ನೋಟಿಸ್‌ ನೀಡದೆ ಬಂಧಿಸಿದ ಪೊಲೀಸರು : ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು - ಐಶ್ವರ್ಯ ಬಿಡುಗಡೆಗೆ ಆದೇಶ

KannadaprabhaNewsNetwork | Updated : Jan 07 2025, 04:19 AM IST

ಸಾರಾಂಶ

ಮತ್ತೊಂದು ವಂಚನೆ ಪ್ರಕರಣದಲ್ಲಿ ಐಶ್ವರ್ಯಗೌಡ ದಂಪತಿ ಬಂಧನದ ಬೆನ್ನಲ್ಲೇ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

 ಬೆಂಗಳೂರು : ಮತ್ತೊಂದು ವಂಚನೆ ಪ್ರಕರಣದಲ್ಲಿ ಐಶ್ವರ್ಯಗೌಡ ದಂಪತಿ ಬಂಧನದ ಬೆನ್ನಲ್ಲೇ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ಹೇಳಿಕೊಂಡು ಆರ್‌.ಆರ್‌.ನಗರ ನಿವಾಸಿ ಶಿಲ್ಪಾಗೌಡ ಎಂಬುವವರಿಂದ ₹3.25 ಕೋಟಿ ಹಣ ಹಾಗೂ 450 ಗ್ರಾಂ ಚಿನ್ನಾಭರಣ ಪಡೆದು ವಂಚನೆ ಆರೋಪ ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಸೋಮವಾರ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್‌ನನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್‌ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದೆ.

ವಾರಾಹಿ ವಲ್ಡ್‌ ಆಫ್‌ ಗೋಲ್ಡ್‌ ಚಿನ್ನದಂಗಡಿ ಮಾಲಕಿಯಿಂದ ₹8.41 ಕೋಟಿ ಮೌಲ್ಯದ ಚಿನ್ನಾಭರಣ ಸಾಲ ಪಡೆದು ವಂಚನೆ ಆರೋಪ ಪ್ರಕರಣ ಸಂಬಂಧ ಚಂದ್ರಾಲೇಔಟ್‌ ಠಾಣೆ ಪೊಲೀಸರು ಇತ್ತೀಗಷ್ಟೇ ಆರೋಪಿಗಳಾದ ಐಶ್ವರ್ಯಾ ಗೌಡ ದಂಪತಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಇದರ ಬೆನ್ನಲ್ಲೇ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಶಿಲ್ಪಾ ಗೌಡಗೆ ವಂಚನೆ ಪ್ರಕರಣದಲ್ಲಿ ಐಶ್ವರ್ಯಾ ದಂಪತಿಯನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿಯೂ ಆರೋಪಿಗಳು ಜಾಮೀನು ಪಡೆದಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳಿಗೆ ಮತ್ತೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಿದ್ದಾರೆ.

ಪ್ರಕರಣದ ಹಿನ್ನೆಲೆ:

ದೂರುದಾರರಾದ ಶಿಲ್ಪಾ ಗೌಡ ಅವರಿಗೆ ಎರಡು ವರ್ಷದ ಹಿಂದೆ ಪರಿಚಯವಾಗಿದ್ದ ಐಶ್ವರ್ಯ ಗೌಡ, ತಾನು ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ತಂಗಿ ಎಂದು ಹೇಳಿಕೊಂಡಿದ್ದರು. ತಾನು ಗೋಲ್ಡ್‌ ಬಿಜಿನೆಸ್‌, ಚಿಟ್‌ ಫಂಡ್‌ ವ್ಯವಹಾರ, ವಿಲ್ಲಾ ನಿರ್ಮಾಣ, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದೇನೆ. ಎಲ್ಲ ವ್ಯವಹಾರಗಳು ಲಾಭದಾಯಕವಾಗಿದ್ದು, ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಶಿಲ್ಪಾ ಗೌಡರನ್ನು ನಂಬಿಸಿದ್ದರು.

₹3.25 ಕೋಟಿ ವರ್ಗಾವಣೆ:

ಕೆಲ ದಿನಗಳ ಬಳಿಕ ಐಶ್ವರ್ಯಾ ಗೌಡ ತನ್ನ ಬಳಿ ಚಿನ್ನ ಖರೀದಿ ಮಾಡಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಕೊಡಿಸುವುದಾಗಿ ಹೇಳಿದ್ದರು. ಆಕೆಯ ಮಾತು ನಂಬಿದ ಶಿಲ್ಪಾ ಗೌಡ, ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಪಡೆದು ಸುಮಾರು 65 ಲಕ್ಷ ರು. ನಗದು ಹಾಗೂ 2.60 ಕೋಟಿ ರು. ಹಣವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದರು. 2022ರ ಜನವರಿಂದ ಈವರೆಗೆ ಒಟ್ಟು 3.25 ಕೋಟಿ ರು. ಹಣ ನೀಡಿದ್ದಾಗಿ ಶಿಲ್ಪಾ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚಿನ್ನ ಪಡೆದು ವಂಚನೆ:

ಈ ನಡುವೆ 2023ರ ಜೂನ್‌ನಲ್ಲಿ ಐಶ್ವರ್ಯಾ ಗೌಡ ತನ್ನ ವ್ಯವಹಾರಕ್ಕೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಶಿಲ್ಪಾ ಗೌಡರಿಂದ 430 ಗ್ರಾಂ ಚಿನ್ನಾಭರಣ ಪಡೆದಿದ್ದರು. ಇದಾದ ಬಳಿಕ ಶಿಲ್ಪಾ ಗೌಡ ಜತೆಗೆ ಸರಿಯಾಗಿ ಮಾತನಾಡದೆ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಕರೆ ಮಾಡಿ ಹಣ ಮತ್ತು ಚಿನ್ನಾಭರಣ ವಾಪಾಸ್‌ ನೀಡುವಂತೆ ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಜೀವ ಬೆದರಿಕೆ ಆರೋಪ:

ನನಗೆ ದೊಡ್ಡ ರಾಜಕಾರಣಿಗಳ ಬೆಂಬಲವಿದೆ. ನಿನಗೆ ಒಂದು ಗತಿ ಕಾಣಿಸುತ್ತೇನೆ. ಚಾರಿತ್ರ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮಾನ-ಮರ್ಯಾದೆ ತೆಗೆಯುತ್ತೇನೆ. ನಿನಗೆ ಒಂದು ಗತಿ ಕಾಣಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಿಲ್ಪಾ ಗೌಡ ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಆರ್.ಆರ್‌.ನಗರ ಠಾಣೆ ಪೊಲೀಸರು ಐಶ್ವರ್ಯಾ ದಂಪತಿಯನ್ನು ಬಂಧಿಸಿದ್ದರು.

Share this article