪೋರ್ಟ್ (V1751374), ಅಧಾರ್ ಕಾರ್ಡ್(5268 5165 0617) ಇದೆ. ಮಾವ ರಾಮ್ ಬಾಬು ಶರ್ಮಾ ಬಳಿಯು ಭಾರತೀಯ ಪಾಸ್ ಪೋರ್ಟ್ (V1749485) ಆಧಾರ್ ಕಾರ್ಡ್(8481 4306 0039) ಪತ್ತೆ ಆಗಿದೆ. ಜಿಗಣಿ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೌಡಾಯಿಸಿದ ರಕ್ಷಣಾ ದಳಗಳು

ಫೌಂಡೇಶನ್ ಹೆಸರಿನಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದ ರಶೀದ್‌, ಭಾರತಕ್ಕೆ ಹೇಗೆ ನುಸುಳಿ ಬಂದರು, ಯಾರ ಸಹಾಯ ಪಡೆದರು ಎಂಬುದು ತನಿಖೆಯಿಂದ ತಿಳಿಯಲಿದೆ ಎಂದು ಡಿವೈಎಸ್ಪಿ ಮೋಹನ್ ತಿಳಿಸಿದ್ದಾರೆ. ಇವರು ವಾಹನಗಳಿಗೆ ಒಲಿಂಗ್ ಆಯಿಲಿಂಗ್‌, ಗ್ರೀಸ್ ಹಚ್ಚುವ ಕಾಯಕ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಬಂಧನ ವಿಷಯ ತಿಳಿದ ಐಬಿ, ಎನ್‌ಐಎ ತಂಡ ಜಿಗಣಿಗೆ ಧಾವಿಸಿದೆ. ರಶೀದ್ ಕುಟುಂಬವನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾವೆ. ಇವರಿಗೆ ಸ್ಥಳೀಯ ಮುಸ್ಲಿಂ ಧರ್ಮ ಗುರುಗಳು ಆರ್ಥಿಕ ನೆರವು ನೀಡಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ ಎಂದು ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್ ತಿಳಿಸಿದ್ದಾರೆ. ರಶೀದ್‌ನಿಂದ ವಶಕ್ಕೆ ಪಡೆದ ಲ್ಯಾಪ್ ಟಾಪ್‌ನಲ್ಲಿನ ಡೇಟಾ ಪರಿಶೀಲನೆ ಮಾಡಲು ಸಿದ್ದತೆ ನಡೆಸಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು