ಪೋಕ್ಸೋ ಕೇಸಲ್ಲಿ ಬಿಎಸ್‌ವೈ ವಿರುದ್ಧ ಚಾರ್ಜ್‌ಶೀಟ್‌

KannadaprabhaNewsNetwork |  
Published : Jun 28, 2024, 12:57 AM ISTUpdated : Jun 28, 2024, 04:34 AM IST
ಬಿ.ಎಸ್‌.ಯಡಿಯೂರಪ್ಪ | Kannada Prabha

ಸಾರಾಂಶ

ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ (ಪೋಕ್ಸೋ) ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮೂವರು ಬೆಂಬಲಿಗರ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಗುರುವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

 ಬೆಂಗಳೂರು : ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ (ಪೋಕ್ಸೋ) ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮೂವರು ಬೆಂಬಲಿಗರ ವಿರುದ್ಧ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಗುರುವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಕೃತ್ಯ ಬೆಳಕಿಗೆ ಬಾರದಂತೆ ಸಾಕ್ಷ್ಯ ನಾಶ ಹಾಗೂ ಸಂತ್ರಸ್ತೆಗೆ ಹಣದ ಆಮಿಷವೊಡ್ಡಿದ್ದ ಆರೋಪಗಳು ಸಾಬೀತಾಗಿವೆ ಎಂದು ಸಿಐಡಿ ಉಲ್ಲೇಖಿಸಿದೆ.

ಅದೇ ರೀತಿ ಯಡಿಯೂರಪ್ಪ ಅವರ ಬೆಂಬಲಿಗರಾದ ವೈ.ಎಂ.ಅರುಣ್‌, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಎಂ.ರುದ್ರೇಶ್‌ ಹಾಗೂ ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ ವಿರುದ್ಧ ಕೃತ್ಯ ಬೆಳಕಿಗೆ ಬಾರದಂತೆ ಸಾಕ್ಷ್ಯ ನಾಶ ಮಾಡಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ಆರೋಪಪಟ್ಟಿಯಲ್ಲಿ ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

730 ಪುಟಗಳು, 74 ಸಾಕ್ಷಿಗಳ ಹೇಳಿಕೆ:

ತಮ್ಮ ಮನೆಗೆ ಸಹಾಯ ಕೋರಿ ತಾಯಿ ಜತೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಇದೇ ವರ್ಷದ ಮಾರ್ಚ್‌ನಲ್ಲಿ ಯಡಿಯೂರಪ್ಪ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಯಿತು. ಬಳಿಕ ಪ್ರಕರಣದ ಕುರಿತು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.

ಅಂತೆಯೇ ಮೂರೂವರೆ ತಿಂಗಳ ಸುದೀರ್ಘ ತನಿಖೆ ನಡೆಸಿದ ಸಿಐಡಿ, ಈಗ ಯಡಿಯೂರಪ್ಪ ಹಾಗೂ ಅವರ ಮೂವರು ಬೆಂಬಲಿಗರ ವಿರುದ್ಧ ನ್ಯಾಯಾಲಯಕ್ಕೆ 750 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಸಂತ್ರಸ್ತೆ, ಆಕೆಯ ಮೃತ ತಾಯಿ ಹಾಗೂ ಮಾಜಿ ಸಿಎಂ ಮನೆ ಭದ್ರತಾ ಸಿಬ್ಬಂದಿ ಸೇರಿದಂತೆ 71 ಜನರ ಸಾಕ್ಷಿ ಹೇಳಿಕೆ, ಮಾಜಿ ಸಿಎಂ ಧ್ವನಿ ಪರೀಕ್ಷಾ ವರದಿ ಹಾಗೂ ಕೃತ್ಯದ ನಡೆದ ವೇಳೆ ಮಾಜಿ ಸಿಎಂ ಮತ್ತು ಸಂತ್ರಸ್ತೆ ತಾಯಿ ನಡುವೆ ಸಂಭಾಷಣೆಯ ವಿಡಿಯೋ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸೇರಿದಂತೆ ಇತರೆ ದಾಖಲೆಗಳನ್ನು ಸಿಐಡಿ ಸಲ್ಲಿಸಿದೆ.

