ನಾಗಮಂಗಲ : ಪ್ಯಾಸೆಂಜರ್ ಆಟೋರಿಕ್ಷಾಗೆ ಈಚರ್ ಗೂಡ್ಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ತಿರುಮಲಾಪುರ ಗೇಟ್ ಬಳಿ ಇರುವ ಎಂಟಿಆರ್ ಹೋಟೆಲ್ ಮುಂಭಾಗ ಭಾನುವಾರ ತಡರಾತ್ರಿ ಸಂಭವಿಸಿದೆ.
ತಾಲೂಕಿನ ಬೆಳ್ಳೂರು ಪಟ್ಟಣದ ಡಾ.ಅಂಬೇಡ್ಕರ್ ಕಾಲೋನಿ ವಾಸಿ ಚಂದ್ರು(23) ಘಟನೆಯಲ್ಲಿ ಸಾವನ್ನಪ್ಪಿರುವ ನತದೃಷ್ಟ ಯುವಕ. ಈತನೊಂದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮಾಗಡಿ ತಾಲೂಕಿನ ಸೋಲೂರಿನಲ್ಲಿ ನಡೆದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಜಾನಪದ ಕಲಾ ಪ್ರದರ್ಶನ ಮುಗಿಸಿಕೊಂಡು ಚಂದ್ರು ಸೇರಿ ಒಟ್ಟು ಆರು ಮಂದಿ ಪ್ಯಾಸೆಂಜರ್ ಆಟೋ ರಿಕ್ಷಾದಲ್ಲಿ ಭಾನುವಾರ ತಡರಾತ್ರಿ ಬೆಳ್ಳೂರಿಗೆ ವಾಪಸ್ ಬರುತ್ತಿದ್ದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಈಚರ್ ಗೂಡ್ಸ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್ ಮತ್ತು ಸಿಬ್ಬಂದಿ ಗಾಯಾಳುಗಳನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ, ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಚಂದ್ರು ಮೃತದೇಹವನ್ನು ಇದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.
ಸೋಮವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಂದ್ರು ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.
ರಸ್ತೆ ಅಪಘಾತ: ಬೈಕ್ ಸವಾರ ಸಾವು
ಹಲಗೂರು: ಮೋಟಾರು ಬೈಕ್ ಮತ್ತು ಕಾರು ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ-948 ರಲ್ಲಿನ ಬಾಳೆ ಹೊನ್ನಿಗಾ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ.
ಗ್ರಾಮದ ಗೋಪಾಲ (52) ಮೃತ ವ್ಯಕ್ತಿ. ಕಾರ್ಯನಿಮಿತ್ತ ದಳವಾಯಿ ಕೋಡಿಹಳ್ಳಿಗೆ ತೆರಳಿದ್ದ ಗೋಪಾಲ ಅವರು ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಹಲಗೂರು ಕಡೆಯಿಂದ ಬಂದ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡ ಗೋಪಾಲ ಅವರನ್ನು ಹಾರೋಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಬೈಕ್ ಹಿಂಬದಿ ಸವಾರ ವೆಂಕಟಯ್ಯ ಸಹ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.