ಕಾರ್ಮಿಕರಿಂದ ಸಂಗ್ರಹಿಸಿದ್ದ ಪಿಎಫ್‌ ಹಣ ಬಾಕಿ : ಕ್ರಿಕೆಟರ್‌ ರಾಬಿನ್‌ ಉತ್ತಪ್ಪ ಬಂಧನಕ್ಕೆ ವಾರಂಟ್‌

KannadaprabhaNewsNetwork |  
Published : Dec 22, 2024, 01:30 AM ISTUpdated : Dec 22, 2024, 04:26 AM IST
ರಾಬಿನ್‌ ಉತ್ತಪ್ಪ  | Kannada Prabha

ಸಾರಾಂಶ

ಕಾರ್ಮಿಕರಿಂದ ಸಂಗ್ರಹಿಸಿದ್ದ ಭವಿಷ್ಯ ನಿಧಿ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡದ ಸೆಂಚುರಿ ಲೈಫ್‌ಸ್ಟೈಲ್‌ ಕಂಪನಿಯ ನಿರ್ದೇಶಕ ರಾಬಿನ್‌ ಉತ್ತಪ್ಪ ಬಂಧನಕ್ಕೆ ವಾರಂಟ್‌ ನೀಡಲಾಗಿದೆ.

 ಬೆಂಗಳೂರು : ಕಾರ್ಮಿಕರಿಂದ ಕಡಿತಗೊಳಿಸಿದ್ದ ಭವಿಷ್ಯ ನಿಧಿ (ಪಿಎಫ್‌) ಹಣವನ್ನು ಸರ್ಕಾರಕ್ಕೆ ಜಮಾ ಮಾಡದೇ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಅವರ ಬಂಧನಕ್ಕೆ ವಾರೆಂಟ್‌ ಹೊರಡಿಸಲಾಗಿದೆ.

ರಾಬಿನ್‌ ಉತ್ತಪ್ಪ ಅವರು ಸೆಂಚುರೀಸ್‌ ಲೈಫ್‌ಸ್ಟೈಲ್‌ ಬ್ರಾಂಡ್ಸ್‌ ಕಂಪನಿಯ ನಿರ್ದೇಶಕರಾಗಿದ್ದು ಕಾರ್ಮಿಕರ ಸಂಬಳದಲ್ಲಿ ₹23.36 ಲಕ್ಷವನ್ನು ಉದ್ಯೋಗಿಗಳ ಭವಿಷ್ಯ ನಿಧಿಗೆ ಕಡಿತ ಮಾಡಿ ಸಂಗ್ರಹಿಸಲಾಗಿದೆ. ಆದರೆ ಇದನ್ನು ಸರ್ಕಾರಕ್ಕೆ ಪಾವತಿಸದೇ ವಂಚಿಸಿದ್ದಾರೆ ಎಂದು ಪಿಎಫ್ಓ ಪ್ರಾದೇಶಿಕ ಭವಿಷ್ಯ ನಿಧಿ-2ರ ಆಯುಕ್ತ ಷಡಾಕ್ಷರ ಗೋಪಾಲರೆಡ್ಡಿ ಅವರು ವಾರೆಂಟ್‌ ಹೊರಡಿಸಿದ್ದಾರೆ.

ಪ್ರಸ್ತುತ ವಿಳಾಸದಲ್ಲಿಲ್ಲ ಉತ್ತಪ್ಪ:

ರಾಬಿನ್‌ ಉತ್ತಪ್ಪ ಅವರು ಬೆಂಗಳೂರಿನ ಪುಲಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಗೋಪಾಲರೆಡ್ಡಿ ಅವರು ಡಿ.4ರಂದು ವಾರೆಂಟ್‌ ಹೊರಡಿಸಿ ಪುಲಕೇಶಿ ನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಆದರೆ ‘ಉತ್ತಪ್ಪ ಅವರು ಪ್ರಸ್ತುತ ಈ ವಿಳಾಸದಲ್ಲಿ ವಾಸವಾಗಿಲ್ಲ. ಮನೆ ಖಾಲಿ ಮಾಡಿ ಒಂದು ವರ್ಷವಾಗಿದೆ. ಆದ್ದರಿಂದ ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದು ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನನಗೂ ಕಂಪನಿಗಳಿಗೂ ಸಂಬಂಧವಿಲ್ಲ: ಉತ್ತಪ್ಪಬಂಧನ ವಾರೆಂಟ್‌ ಜಾರಿ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆ ನೀಡಿರುವ ಉತ್ತಪ್ಪ ಅವರು, ತಮಗೆ ಕಂಪನಿಗಳ ಜೊತೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ‘ಹಣಕಾಸಿನ ನೆರವಿನ ಕಾರಣಕ್ಕೆ ಸ್ಟಾಬೆರ್ರಿ ಲೆನ್ಸೆರಿಯಾ ಪ್ರೈವೇಟ್‌ ಲಿ., ಸೆಂಟಾರಸ್‌ ಲೈಫ್‌ಸ್ಟೈಲ್‌ ಬ್ರಾಂಡ್ಸ್‌ ಪ್ರೈವೇಟ್‌ ಲಿ., ಬೆರ್ರಿಜ್‌ ಫ್ಯಾಶನ್‌ ಹೌಸ್‌ ಕಂಪನಿಗಳಿಗೆ ನಾನು 2018-19ರಲ್ಲಿ ನಿರ್ದೇಶಕನಾಗಿ ನೇಮಕಗೊಂಡಿದ್ದೆ. 

ಆದರೆ, ಕಾರ್ಯಕನಿರ್ವಾಹಕನಾಗಿ ಇರಲಿಲ್ಲ ಮತ್ತು ಕಂಪನಿಯ ದೈನಂದಿನ ವ್ಯವಹಾರದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ. ಈ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರುಪಾವತಿಸಲು ವಿಫಲವಾಗಿವೆ. ಈಗ ಅದು ನ್ಯಾಯಾಲಯದಲ್ಲಿದೆ. ಅಲ್ಲದೆ ಕಂಪನಿಯ ನಿರ್ದೇಶಕ ಹುದ್ದೆಗೆ ಕೆಲ ವರ್ಷಗಳ ಹಿಂದೆಯೇ ನಾನು ರಾಜೀನಾಮೆ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

‘ಕಂಪನಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ್ದಕ್ಕೆ ನನ್ನ ಕಾನೂನು ತಂಡ ಈಗಾಗಲೇ ಉತ್ತರ ನೀಡಿದೆ. ಕಂಪನಿ ಜೊತೆ ನನಗೆ ಸಂಬಂಧವಿಲ್ಲ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ನನ್ನ ವಿಚಾರದಲ್ಲಿ ಸರಿಯಾದ ಮಾಹಿತಿ ಇಲ್ಲದೆ ಸುದ್ದಿ ಹರಡದಿರಿ’ ಎಂದು ಉತ್ತಪ್ಪ ವಿನಂತಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!