ಬಾಲಕಿಗೆ ಹಣ ಕೊಟ್ಟಿದ್ದ ಬಿಎಸ್‌ವೈ:

ತಮ್ಮ ಮಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆಗೆ ಸಹಾಯ ಕೋರಿ ಯಡಿಯೂರಪ್ಪ ಅವರನ್ನು ಇದೇ ವರ್ಷದ ಫೆ.2 ರಂದು ಮಗಳ ಜತೆ ಸಂತ್ರಸ್ತೆ ತಾಯಿ ಭೇಟಿಯಾಗಿದ್ದರು. ಆ ವೇಳೆ 17 ವರ್ಷದ ಬಾ/ಲಕಿ ಜತೆ ಯಡಿಯೂರಪ್ಪ ಅವರು ಅನುಚಿತವಾಗಿ ವರ್ತಿಸಿದ್ದರು ಎನ್ನಲಾಗಿದೆ. ಅಲ್ಲದೆ ಕೃತ್ಯ ಎಸಗಿದ ಬಳಿಕ ಸಂತ್ರಸ್ತ ಬಾಲಕಿಗೆ ತಮ್ಮ ಜೇಬಿನಿಂದಲೇ ಹಣ ತೆಗೆದು ಕೊಟ್ಟಿದ್ದರು. ನಂತರ ತಮ್ಮ ಮೂವರು ಬೆಂಬಲಿಗರ ಮೂಲಕ ಸಂತ್ರಸ್ತೆ ತಾಯಿಯನ್ನು ಮನೆಗೆ ಕರೆಸಿಕೊಂಡು 2 ಲಕ್ಷ ರು.ಗಳನ್ನು ಕೊಟ್ಟಿದ್ದರು. ಅಲ್ಲದೆ ಸಂತ್ರಸ್ತೆ ತಾಯಿಯ ಮೊಬೈಲ್‌ನಲ್ಲಿದ್ದ ವಿಡಿಯೋ, ಫೇಸ್‌ಬುಕ್‌ನಲ್ಲಿ ಆಪ್‌ಲೋಡ್ ಮಾಡಿದ್ದ ವಿಡಿಯೋವನ್ನು ಸಹ ಯಡಿಯೂರಪ್ಪ ಬಲವಂತದಿಂದ ಅಳಿಸಿ ಹಾಕಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಅದೇ ಇನ್ನುಳಿದ ಮೂವರು ಆರೋಪಿಗಳು ಕೃತ್ಯದಲ್ಲಿ ಸಾಕ್ಷ್ಯ ನಾಶ ಹಾಗೂ ಹಣದ ಆಮಿಷವೊಡ್ಡಿರುವುದು ತನಿಖೆಯಲ್ಲಿ ಖಚಿತವಾಗಿದೆ ಎಂದು ಸಿಐಡಿ ಹೇಳಿದೆ.

ಸಂತ್ರಸ್ತೆ ತಾಯಿಯಿಂದ ಹಣ ಜಪ್ತಿ

ಈ ಕೃತ್ಯದ ಬಗ್ಗೆ ದೂರು ನೀಡದಂತೆ ಸಂತ್ರಸ್ತೆ ತಾಯಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ 2 ಲಕ್ಷ ರು.ಗಳ ಪೈಕಿ 35 ಸಾವಿರ ರು ಜಪ್ತಿಯಾಗಿದೆ. ಇನ್ನುಳಿದ ಹಣವನ್ನು ಸಂತ್ರಸ್ತೆ ತಾಯಿ ಖರ್ಚು ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. ಕೆಲ ತಿಂಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಸಂತ್ರಸ್ತೆ ತಾಯಿ ಮೃತಪಟ್ಟಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಎಕ್ಸ್ ಪ್ರೆಸ್ ವೇನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ
ಕದೀಮರಿಗೆ ಸಾರ್ವಜನಿಕರಿಂದ ಧರ್ಮದೇಟು..!